
ವರದಿ: ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜೂ.09): ಅದು ಗಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.ಇಬ್ಬರು ಶಿಕ್ಷಕರಿದ್ದರು,ಇವರಿಬ್ಬರ ಕಿತ್ತಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಈ ಬಾರಿ ಮಕ್ಕಳನ್ನು ಅಡ್ಮಿಷನ್ ಮಾಡಲೂ ಹಿಂದೇಟು ಹಾಕಿದ್ದರು. ರಾಜ್ಯಾದ್ಯಂತ ಶಾಲೆ ಆರಂಭವಾದರೂ ಕೂಡ ಇಲ್ಲಿ ಶೂನ್ಯ ದಾಖಲಾತಿ. ಈ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಎಚ್ಚೆತ್ತ ಶಿಕ್ಷಣಾಧಿಕಾರಿಗಳು ಈ ಇಬ್ಬರು ಶಿಕ್ಷಕರನ್ನು ಎತ್ತಂಗಡಿ ಮಾಡಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು ಕಳೆದ ಮಂಗಳವಾರ ಚಾಮರಾಜನಗರ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಝೀರೊ ಅಡ್ಮಿಷನ್ ಕುರಿತು ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಬಿತ್ತರ ಮಾಡಿತ್ತು.
ರಾಜ್ಯಾದ್ಯಂತ ಸರ್ಕಾರಿ ಶಾಲೆ ಆರಂಭವಾದದರು ಚಾಮರಾಜನಗರ ತಾಲೂಕಿನ ಮರಿಯಾಲ ಸರ್ಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ ದಾಖಲಾಗಿತ್ತು. ಒಬ್ಬೇ ಒಬ್ಬ ವಿದ್ಯಾರ್ಥಿ ಕೂಡ ಹಾಜರಾಗದೆ ಬಿಕೋ ಎನ್ನುತ್ತಿತ್ತು. ಖಾಲಿ ಖಾಲಿ ಕೊಠಡಿಯಲ್ಲಿ ಕುಳಿತು ವಿದ್ಯಾರ್ಥಿಗಳ ಬರುವಿಕೆಗಾಗಿ ಕಾಯುತ್ತಿದ್ದ ಶಿಕ್ಷಕಿಯರ ವಿಡಿಯೋ ಏಷಿಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರದಲ್ಲಿ ಕೂಡ ಸೆರೆಯಾಗಿತ್ತು. ಏಷಿಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಈ ಶಾಲೆಯ ವಿಚಾರ ಬಟಾ ಬಯಲಾಗಿತ್ತು, ಮರಿಯಾಲ ಸರ್ಕಾರಿ ಶಾಲೆಯ ಅಸಲಿಯತ್ತು. ಶಿಕ್ಷಕರ ಒಳಜಗಳದಿಂದಲೇ ಈ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್ ಎಂಬುದು ಸಾಬೀತಾಗಿತ್ತು.
ಈಗ ಇಬ್ಬರು ಶಿಕ್ಷಕರ ಎತ್ತಂಗಡಿ ಮಾಡಿ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಆದೇಶ ಹೊರಡಿಸಿದ್ದಾರೆ. ಶಿಕ್ಷಕಿ ಸುಶೀಲಾ ಹಾಗೂ ಸೌಭಾಗ್ಯರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಬಳಿಕ ಇಂದು 12 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹೊಸ ಇಬ್ಬರು ಶಿಕ್ಷಕರನ್ನ ಈ ಶಾಲೆಗೆ ನೇಮಕಾತಿ ಮಾಡಿ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿ ಸಮಸ್ಯೆಯನ್ನು ಬಗೆಹರಿಸಿದ್ದಕ್ಕೆ ಗ್ರಾಮಸ್ಥರು ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಧನ್ಯವಾದ ತಿಳಿಸಿದ್ದಾರೆ.
ಒಟ್ನಲ್ಲಿ ಶಿಕ್ಷಕರ ನಡುವಿನ ಒಳಜಗಳಕ್ಕೆ ಶೂನ್ಯ ದಾಖಲಾತಿ ಹೊಂದಿದ್ದ ಮರಿಯಾಲದ ಈ ಸರ್ಕಾರಿ ಶಾಲೆಗೆ ವ್ಯಾಸಂಗ ಮಾಡಲೂ ಮತ್ತೇ ವಿಧ್ಯಾರ್ಥಿಗಳು ಬರುತ್ತಿದ್ದಾರೆ. ತಿದ್ದಿ ಬುದ್ದಿ ಹೇಳಬೇಕಿದ್ದ ಶಿಕ್ಷಕರ ನಡುವಿನ ಕಿತ್ತಾಟಕ್ಕೆ ಪೋಷಕರು ಹಾಗೂ ವಿಧ್ಯಾರ್ಥಿಗಳು ಹೈರಣಾಗಿದ್ದರು. ಇದೀಗಾ ಶಿಕ್ಷಕರ ಬದಲಾವಣೆಯಿಂದ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದು, ಶಾಲೆಗೆ ಜೀವಕಳೆ ಬಂದಿದೆ. ಅದಕ್ಕೆ ಪೋಷಕರು ಏಷಿಯಾನೆಟ್ ಸುವರ್ಣ ನ್ಯೂಸ್ ಸಾಮಾಜಿಕ ಕಳಕಳಿಯ ವರದಿಗೆ ಬೇಷ್ ಎಂದಿದ್ದಾರೆ.