ಶಾಲೆಯಲ್ಲಿ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಶಿಕ್ಷಕನೋರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಡೂರು [ಮಾ.08]: ಮೊರಾರ್ಜಿ ವಸತಿ ಶಾಲೆ ಶಿಕ್ಷಕರೊಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರ ಜತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸ್ಥಳೀಯ ಪೊಲೀಸರು, ಶಿಕ್ಷಕನನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲೂಕಿನ ಕುಪ್ಪಾಳಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿಂದಿ ಶಿಕ್ಷಕ ಶ್ರೀನಿವಾಸ ನಾಯ್ಕ ಬಂಧಿತ ಆರೋಪಿ. ಕೋಲಾರದಿಂದ 3 ವರ್ಷಗಳ ಹಿಂದೆ ಕುಪ್ಪಾಳು ವಸತಿ ಶಾಲೆಗೆ ವರ್ಗಾವಣೆಯಾಗಿದ್ದು, ಶಾಲೆ ವಸತಿ ಗೃಹದಲ್ಲೇ ವಾಸವಿದ್ದಾರೆ. ವಿದ್ಯಾರ್ಥಿನಿಯರಿಗೆ ಪಾಠ ಹೇಳುವ ನೆಪದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು.
ಈ ಶಿಕ್ಷಕನಿಂದ ಕಿರಿಕಿರಿಗೊಳಗಾದ ವಿದ್ಯಾರ್ಥಿನಿಯೊಬ್ಬಳು ತಮ್ಮ ಪೋಷಕರಿಗೆ ದೂರಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಶಾಲೆಗೆ ಬಂದು ಪ್ರಾಂಶುಪಾಲರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚರ್ಚೆ ತಾರಕಕ್ಕೇರಿ ವಾಗ್ವಾದ ನಡೆದಿದೆ. ಇದೇ ರೀತಿ ಅನೇಕ ವಿದ್ಯಾರ್ಥಿನಿಯರ ಮೇಲೆ ಆ ಶಿಕ್ಷಕ ತೊಂದರೆ ನೀಡಿದ ಘಟನಾವಳಿಗಳು ಬೆಳಕಿಗೆ ಬಂದು, ಸಂಜೆ ವೇಳೆಗೆ ಶಾಲಾ ಆವರಣದಲ್ಲಿ ಮಕ್ಕಳು, ಪೋಷಕರ ದಂಡು ಸೇರಿತ್ತು.
ಧರ್ಮಸ್ಥಳ ಪಾದಯಾತ್ರೆಯಲ್ಲಿ ಭಾಗಿಯಾದ ಶ್ವಾನ..!...
ಪರಿಸ್ಥಿತಿ ಸೂಕ್ಷ್ಮತೆ ಅರಿತ ಕಡೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಾಂಶುಪಾಲರು ಮತ್ತು ಶಿಕ್ಷಕರ ಬಳಿ ಮಾಹಿತಿ ಪಡೆದಿದ್ದಾರೆ. ಘಟನೆಗೆ ಕಾರಣನಾಗಿರುವ ಶಿಕ್ಷಕ ಶ್ರೀನಿವಾಸ ನಾಯ್ಕನನ್ನು ವಶಕ್ಕೆ ಪಡೆದರು. ಅನಂತರ ಭಾರತೀಯ ದಂಡ ಸಂಹಿತೆ 8 ಮತ್ತು 12 ಪೊಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಪ್ರಾಂಶುಪಾಲರಾದ ಕೆ.ಪಿ.ಶೈಲಾ ದೂರು ನೀಡಿದ್ದಾರೆ. ಒಂದೂವರೆ ತಿಂಗಳಿನಿಂದ ಶ್ರೀನಿವಾಸ ನಾಯ್ಕ ಅವರು ಶಾಲಾ ಸಮಯ ಹೊರತುಪಡಿಸಿ ಬಿಡುವಿನ ಸಮಯದಲ್ಲಿ ಹೋಂ ವರ್ಕ್ ಮತ್ತು ಪಠ್ಯ ವಿಷಯದ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಶಾಲಾ ಆವರಣದ ಬಳಿ ಕರೆಸಿಕೊಂಡು, ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಕಡೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಶ್ರೀನಿವಾಸ ನಾಯ್ಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಶಾಲಾ ಸ್ಥಳಕ್ಕೆ ಸಿಂಗಟಗೆರೆ ಪಿಎಸ್‌ಐ ಮೇಘಾ, ಪಂಚನಹಳ್ಳಿ ಪಿಎಸ್‌ಐ ಸುನಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮತ್ತಿತರರು ಭೇಟಿ ನೀಡಿದ್ದರು.