ಸಂಸದ ಅವಧಿ ಮುಗಿದ ನಂತರ ನಿವೃತ್ತಿಯ ಘೋಷಿಸಿದ ಬಿಜೆಪಿ ಮುಖಂಡ

By Kannadaprabha News  |  First Published Oct 18, 2022, 5:33 AM IST

ಒಳ ಮೀಸಲಾತಿ ಹೆಸರಿನಲ್ಲಿ ದಲಿತರನ್ನು ಒಡೆಯುತ್ತಿದ್ದು, ಇದು ಬ್ರಿಟಿಷರ ನೀತಿಗಿಂತಲೂ ಅಪಾಯಕಾರಿ ಎಂದು ಚಾಮರಾಜನ ಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅಭಿಪ್ರಾಯಪಟ್ಟರು.


ಮೈಸೂರು (ಅ.18):  ಒಳ ಮೀಸಲಾತಿ ಹೆಸರಿನಲ್ಲಿ ದಲಿತರನ್ನು ಒಡೆಯುತ್ತಿದ್ದು, ಇದು ಬ್ರಿಟಿಷರ ನೀತಿಗಿಂತಲೂ ಅಪಾಯಕಾರಿ ಎಂದು ಚಾಮರಾಜನ ಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ. ಬಸವರಾಜು ಹಾಗೂ ಮುಕ್ತ ವಿವಿಯಿಂದ ಪಿಎಚ್‌.ಡಿ ಪದವಿ ಪಡೆದ ಡಾ. ಕಲ್ಯಾಣಸಿರಿ ಭಂತೇಜಿ ಅವರನ್ನು ಅಭಿನಂದಿಸಿ ಮಾತನಾಡಿದರು.

Latest Videos

undefined

ವೋಟಿಗಾಗಿ ರಾಜಕಾರಣಿಗಳು ಮತ್ತು ರಾಜಕೀಯ (Politics ) ನಾಯಕರು ದಲಿತರನ್ನು (Dalit )  ಒಡೆಯುತ್ತಿದ್ದಾರೆ. ದಲಿತರನ್ನು ಎಡಗೈ, ಬಲಗೈ ಎಂದು ಒಡಕುಂಟು ಮಾಡಲಾಗುತ್ತಿದೆ. ಇದು ಮತ್ತೆ ಹಿಂದಕ್ಕೆ ಹೋಗುವ ಚಲನೆಯಂತೆ ಭಾಸವಾಗುತ್ತಿದೆ. ಮತಕ್ಕಾಗಿ ಈ ರೀತಿ ದಲಿತರನ್ನು ಒಡೆಯಬಾರದು. ಕೇವಲ ಅಸ್ಪೃಶ್ಯತೆ ನಿವಾರಿಸುವ ಮಾತುಗಳಿಂದ ಬದಲಾವಣೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ದೇಶದ ದಲಿತರ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಇಂದಿಗೂ ಹಳ್ಳಿಗಳಲ್ಲಿ ಪ್ರತ್ಯೇಕ ಕಾಲೋನಿಗಳಿವೆ. ನಗರಗಳಲ್ಲಿ ಸ್ಲಂಗಳಲ್ಲಿ ದಲಿತರು ಜೀವನ ನಡೆಸುತ್ತಿದ್ದಾರೆ. ಶಿಕ್ಷಣ, ಸಂಪತ್ತು, ಅಧಿಕಾರ ಇಲ್ಲದ ಈ ಸಮೂಹವನ್ನು ಯಾವ ರೀತಿ ಮುನ್ನೆಲೆಗೆ ತರಬೇಕು ಎಂಬುದರ ಕುರಿತು ಚರ್ಚಿಸಿರುವುದಾಗಿ ಅವರು ತಿಳಿಸಿದರು.

ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. 11 ರಲ್ಲಿ ಗೆಲುವು ಸಾಧಿಸಿದ್ದೇನೆ. ಸಂಸದನಾಗಿ 1.5 ವರ್ಷ ಪೂರ್ಣಗೊಳಿಸಿದರೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿಯಾಗುತ್ತೇನೆ ಎಂದರು.

ಇದಕ್ಕೂ ಮೊದಲು ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ , ಸಮಾಜ ಬದಲಾಗಿ ಸರಿ ದಾರಿಯಲ್ಲಿ ನಡೆಯಬೇಕಾದರೆ ತಪ್ಪು ಮಾಡಿದವರನ್ನು ಪುರಸ್ಕರಿಸುವ ಬದಲಿಗೆ, ಬಹಿಷ್ಕರಿಸುವ ಕೆಲಸ ಆಗಬೇಕು ಎಂದರು.

