ದೇಶ ಮೆಚ್ಚುವ ಕೆಲ್ಸ, ನಮ್ಮ ಮನಿ ಹುಡುಗಾ ಮಾಡ್ಯಾನ!

By Suvarna NewsFirst Published Dec 7, 2019, 8:22 AM IST
Highlights

ಚಿಕ್ಕಪ್ಪ ಗ್ಯಾನಪ್ಪ ಸಜ್ಜನರ್‌, ಸಹೋದರ ಮಲ್ಲಿಕಾರ್ಜುನ ಮೆಚ್ಚುಗೆ| ನನಗ ಭಾಳ ಸಂತೋಷ ಆಗೈತಿ| ನನ್ನ ಕೈಯಾಗ ಬೆಳೆದ ಹುಡುಗಾ, ಇಷ್ಟೊಂದ್‌ ಎತ್ತರಕ್ಕ ಬೆಳೆದಾನ|ನಮ್ಮ ವಿಶ್ವ ಬಾಳ ಶ್ಯಾಣಾ ಇದ್ದ. ಸಾಲಿಗ ಫಸ್ಟ್‌ ಬರ್ತಿದ್ದ|

ಹುಬ್ಬಳ್ಳಿ(ಡಿ.07): ‘ನನ್‌ ಕಣ್ಮುಂದ ಬೆಳೆದ ಹುಡುಗಾ ಇಷ್ಟೊಂದ ಎತ್ತರಕ್ಕ ಬೆಳೆದಿದ್ದ ನೋಡಿದ್ರ ಭಾಳ ಸಂತೋಷಾ ಆಗತೈತಿ ನೋಡ್ರಿ. ಇಡೀ ದೇಶಾ ಮೆಚ್ಚುವಂತ ಕೆಲಸ ನಮ್‌ ಮನಿ ಹುಡುಗಾ ಮಾಡ್ಯಾನ’!

ಇದು ತೆಲಂಗಾಣ ಪೊಲೀಸ್‌ ಆಯುಕ್ತ, ಅತ್ಯಾಚಾರಿಗಳ ಎನ್‌ಕೌಂಟರ್‌ ಮಾಡಿ ದೇಶದ ಗಮನ ಸೆಳೆದಿರುವ ವಿಶ್ವನಾಥ ಸಜ್ಜನರ ಅವರ ಚಿಕ್ಕಪ್ಪ, 70ರ ಗ್ಯಾನಪ್ಪ ಸಜ್ಜನರ ಹೆಮ್ಮೆ ತುಂಬಿದ ಅಭಿಮಾನದ ಮಾತಿದು. ಬೆಳಗ್ಗೆ 7ಕ್ಕೆ ಹೈದ್ರಾಬಾದ್‌ನ ಅತ್ಯಾಚಾರಿಗಳ ಮೇಲೆ ಎನ್‌ಕೌಂಟರ್‌ ಆಗಿದೆ. ಆ ಎನ್‌ಕೌಂಟರ್‌ ತನ್ನ ಸಹೋದರನ ಪುತ್ರ ವಿಶ್ವನಾಥ ಸಜ್ಜನರ ನೇತೃತ್ವದಲ್ಲಿ ನಡೆದಿದೆ ಎಂಬುದನ್ನು ಕೇಳಿದ ಈ ಅಜ್ಜನ ಖುಷಿಗೆ ಪಾರವೇ ಇರಲಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ‘ಏಯ್‌ ಯಾರಾದ್ರೂ ನನಗ ಟಿವಿ ಹಚ್ಚಿಕೊಡ್ರಿ, ನಾ ನಮ್ಮ ವಿಶ್ವಾ ಏನೇನ ಮಾಡ್ಯಾನ ನೋಡಬೇಕು’ ಅಂತ ಹೇಳಿ ಟಿವಿ ಹಚ್ಚಿಕೊಂಡು ಅದರ ಮುಂದೆ ಕುಳಿತಿದ್ದಾರೆ. ತಮ್ಮ ಸಹೋದರನ ಪುತ್ರನಿಗೆ ವ್ಯಕ್ತವಾಗುತ್ತಿದ್ದ ಮೆಚ್ಚುಗೆಯನ್ನು ನೋಡಿ ಸಂತಸಪಟ್ಟಿದ್ದಾರೆ.

ಕನ್ನಡಿಗನಿಂದ ಕನ್ನಡದಲ್ಲಿ ವಿವರಣೆ: ಶೂಟೌಟ್ ಬಗ್ಗೆ ವಿಶ್ವನಾಥ್ ಸರ್ ಹೇಳಿದ್ದಿಷ್ಟು!

ಇನ್ನು ಮಾಧ್ಯಮದವರು ಬಂದು ಎನ್‌ಕೌಂಟರ್‌ ಬಗ್ಗೆ ಕೇಳುತ್ತಿದ್ದಂತೆ, ‘ನನಗ ಭಾಳ ಸಂತೋಷ ಆಗೈತಿ. ನನ್ನ ಕೈಯಾಗ ಬೆಳೆದ ಹುಡುಗಾ, ಇಷ್ಟೊಂದ್‌ ಎತ್ತರಕ್ಕ ಬೆಳೆದಾನ. ಇಡೀ ದೇಶಾನೆ ಮೆಚ್ಚುವಂಥ ಕೆಲಸ ಮಾಡ್ಯಾನ’ ಎಂದೆನ್ನುತ್ತಾ ಕಣ್ಣಂಚಲಿ ಜಾರಿದ ಆನಂದ ಬಾಷ್ಪ ಒರೆಸಿಕೊಂಡರು.

