ಲೈಸೆನ್ಸ್‌ಗೆ ಅಲೆಯಬೇಕಿಲ್ಲ : ಕುಳಿತಲ್ಲಿಯೇ ಸಿಗಲಿದೆ

By Kannadaprabha News  |  First Published Oct 18, 2022, 5:25 AM IST

ವ್ಯಾಪಾರಸ್ಥರು ಟ್ರೇಡ್‌ ಲೈಸನ್ಸ್‌ ಪಡೆಯಲು ನಗರ ಪಾಲಿಕೆ ಕಚೇರಿಗೆ ಅಲೆಯಬೇಕಿಲ್ಲ. ತಾವಿರುವ ಸ್ಥಳದಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಪಡೆಯಬಹುದು.


 ಮೈಸೂರು (ಅ.18):  ವ್ಯಾಪಾರಸ್ಥರು ಟ್ರೇಡ್‌ ಲೈಸನ್ಸ್‌ ಪಡೆಯಲು ನಗರ ಪಾಲಿಕೆ ಕಚೇರಿಗೆ ಅಲೆಯಬೇಕಿಲ್ಲ. ತಾವಿರುವ ಸ್ಥಳದಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಪಡೆಯಬಹುದು.

 ಮೈಸೂರು ನಗರ ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ಸೋಮವಾರ ಮೇಯರ್‌ (Mayor)  ಶಿವಕುಮಾರ್‌ ಅವರು ಟ್ರೇಡ್‌ ಮೂಲಕ ಆನ್‌ಲೈನ್‌ (Online) ವ್ಯವಸ್ಥೆ ಸರಳೀಕರಣಗೊಳಿಸಿರುವ ಕುರಿತು ವ್ಯಾಪಾರಸ್ಥರ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

Latest Videos

undefined

ವ್ಯಾಪಾರಸ್ಥರಿಗೆ (Traders)  ಪರವಾನಗಿ ಶುಲ್ಕ ಪಾವತಿಸಲು ಅನುಕೂಲವಾಗಲು ತೆರಿಗೆ ಪಾವತಿಯ ವ್ಯವಸ್ಥೆಯ ಸರಳೀಕರಣಗೊಳಿಸಿರುವ ಕುರಿತು ವ್ಯಾಪಾರಸ್ಥರು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಿದರು.

ನಗರದಲ್ಲಿ ವ್ಯಾಪಾರಸ್ಥರಿಗೆ ಟ್ರೆಡ್‌ ಲೈಸನ್ಸ್‌ ಪಡೆಯಲು ಇದ್ದ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ಇನ್ನೂ ಮುಂದೆ ವ್ಯಾಪಾರಸ್ಥರು, ಪಾಲಿಕೆ ಕಚೇರಿಗೆ ಬರದೇ ತಾವಿರುವ ಸ್ಥಳದಲ್ಲಿಯೇ ತಮ್ಮ ಟ್ರೇಡ್‌ ಲೈಸನ್ಸ್‌ ಸಂಖ್ಯೆ ನಮೂದಿಸಿ, ತೆರಿಗೆ ಪಾವತಿಸಬಹುದು. ಪಾವತಿಯ ರಸೀದಿಯ ಪ್ರಿಂಟ್‌ ಕೂಡ ಪಡೆಯಬಹುದಾಗಿದೆ ಎಂದರು.

