ಆತ್ಮಹತ್ಯೆಗೆ ಯತ್ನಿಸಿದ ರೈತ: ಈರುಳ್ಳಿ ಖರೀದಿಸಿ ಮಾನವೀಯತೆ ಮೆರೆದ ತಾಲೂಕಾಡಳಿತ

By Kannadaprabha News  |  First Published May 21, 2020, 10:51 AM IST

ಈರುಳ್ಳಿ ಖರೀದಿಸಿ ಧೈರ್ಯ ತುಂಬಿದ ತಹಸೀಲ್ದಾರ| ಈರುಳ್ಳಿ ಬೆಲೆ ನೆಲಕಚ್ಚಿದ ಪರಿನಾಮ ಮನೆಯಲ್ಲಿ ಮಗ, ಮಗಳ ಮದುವೆಗೆ ಹಣ ಜೋಡಿಸಲು ದಿಕ್ಕು ಕಾಣದೇ ಆತ್ಮಹತ್ಯೆಗೆ ಯತ್ನಿಸಿದ ರೈತ|


ಹೂವಿನಹಡಗಲಿ(ಮೇ.21): ಲಾಕ್‌ಡೌನ್‌ದಿಂದಾಗಿ ಈರುಳ್ಳಿ ಬೆಲೆ ನೆಲಕಚ್ಚಿದೆ, ಮನೆಯಲ್ಲಿ ಮಗ, ಮಗಳ ಮದುವೆಗೆ ಹಣ ಜೋಡಿಸಲು ದಿಕ್ಕು ಕಾಣದೇ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಜರುಗಿದ್ದು, ಈ ಕುಟುಂಬಕ್ಕೆ ಆಸರೆಯಾಗಲು ತಾಲೂಕಾಡಳಿತ ಮುಂದಾಗಿ ಈರುಳ್ಳಿ ಖರೀದಿಸಿ ಸಂಕಟದಲ್ಲಿದ್ದ ಕುಟುಂಬಕ್ಕೆ ಧೈರ್ಯ ತುಂಬಿದೆ.

ತಾಲೂಕಿನ ಕಗ್ಗಲಗಟ್ಟಿತಾಂಡಾದ ಮೋತಿನಾಯ್ಕ ಆತ್ಮಹತ್ಯೆಗೆ ಯತ್ನಿಸಿದ ರೈತ. ಮಗನ ಮದುವೆ ಇದೆ ಹಣ ಹೊಂದಾಣಿಕೆ ಮಾಡಲು ಹೆಣಗಾಡುತ್ತಿದ್ದರು. ದಿಕ್ಕು ಕಾಣದೇ ಕೊನೆಗೆ ಈ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ವೇಳೆ ಗ್ರಾಮಸ್ಥರು ತಡೆದು ತಹಸೀಲ್ದಾರ್‌ ಹಾಗೂ ಈರುಳ್ಳಿ ಬೆಳೆಗಾರರ ಸಂಘದ ಗಮನಕ್ಕೆ ಮಾಹಿತಿ ನೀಡಿದ್ದಾರೆ. ಆಗ ತಹಸೀಲ್ದಾರ್‌ ಕೆ. ವಿಜಯಕುಮಾರ್‌ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದಾರೆ.

Tap to resize

Latest Videos

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ಇದೇ ರೀತಿ ಮತ್ತೊಂದು ಕುಟುಂಬದ ಸಮಸ್ಯೆ ಇತ್ತು. ಕಗ್ಗಲಗಟ್ಟಿತಾಂಡಾದ ರುಕ್ಮಿಣಿಬಾಯಿ ಸಹ ಈರುಳ್ಳಿ ಬೆಳೆದಿದ್ದರು. ಈ ಮಹಿಳೆಯು ತಮ್ಮ ಮಗಳ ಮದುವೆಯನ್ನು ನಿಶ್ಚಯಿಸಿದ್ದರು. ಅವರಿಗೂ ಹಣದ ಅಡಚಣೆ ಎದುರಾಗಿತ್ತು. ಈ ಎರಡೂ ಕುಟುಂಬಗಳು ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮದುವೆ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಚೀಲವೊಂದಕ್ಕೆ ಕೇವಲ . 100ರಿಂದ . 150 ಬೆಲೆ ಇದ್ದ ಕಾರಣ ಈರುಳ್ಳಿ ಮಾರಾಟ ಮಾಡದೇ ಮನೆಯಲ್ಲೇ ಇಟ್ಟಿದ್ದರು.