ನಮ್ಮ ವಿಶ್ವ ಬಾಳ ಶ್ಯಾಣಾ ಇದ್ದ. ಸಾಲಿಗ ಫಸ್ಟ್‌ ಬರ್ತಿದ್ದ ಎಂದು ಬಾಲ್ಯವನ್ನುನೆನಪಿಸಿಕೊಳ್ಳುತ್ತಾ, ಅಂವಾ ಆಗಾಗ ಊರಿಗೆ ಬರ್ತಿದ್ದ. ಬಂದಾಗೊಮ್ಮೆ ಪ್ರೀತಿಯಿಂದಲೇ ಮಾತಾಡಿಸಿಕೊಂಡು ಹೋಗುತ್ತಿದ್ದ ಎಂದರು.
ಸ್ಟ್ರಾಂಗ್‌ ಸಂದೇಶ ರವಾನೆಯಾಗಿದೆ:

ಹೈದರಾಬಾದ್ ಅತ್ಯಾಚಾರಿಗಳಿಗೆ ಗುಂಡಿಟ್ಟ ಸಿಂಗಂ, ಕನ್ನಡಿಗ ಸಜ್ಜನರ್!

ಈ ಬಗ್ಗೆ ಮಾತನಾಡಿದ ಸಹೋದರ ಡಾ.ಮಲ್ಲಿಕಾರ್ಜುನ ಅವರು, ವಿಶ್ವನಾಥ ಸಜ್ಜನರ್‌ ಅವರು ಅತ್ಯಾಚಾರಿ ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದಾಗ ಮಾಡಿದ ಎನ್‌ಕೌಂಟರ್‌ ಕುರಿತು ಸೋದರ, ವೈದ್ಯ ಡಾ.ಮಲ್ಲಿಕಾರ್ಜುನ ಸಜ್ಜನರ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವನಾಥ ಬಾಲ್ಯದಿಂದಲೇ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲ ಪ್ರತಿಭಟನೆಯ ಮುಂಚೂಣಿವಹಿಸಿದ್ದ. ನನ್ನ ಸಹೋದರ ಇಡೀ ದೇಶಕ್ಕೆ ಮಾದರಿಯಾಗುವಂಥ ಕೆಲಸ ಮಾಡಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಇಡೀ ದೇಶವೇ ಆಗ್ರಹಿಸುತ್ತಿತ್ತು. ಇದರಿಂದ ಬಲಿಪಶುವಾಗಿದ್ದ ಪಶುವೈದ್ಯೆಯ ಸಾವಿಗೆ ನ್ಯಾಯ ಸಿಕ್ಕಂತಾಗಿದೆ. ಕನ್ನಡ ನಾಡಿನ ಹುಡುಗ ಈಮಟ್ಟಕ್ಕೆ ಬೆಳೆದಿದ್ದಾನೆ ಎಂಬುದು ಹೆಮ್ಮೆಯ ವಿಷಯ. ಎನ್‌ಕೌಂಟರ್‌ನಿಂದ ಅತ್ಯಾಚಾರಿಗಳಿಗೆ ಸ್ಟ್ರಾಂಗ್‌ ಸಂದೇಶ ರವಾನೆಯಾಗಿದೆ ಎಂದರು.

ವಿಶ್ವನಾಥ ಆಗಾಗ ಇಲ್ಲಿಗೆ ಬರುತ್ತಿರುತ್ತಾರೆ. ಹದಿನೈದು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಗೆ ಬಂದು ಎರಡು ದಿನ ಇದ್ದು ಹೋಗಿದ್ದರು. ನಿರಂತರ ಸಂಪರ್ಕದಲ್ಲಿರುತ್ತಾರೆ. ಮನೆಯಲ್ಲಿ ಯಾವತ್ತೂ ಕೆಲಸದ ವಿಷಯ ಮಾತನಾಡುತ್ತಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಲೀಡರ್‌ಶಿಪ್‌ ಕ್ವಾಲಿಟಿ ಇತ್ತು ಎಂದು ಹೇಳಿದರು.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಖುಷಿಯಾಗಿದೆ: ಮಲ್ಲಿಕಾರ್ಜುನ ಅವರ ಪತ್ನಿ ವಿನುತಾ ಸಜ್ಜನರ್‌ ಅವರೂ ಸಂಭ್ರಮದಲ್ಲಿದ್ದರು. ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಿದಂತಾಗಿದೆ. ಹೆಣ್ಣಿನ ಶೋಷಣೆ ನಿಲ್ಲಬೇಕೆಂಬ ಘೋಷಣೆ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದು ಬರೀ ಆಗ್ರಹಕ್ಕಷ್ಟೇ ಸೀಮಿತವಾಗಿತ್ತು. ಅತ್ಯಾಚಾರ ಮಾಡಿದರೆ ಏನಾಗುತ್ತದೆ ಎಂಬುದು ಗೊತ್ತಾಗಬೇಕಿತ್ತು. ಅತ್ಯಾಚಾರಿಗಳಿಗೆ ಇದೊಂದು ಎಚ್ಚರಿಕೆ ಸಂದೇಶ. ಹೆಣ್ಣಿನ ಗೌರವ ಕೊಡುವುದನ್ನು ಎಲ್ಲರೂ ಇನ್ನು ಮೇಲಾದರೂ ಕಲಿಯಬೇಕು. ಒಬ್ಬ ಹೆಣ್ಣಾಗಿ, ನನ್ನ ಮೈದುನ ಮಾಡಿದ ಕೆಲಸದ ಬಗ್ಗೆ ಹೆಮ್ಮೆಯಿದೆ ಎಂದರು.
 

click me!