ನಗರದಲ್ಲಿ 19 ಸಾವಿರ ಮಂದಿ ಟ್ರೆಡ್‌ ಲೈಸನ್ಸ್‌ದಾರರನ್ನು ಗುರುತಿಸಲಾಗಿದ್ದು, 10,500 ಮಂದಿ ವ್ಯಾಪಾರಸ್ಥರನ್ನು ಆನ್‌ಲೈನ್‌ ತೆರಿಗೆ ಪಾವತಿ ವ್ಯವಸ್ಥೆಗೆ ಅಪ್‌ಲೋಡ್‌ ಮಾಡಲಾಗಿದ್ದು, ಉಳಿದವುಗಳನ್ನು ಕೂಡ ಸದ್ಯದಲ್ಲಿಯೇ ಅಪ್‌ಲೋಡ್‌ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಉಪಮೇಯರ್‌ ಡಾ.ಜಿ. ರೂಪಾ ಯೋಗೇಶ್‌, ಮಾಜಿ ಮೇಯರ್‌ ಅಯೂಬ್‌ ಖಾನ್‌, ನಗರ ಪಾಲಿಕೆ ಸದಸ್ಯೆ ಅಶ್ವಿನಿ ಅನಂತು, ಆಯುಕ್ತ ಜಿ. ಲಕ್ಷ್ಮೀಕಾಂತ್‌ ರೆಡ್ಡಿ, ಆರೋಗ್ಯಾಧಿಕಾರಿ ಡಾ. ನಾಗರಾಜು, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್‌, ಮೈಸೂರು ಟ್ರೆಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪಿ. ಪ್ರಶಾಂತ್‌ ಗೌಡ, ಮೈಸೂರು ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಸತ್ಯ ನಾರಾಯಣ್‌ ಮೊದಲಾದವರು ಇದ್ದರು.

ಸಿಆರ್‌ ಪಡೆಯದ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಹೆಚ್ಚುವರಿ ಶುಲ್ಕ ವಿಧಿಸವುದನ್ನು ಸರಿಪಡಿಸುವ ಮೂಲಕ ವ್ಯಾಪಾರಸ್ಥರ ಹೊರೆ ಕಡಿಮೆ ಮಾಡಬೇಕು.

- ಸಿ. ನಾರಾಯಣಗೌಡ, ಅಧ್ಯಕ್ಷರು, ಮೈಸೂರು ಹೊಟೇಲ್‌ ಮಾಲೀಕರ ಸಂಘ.

ಟ್ರೆಡ್‌ ಲೈಸನ್ಸ್‌ ಶುಲ್ಕವನ್ನು ಯಾವ ಮಾನದಂಡ ಮೇಲೆ ನಿಗದಿಪಡಿಸಲಾಗಿದೆ ಎಂಬುದನ್ನು ತಿಳಿಸುವ ಮೂಲಕ ಆಗಿರುವ ಲೋಪದೋಷ ಸರಿಪಡಿಸಬೇಕು.

- ಪಿ. ಪ್ರಶಾಂತ್‌ಗೌಡ, ಅಧ್ಯಕ್ಷರು, ಮೈಸೂರು ಟ್ರೆಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ದಿ ಸಂಘ.

ವ್ಯಾಪಾರಸ್ಥರು ಟ್ರೇಡ್‌ ಲೈಸನ್ಸ್‌ ಪಡೆಯಲು ನಗರ ಪಾಲಿಕೆ ಕಚೇರಿಗೆ ಅಲೆಯಬೇಕಿಲ್ಲ.

ಮೈಸೂರಲ್ಲಿ ಬೆಳೆ ಹಾನಿ ಅಪಾರ ನಷ್ಟ 

 

: ಹುಣಸೂರು ಪಟ್ಟಣದ ಮಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ಗೌತಮ್‌ ಬಗಾದಿ ಭೇಟಿನೀಡಿ ಪರಿಶೀಲಿಸಿದರು.

ಮಂಜುನಾಥ ಬಡಾವಣೆಯಲ್ಲಿನ ಅವ್ಯವಸ್ಥೆಯನ್ನು ಕಂಡು ದಂಗಾದರು. ಸಮಸ್ಯೆಗೆ ಮೂಲಕಾರಣ ಸುತ್ತಮುತ್ತಲ ಅನಧಿಕೃತ ಖಾಸಗಿ ಬಡಾವಣೆಗಳಾಗಿದ್ದು ಕಾಲುವೆ ಇದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿದ್ದಾರೆ ಎಂದು ನಾಗರಿಕರು ಆರೋಪಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ (dc) , ಮಳೆಹಾನಿ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದ್ದು, ಸರ್ಕಾರದಿಂದ (Karnataka Fovt)  ಮನೆಯೊಳಗೆ ನೀರು ನುಗ್ಗಿ ಹಾನಿಗೊಳಗಾದ ಮನೆಗೆ ನೀಡುತ್ತಿದ್ದ ಪ್ರಕೃತಿ ವಿಕೋಪ ನಿದಿಯಡಿ . 3800 ಪರಿಹಾರವನ್ನು . 10 ಸಾವಿರಕ್ಕೆ ಏರಿಸಲು ತಹಸೀಲ್ದಾರ್‌ಗೆ ಸೂಚಿಸಿದ್ದೇನೆ. ನಾಳೆಯೇ ತಾಲೂಕಿನಾದ್ಯಂತ ಮನೆಯೊಳಗೆ ನೀರು ನುಗ್ಗಿರುವ ಕುಟುಂಬಕ್ಕೆ . 10ಸಾವಿರ ಪರಿಹಾರ ವಿತರಿಸಲಾಗುವುದು ಎಂದರು.