ಈ ವಿಷಯವನ್ನು ಅರಿತ ಈರುಳ್ಳಿ ಬೆಳೆಗಾರರ ಸಂಘವು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು, ರೈತರಿಗೆ ಕೊರೋನಾದಿಂದ ಸಂಕಷ್ಟ ಎದುರಾಗಿದೆ. ರೈತರು ಬೆಳೆದ ಈರುಳ್ಳಿಯನ್ನು ತಾಲೂಕು ನೌಕರರು ಖರೀದಿ ಮಾಡಿ ಎಂದು ಮನವಿ ಮಾಡಿದರು. ತಹಸೀಲ್ದಾರ್‌, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ನೌಕರರಿಗೆ ಈರುಳ್ಳಿಯನ್ನು ಮಾರಾಟ ಮಾಡಲು ನಿರ್ಧರಿಸಿದರು. ಕಗ್ಗಲಗಟ್ಟಿ ತಾಂಡಾದ ಮೋತಿನಾಯ್ಕ ಹಾಗೂ ರುಕ್ಮಿಣಿಬಾಯಿ ಇವರಿಗೆ ಸೇರಿದ್ದ 80 ಚೀಲ ಈರುಳ್ಳಿಯನ್ನು 350ಕ್ಕೆ 1 ಚೀಲದಂತೆ ಖರೀದಿ ಮಾಡಿ ಆ ಎರಡು ಕುಟಂಬಗಳಿಗೆ ಆಸರೆಯಾಗಿದ್ದಾರೆ.

ಕೊರೋನಾದಿಂದ ರೈತರು ಸಂಕಷ್ಟದಲ್ಲಿದ್ದಾರೆ, ಬೆಳೆದ ಈರುಳ್ಳಿ ಮಾರಾಟ ಮಾಡಿ ಬಂದ ಹಣದಲ್ಲಿ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಕುಟುಂಬಗಳಿಗೆ ಸಾಧ್ಯವಾಗಿಲ್ಲ. ಆದ್ದರಿಂದ ತಾಲೂಕಿನ ನೌಕರರಿಗೆ 350 ಒಂದು ಚೀಲದಂತೆ ಈರುಳ್ಳಿ ಖರೀದಿ ಮಾಡಿದ್ದೇವೆ. ಈಗ ಆ ಕುಟುಂಬಗಳ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಸಿದ್ದೇವೆ ಎಂದು ಹೂವಿನಹಡಗಲಿ ತಹಸೀಲ್ದಾರ್‌ ಕೆ. ವಿಜಯಕುಮಾರ ಹೇಳಿದ್ದಾರೆ. 

ನಾವು ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆ ಇತ್ತು. ಆದರೆ ತಹಸೀಲ್ದಾರ್‌ ಹಾಗೂ ಇತರ ಇಲಾಖೆಯ ಅಧಿಕಾರಿಗಳು ನಮ್ಮ ಈರುಳ್ಳಿಯನ್ನು ಖರೀದಿ ಮಾಡಿ ನಮ್ಮ ಸಂಕಷ್ಟವನ್ನು ದೂರ ಮಾಡಿರುವ ತಾಲೂಕು ಆಡಳಿತ ಮಾನವೀಯತೆ ಮೆರೆದಿದ್ದಾರೆ ಎಂದು ಕಗ್ಗಲಗಟ್ಟಿ ತಾಂಡಾದ ರೈತ ಮೋತಿನಾಯ್ಕ ಎಂದು ಹೇಳಿದ್ದಾರೆ.
 

click me!