37 ಡಿಗ್ರಿಗೆ ಏರಿದ ಉಷ್ಣಾಂಶ; ದಕ್ಷಿಣ ಭಾರತದ ಕಾಶ್ಮೀರ ಕೊಡಗು ಬಿಸಿಲಿಗೆ ತತ್ತರ!

By Ravi Janekal  |  First Published Apr 24, 2023, 8:53 PM IST

ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಕೊಡಗು ಈ ಬಾರಿಯ ಬೇಸಿಗೆಯ ಬಿರುಬಿಸಿಲಿನ ಅಬ್ಬರಕ್ಕೆ ತತ್ತರಿಸಿಹೋಗಿದೆ.  ಬಿಸಲಿನ ತಾಪಮಾನ ಬರೋಬ್ಬರಿ 36 ಡಿಗ್ರಿ ಸೆಲ್ಸಿಯಸ್ ನಿಂದ 37 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿದೆ. ಕೊಡಗಿನ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ತಾಪಮಾನ ದಾಖಲಾಗಿರುವುದೇ ಇದೇ ಮೊದಲು


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಏ.24) : ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಕೊಡಗು ಈ ಬಾರಿಯ ಬೇಸಿಗೆಯ ಬಿರುಬಿಸಿಲಿನ ಅಬ್ಬರಕ್ಕೆ ತತ್ತರಿಸಿಹೋಗಿದೆ. 

ಬಿಸಲಿನ ತಾಪಮಾನ ಬರೋಬ್ಬರಿ 36 ಡಿಗ್ರಿ ಸೆಲ್ಸಿಯಸ್ ನಿಂದ 37 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿದೆ. ಕೊಡಗಿನ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ತಾಪಮಾನ ದಾಖಲಾಗಿರುವುದೇ ಇದೇ ಮೊದಲು ಎನ್ನುತ್ತಿದ್ದಾರೆ ಕೃಷಿ ವಿಜ್ಜಾನಿಗಳು. ಈ ಪ್ರಮಾಣದ ಬಿಸಿಲಿನ ತಾಪಮಾನಕ್ಕೆ(high temperature) ಒಂದೆಡೆ ಜಲಮೂಲಗಳೇ ಬತ್ತಿಹೋಗುತ್ತಿದ್ದರೆ, ಮತ್ತೊಂದೆಡೆ ಕೊಡಗಿನ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು ಬೆಳೆಗಳೇ ಒಣಗಿ ಹೋಗುತ್ತಿವೆ. ತೀವ್ರ ಬಿಸಿಲಿನ ಪರಿಣಾಮ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. 

Tap to resize

Latest Videos

undefined

Temperature Hike: ಶಿರಸಿ 38 ಡಿಗ್ರಿ ಉಷ್ಣಾಂಶ ದಾಖಲು, ತತ್ತರಿಸಿದ ಜನತೆ, ಜಾನುವಾರುಗಳು!

ಕೊಡಗು(Kodagu) ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾರ್ಚ್ ಕೊನೆವಾರ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಎರಡರಿಂದ ಮೂರು ಹದ ಮಳೆ ಸುರಿಯುತಿತ್ತು. ಆದರೆ ಈ ಬಾರಿ ಒಂದೇ ಒಂದು ಹನಿ ಮಳೆ ಬಿದ್ದಿಲ್ಲ. ಬೇಸಿಗೆಯಲ್ಲಿ ಬೀಳುತ್ತಿದ್ದ ಒಂದೆರಡು ಹದ ಮಳೆಗೆ ಕಾಫಿ ಗಿಡ ಹಸಿರಾಗಿ, ಹೂವು ಅರಳುತಿತ್ತು. ನಂತರ ಮಳೆಗಾಲ ಆರಂಭವಾಗುವಷ್ಟರಲ್ಲಿ ಕಾಫಿ ಬೆಳೆಗಾರರು ಹೇಗೋ ಒಂದೆರಡು ಬಾರಿ ನೀರು ಹಾಯಿಸಿ ಕಾಫಿ ಹೂವು ಕಾಯಿಕಟ್ಟುವಂತೆ ಮಾಡುತ್ತಿದ್ದರು. ಇದರಿಂದ ಮುಂದಿನ ಬೆಳೆ ಸಿದ್ದವಾಗುತಿತ್ತು.

 ಆದರೆ ಈ ಬಾರಿ ಕಾಫಿ ಹೂ ಅರಳುವ ಮಾತಿರಲಿ, ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಹಲವು ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳೇ ಒಣಗಿ ಹೋಗುತ್ತಿವೆ. ಇದರಿಂದ ತಮ್ಮ ತಂದೆ, ತಾತಂದಿರು ಕಷ್ಟಪಟ್ಟು ಬೆಳೆಸಿದ್ದ ಕಾಫಿಗಿಡ, ಕರಿಮೆಣಸು ಬಳ್ಳಿಗಳು ಒಣಗಿ ಹೋಗುತ್ತಿವೆ. ಹೀಗಾಗಿ ಮುಂದಿನ ಮಳೆಗಾಲದಲ್ಲಿ ಹೊಸದಾಗಿ ಕಾಫಿಗಿಡಗಳನ್ನು ನೆಟ್ಟು ಬೆಳೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಕಾಫಿ ಬೆಳೆಗಾರರಿಗೆ ಭಾರೀ ದೊಡ್ಡ ಪ್ರಮಾಣದ ನಷ್ಟ ಎದುರಾಗುತ್ತಿದೆ. 

