ಕಾಂಗ್ರೆಸ್ ಮುಖಂಡರಿಗೆ ನಿರಾಸೆಯಾಗಿದೆ. ಯಾಕೆಂದರೆ ರಾಜ್ಯದಲ್ಲಿ ಉತ್ತಮ ಬಜೆಟ್ ಮಂಡನೆಯಾಗಿದ್ದು, ಟೀಕೆ ಮಾಡಲು ಅವಕಾಶವೇ ಇಲ್ಲದಂತಾಗಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ [ಮಾ.08]: ರಾಜ್ಯದ ಎಲ್ಲ ನಿಗಮ, ಮಂಡಳಿಗಳಿಗೆ ಶೀಘ್ರದಲ್ಲಿಯೇ ನೇಮಕ ಪ್ರಕ್ರಿಯೆ ಮಾಡಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಳೆದು ತೂಗಿ ನಿಗಮ- ಮಂಡಳಿಗಳಿಗೆ ನೇಮಕ ಮಾಡಬೇಕಾಗಿದೆ. ಇದರಿಂದ ನೇಮಕ ಪ್ರಕ್ರಿಯೆ ಸ್ವಲ್ಪ ತಡವಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರಿಗೆ ಬಜೆಟ್ ಕುರಿತು ನಿರಾಶೆ ಇರುವುದು ಸಹಜ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನಪರ ಬಜೆಟ್ ಮಂಡನೆ ಮಾಡಿರುವುದರಿಂದ ಪ್ರತಿಪಕ್ಷಗಳಿಗೆ ಆರೋಪ ಮಾಡಲು ವಿಷಯವೇ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.
ಮಹಾದಾಯಿ ಯೋಜನೆಗೆ 500 ಕೋಟಿ ರು. ಮೀಸಲಿಡಲಾಗಿದೆ. ಆದರೂ, ಪ್ರತಿಪಕ್ಷಗಳಿಗೆ ಇನ್ನೂ ಸಮಾಧಾನವಾಗಿಲ್ಲ. ಹಲವು ವರ್ಷಗಳಿಂದ ಮಹಾದಾಯಿ, ಮಹಾದಾಯಿ ಎಂದು ಹೇಳುತ್ತಿದ್ದರು. ಆದರೆ ಇಂದಿನಿಂದ ಆರೋಪ ಮಾಡಲು ವಿಷಯವೇ ಇಲ್ಲವಾಗಿದೆ. ಇಡೀ ರಾಜ್ಯದಲ್ಲಿ ಬಡವರಿಗೆ ಮನೆ ಕಟ್ಟಿಕೊಡುವ ಕೆಲಸ ರಾಜ್ಯದಿಂದ ಆಗುತ್ತಿದೆ. ಬಡವರಿಗೆ ಅನುಕೂಲ ಆಗುವಂತಹ ಅನೇಕ ಯೋಜನೆ ಜಾರಿಗೊಳಿಸಲಾಗಿದೆ. ಬಡವರಿಗೆ ಅನುಕೂವಾಗುವ ಅನೇಕ ಯೋಜನೆಗಳನ್ನು ಬಜೆಟ್‌ನಲ್ಲಿ ಜಾರಿಗೆ ತಂದಿರುವುದು ಕಾಂಗ್ರೆಸ್‌ನವರಿಗೆ ನಿರಾಶೆಯಾಗಿದೆ ಎಂದು ಲೇವಡಿ ಮಾಡಿದರು.
ಡಿಕೆಶಿಗೆ ಕೆಪಿಸಿಸಿ ಪಟ್ಟ ಕಟ್ಟಿ ಎನ್ನೋಕೆ ಈ ಲೆಕ್ಕಾಚಾರವೇ ಕಾರಣ: ಹೌದೌದು ಎನ್ನುತ್ತಿರೋ ಶಾಸ್ತ್ರಜ್ಞರು.
ಈ ಬಾರಿ ಬಜೆಟ್‌ನಲ್ಲಿ ಇಲಾಖಾವಾರು ಅನುದಾನ ಹಂಚಿಕೆಯಾಗಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ಒಂದೊಂದು ಸರ್ಕಾರ ಒಂದೊಂದು ರೀತಿ ಬಜೆಟ್ ಮಂಡಿಸುತ್ತದೆ. ಒಂದೇ ರೀತಿ ಬಜೆಟ್ ಮಂಡನೆ ಮಾಡಬೇಕು ಎಂದೇನಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿವೆಯಷ್ಟೆಎಂದು ಸ್ಪಷ್ಟನೆ ನೀಡಿದರು.
ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂಬುದು ಕಾಂಗ್ರೆಸ್‌ನವರ ಹೇಳಿಕೆಯಾಗಿದೆ. ಕಾಂಗ್ರೆಸ್ ಮುಖಂಡರಿಗೆ ಎಂದಾದರೂ ಒಳ್ಳೆಯ ಕೆಲಸ ಮಾಡಿದಾಗ ಹೊಗಳಿ ಅಭ್ಯಾಸ ಇದೆಯೇ? ಕಾಂಗ್ರೆಸ್‌ನವರ ಸ್ವಭಾವನೇ ಅದು. ಕೇವಲ ಟೀಕೆ ಮಾಡುವುದೇ ಅವರ ಕೆಲಸವಾಗಿದೆ. ಇದಕ್ಕೆ ಪ್ರತಿಕ್ರಿಯಿಸಬೇಕಾದ ಅಗತ್ಯವಿಲ್ಲ. ಈ ಬಾರಿ ಒಳ್ಳೆ ಬಜೆಟ್ ಮಂಡನೆಯಾಗಿದೆ. ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.