ಖಾಸಗಿ ಬಡಾವಣೆಗಳ ಅಕ್ರಮದಿಂದಾಗಿ ಮಳೆಹಾನಿ (Rain)  ಹೆಚ್ಚಾಗಿರುವುದು ಕಂಡುಬಂದಿದ್ದು, ಖಾಸಗಿ ಲೇಔಟ್‌ಗಳಲ್ಲಿ ಇರುವ ಸಿಎ ನಿವೇಶನಗಳನ್ನು ತಹಸೀಲ್ದಾರ್‌, ನಗರಸಭೆ ಮತ್ತು ಹುಡಾ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ವಶಕ್ಕೆ ಪಡೆಯಲು ಸೂಚಿಸಿದ್ದೇನೆ. ಅಲ್ಲದೆ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಕಾಲುವೆಗೆ ಒತ್ತುವರಿ ಸಮಸ್ಯೆಯಾದರೆ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಕಾಮಗಾರಿ ಮುಂದುವರೆಸಲು ಸೂಚಿಸಿದ್ದೇನೆ ಎಂದರು.

ನಗರದ ಕಲ್ಕುಣಿಕೆ ಬಡಾವಣೆಯ ಗುರುಗಳ ಕಟ್ಟೆಕೆರೆಯು 2.13 ಕೆರೆ ಇದ್ದು, ಒತ್ತುವರಿಯಿಂದಾಗಿ ಕೆರೆಯ ವಿಸ್ತೀರ್ಣ ಕಡಿಮೆಯಾಗಿದೆ. ಅಲ್ಲದೇ ಸುತ್ತಮುತ್ತಲು ಒತ್ತುವರಿ ಮಾಡಿಕೊಂಡವರು ಮನೆ ನಿರ್ಮಿಸಿಕೊಂಡಿದ್ದಾರೆ. ಕೆರೆಯ ಕುರಿತು ಸಮಗ್ರ ಮಾಹಿತಿ ನೀಡಲು ತಹಸೀಲ್ದಾರ್‌ರಿಗೆ ಸೂಚಿಸಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಶಾಸಕ ಎಚ್‌.ಪಿ. ಮಂಜುನಾಥ್‌, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ರಾಧಾ, ಸ್ವಾಮಗೌಡ, ದೇವನಾಯ್ಕ, ಪ್ರಭಾರ ಪೌರಾಯುಕ್ತೆ ಎಲ್‌. ರೂಪಾ, ಉಪ ವಿಭಾಗಾಧಿಕಾರಿ ವರ್ಣಿತ್‌ ನೇಗಿ, ತಹಸೀಲ್ದಾರ್‌ ಡಾ.ಎಸ್‌.ಯು. ಅಶೋಕ್‌ ಹಾಗು ನಾಗರಿಕರು ಇದ್ದರು.

ಅಪಾರ ಪ್ರಮಾಣದ ಬೆಳೆ ನಾಶ

ರೈತರಿಗೆ ಮಳೆ ಬಂದರೂ ಕಷ್ಟಬಾರದೆ ಇದ್ದರೂ ಕಷ್ಟ. ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ರಾಮ ಸಮುದ್ರದ ಎಡದಂಡೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ತೆಂಗು, ಅಡಿಕೆ, ಬಾಳೆ, ಕಬ್ಬು, ರಾಗಿ ಜಮೀನುಗಳಲ್ಲಿ ನೀರು ತುಂಬಿದ್ದು ಎಲ್ಲಾ ಗದ್ದೆಗಳು ಕೆರೆಯಂತೆ ಆಗಿದೆ.

click me!