ಸಮಾಜದಲ್ಲಿ ಪ್ರಾಮಾಣಿಕರು, ಜನರ ಪರವಾಗಿ ಕಾಳಜಿ ಇರುವವರನ್ನು ಗಮನಿಸುವ ಬದಲಿಗೆ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವುದು ಹೆಚ್ಚಾಗಿದೆ. ಆದರೆ ಸಾಧನೆ ಮಾಡುವವರನ್ನು ಗುರುತಿಸಿ ಅಭಿನಂದಿಸುವುದು ಸಾಮಾಜಿಕ ಜವಾಬ್ದಾರಿ. ತಪ್ಪು ಮಾಡಿದವರನ್ನು ತಿರಸ್ಕರಿಸಬೇಕಾದ ಜನ ಅವರನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಕ್ಕೆ ಹೋಗಿ ಹಾರ ತುರಾಯಿ ಹಾಕಿ ಸಂಭ್ರಮಿಸುತ್ತಾರೆ. ಜೈಲಿಗೆ ಹೋದವರಿಗೆ ಇಷ್ಟುಗೌರವವೇ ಎಂದರೆ ಗಾಂಧೀಜಿ ಜೈಲಿಗೆ ಹೋಗಿಲ್ಲವೇ ಎಂದು ಸಮರ್ಥಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾನೂನು ಮೂಲಕ ಸಮಾಜ ಬದಲಾಯಿಸುವುದು ಕಷ್ಟ. ಜನರಿಗೆ ಕಾನೂನಿನ ಭಯವೂ ಇಲ್ಲ. ಜನರಿಗೆ ಜೈಲಿನ ಹೆದರಿಕೆ ಇಲ್ಲ. ಸಮಾಜ ಬಹಿಷ್ಕರಿಸುವುದಿಲ್ಲ. ದೇಶದ ಕಾನೂನಿನಲ್ಲಿ ಲೋಪವಿದೆ. ಶಿಕ್ಷೆಯಾಗಲು ಸುಮಾರು ವರ್ಷ ಬೇಕಾಗುತ್ತದೆ. ಅದರ ಬದಲಿಗೆ ತಪ್ಪು ಮಾಡಿದವರಿಗೆ ಬೇಗನ ಶಿಕ್ಷೆ ನೀಡುವಂತಗಾಬೇಕು. ನಾವು ತೃಪ್ತಿ ಮತ್ತು ಮಾನವೀಯ ಗಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ ಮಾತನಾಡಿ, ಸವಾಜ ಪರಿವರ್ತಿಸಲು ತುಂಬಾ ಕನ್ನಡಿಗಳಿವೆ. ಜನರ ಬೆಳವಣಿಗೆ ಆಗಲು ಮೊದಲು ಮನಸ್ಸು ಬೆಳೆಸಬೇಕು. ಪ್ರಸ್ತುತ ದಿನಗಳಲ್ಲಿ ಮನಸ್ಸನ್ನು ಕೆಡಿಸುವ ಚಟುವಟಿಕೆ ಹೆಚ್ಚಾಗಿದೆ. ಎಲ್ಲಾ ಜೀವಿಗಳನ್ನೂ ಗೌರವಿಸಲು ಗಮನ ಕೊಡಬೇಕು. ಮನುಷ್ಯರಾದ ಮೇಲೆ ತಮ್ಮ ಅಂತರಾಳದ ಹೃದಯದಲ್ಲಿ ಪ್ರೀತಿ ಮೈತ್ರಿ, ಕರುಣೆ ಹೊಂದಿರಬೇಕು ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ನೀಲಗಿರಿ ತಳವಾರ ಅವರು ಅಭಿನಂದನಾ ನುಡಿಗಳನ್ನಾಡಿದರು. ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ, ಭೋದಿರತ್ನ ಭಂತೇಜಿ, ಸಮಾನತೆ- ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನದ ಉಪಾಧ್ಯಕ್ಷ ಸಿ. ನಂದಕುಮಾರ್‌, ಟ್ರಸ್ಟಿಕುಂಬ್ರಹಳ್ಳಿ ಸುಬ್ಬಣ್ಣ ಇದ್ದರು.

ಸಮಾನತೆ ಪ್ರಕಾಶನದ ಪ್ರಕಾಶಕ ಭರತ್‌ ರಾಮಸ್ವಾಮಿ ಕಾಂುರ್‍ಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ. ಮುಳ್ಳೂರು ನಂಜುಂಡಸ್ವಾಮಿ ಸ್ವಾಗತಿಸಿದರು.

ಅಸ್ಪೃಶ್ಯತೆ ಮಾನಸಿಕ ಕಾಯಿಲೆ. ಹಿಂದೂ ಧರ್ಮ ಒಪ್ಪಿಕೊಳ್ಳುವುದೆಂದರೆ ಅಸಮಾನತೆ ಒಪ್ಪಿಕೊಂಡಂತೆ. ದಲಿತರು ಶತ ಶತಮಾನದಿಂದ ಶೋಷಣೆಗೆ ಒಳಗಾಗಿ ಪ್ರಪಾತದಿಂದ ಬರುವ ವರ್ಗ. ಜಾತೀಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶಾಂತಿ, ನೆಮ್ಮದಿ, ಸಹಬಾಳ್ವೆಗಾಗಿ ಅಂಬೇಡ್ಕರ್‌ ತೋರಿದ ಬುದ್ಧ ಮಾರ್ಗದಲ್ಲಿ ನಡೆಯಬೇಕು.

- ವಿ. ಶ್ರೀನಿವಾಸಪ್ರಸಾದ್‌, ಸಂಸದರು, ಚಾಮರಾಜನಗರ

click me!