ಮತ್ತೊಂದೆಡೆ ಪ್ರವಾಸೋದ್ಯಮವನ್ನು ನಂಬಿಕೊಂಡಿದ್ದವರು ನಷ್ಟದ ಹಾದಿ ಹಿಡಿಯುವಂತೆ ಆಗಿದೆ. ಕೊಡಗಿನ ತಂಪಾದ ವಾತಾವರಣದಲ್ಲಿ ಓಡಾಡಿ ಎಂಜಾಯ್ ಮಾಡುವುದಕ್ಕಾಗಿಯೇ ಪ್ರವಾಸಿಗರು ಬರುತ್ತಿದ್ದರು. ಆದರೆ ಭಾರೀ ಬಿಸಿಲಿನಿಂದ ತಣ್ಣಗಿದ್ದ ಕೊಡಗು ಕಾದ ಕಾವಲಿಯಂತೆ ಆಗಿದೆ. ಇದರಿಂದ ಪ್ರವಾಸಿ ತಾಣಗಳಲ್ಲಿ ಓಡಾಡಿ ಎಂಜಾಯ್ ಮಾಡುತ್ತಿದ್ದ ಪ್ರವಾಸಿಗರು ಬಿರುಬಿಸಿಲಿಗೆ ಭಯಪಡುತ್ತಿದ್ದಾರೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವ ಸ್ಥಳೀಯರೇ ಮನೆಯಿಂದ ಹೊರಗೆ ಬಂದು ಓಡಾಡುವುದಕ್ಕೂ ಭಯಪಡುವಂತಹ ಸ್ಥಿತಿ ಇದೆ. ಇನ್ನು ಕೊಡಗು ಎಂದು ತಂಪಾಗಿರುವ ಜಿಲ್ಲೆ ಎಂಬ ಮನೋಭಾವದಲ್ಲಿ ಬಂದವರು ಇಲ್ಲಿನ ವಾತಾವರಣದಲ್ಲಿ ಓಡಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. 

ಮಾಂದಲ್ಪಟ್ಟಿ ಸೇರಿದಂತೆ ಕೆಲವು ಪ್ರವಾಸಿ ತಾಣಗಳಲ್ಲಿ ಹಸಿರೆಲ್ಲಾ ಒಣಗಿ ಮಾಯವಾಗಿ ಬರೀ ಬಂಡೆಗಳು ಕಾಣಿಸುತ್ತಿವೆ. ಹೀಗಾಗಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತಿದ್ದು, ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿದ್ದವರು ಕಂಗಲಾಗುತ್ತಿದ್ದಾರೆ ಎನ್ನುತ್ತಾರೆ ಪ್ರವಾಸೋದ್ಯಮ ಅವಲಂಬಿತರಾಗಿರುವ ಯತೀಶ್. ನಗರ ಪಟ್ಟಣ ಪ್ರದೇಶದಲ್ಲಿ ಜನರು ಬಿಸಲಿನ ಧಗೆ ತಾಳಲಾರದೆ ಎಳನೀರು, ತಂಪು ಪಾನೀಯಗಳು ಮತ್ತು ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. 

ಬಿಸಿಗಾಳಿಗೆ ಉತ್ತರ ತತ್ತರ: ಪ್ರಯಾಗದಲ್ಲಿ 44.2 ದಾಖಲು , ಧಗಧಗಿಸಿದ ಧರೆ

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿಗಿಡ ಮತ್ತು ಕರಿಮೆಣಸು ಬಳಿಗಳು ಒಣಗಿ ಹೋಗಿದ್ದು, ಸರ್ಕಾರ ಆದಷ್ಟು ಬೇಗ ಇದೆಲ್ಲವನ್ನು ಗಮನಿಸಿ ಭರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಕಾಫಿಬೆಳೆಗಾರರಾದ ಬೊಳ್ಳಜೀರ ಬಿ. ಅಯ್ಯಪ್ಪ ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಇನ್ನೊಂದು ತಿಂಗಳು ಮಳೆ ಬಾರದಿದಲ್ಲಿ ಕೊಡಗಿನ ಸ್ಥಿತಿಯನ್ನು ಊಹಿಸಲು ಸಾಧ್ಯವಾಗದಂತ ಸ್ಥಿತಿ ನಿರ್ಮಾಣವಾಗಲಿದೆ.

click me!