ಬ್ರ್ಯಾಂಡ್‌ ಬೆಂಗಳೂರು: ಸದನದಲ್ಲಿ ಕೈ-ಕಮಲ ಕಿತ್ತಾಟ, ನಗರದ ಮಾನ ಕಳೆಯಬೇಡಿ ಎಂದ ಖಾದರ್

By Kannadaprabha News  |  First Published Dec 6, 2023, 8:35 AM IST

ಬಿಜೆಪಿ ಏನೂ ಮಾಡಿಲ್ಲ, ಆದರೂ ₹25 ಸಾವಿರ ಕೋಟಿ ಬಿಲ್‌ ಪಾವತಿ ಬಾಕಿ ಉಳಿಸಿದೆ. ಗಾರ್ಡನ್‌ ಸಿಟಿ, ಪಿಂಚಣಿದಾರರ ಸ್ವರ್ಗ ಎನ್ನುತ್ತಿದ್ದ ಬೆಂಗಳೂರನ್ನು ಗಾರ್ಬೆಜ್‌ ಸಿಟಿ ಮಾಡಿದವರು ನೀವು. ರಸ್ತೆ ಗುಂಡಿ ಮುಚ್ಚಲೂ ಎರಡು ವರ್ಷ ಹೈಕೋರ್ಟ್ ಮಾನಿಟರ್‌ ಮಾಡಬೇಕಾಯಿತು. ಇದೀಗ ಅಸಹನೆಯಿಂದ ನಮ್ಮ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ತಿರುಗೇಟು ನೀಡಿದ ಸಚಿವ ರಾಮಲಿಂಗಾರೆಡ್ಡಿ 
 


ವಿಧಾನಸಭೆ(ಡಿ.06):  ‘ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಒಂದೂ ಅಭಿವೃದ್ದಿ ಯೋಜನೆ ಆಗಿಲ್ಲ. ಹೀಗಿದ್ದರೂ ಗುತ್ತಿಗೆದಾರರಿಗೆ ₹25,000 ಕೋಟಿ ಪಾವತಿ ಬಾಕಿ ಉಳಿಸಿ ಹೋಗಿದ್ದಾರೆ. ಬಿಜೆಪಿ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಎರಡು ವರ್ಷ ಖುದ್ದು ಹೈಕೋರ್ಟ್‌ ಮೇಲುಸ್ತುವಾರಿ ವಹಿಸಬೇಕಾಯಿತು. ಅಂತಹವರು ನಮ್ಮ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಚಿವ ರಾಮಲಿಂಗಾರೆಡ್ಡಿ ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಎನ್‌.ಎ.ಹ್ಯಾರಿಸ್‌ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರ್ಯಾಂಡ್‌ ಬೆಂಗಳೂರು ಯೋಜನೆಯನ್ನು ಟೀಕಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಬ್ರ್ಯಾಂಡ್‌ ಬೆಂಗಳೂರು ಯೋಜನೆ ಉದ್ದೇಶ ಹಾಗೂ ಪರಿಕಲ್ಪನೆ ಬಗ್ಗೆ ವಿವರಿಸಿದ ರಾಮಲಿಂಗಾರೆಡ್ಡಿ ಅವರು, ಬೆಂಗಳೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಲು ತಜ್ಞರ ಸಲಹೆ ಪಡೆದು ಅಗತ್ಯ ಯೋಜನೆ ರೂಪಿಸಲು ಬ್ರ್ಯಾಂಡ್‌ ಬೆಂಗಳೂರು ಯೋಜನೆ ರೂಪಿಸಲಾಗಿದೆ. 70 ಸಾವಿರ ಸಲಹೆಗಳು ಬಂದಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ಪ್ರಮುಖ ಸಲಹೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Tap to resize

Latest Videos

ಸದನದಲ್ಲಿ ಮಾತನಾಡಲು ಅವಕಾಶ ಸಿಗದ್ದಕ್ಕೆ ಕಾಂಗ್ರೆಸ್‌ ಶಾಸಕ ರಾಯರೆಡ್ಡಿ ವಾಕೌಟ್..!

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಸತೀಶ್‌ ರೆಡ್ಡಿ, ‘ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮೆಟ್ರೋ ಕಾಮಗಾರಿ ವಿಳಂಬವಾಗಿದೆ. ಕಳೆದ ಆರು ತಿಂಗಳಿಂದ ಒಂದು ಕಾಮಗಾರಿಯೂ ಪ್ರಾರಂಭವಾಗಿಲ್ಲ. ನಾಮ್‌ ಕೆ ವಾಸ್ತೆಗೆ ಬ್ರ್ಯಾಂಡ್‌ ಬೆಂಗಳೂರು ಎನ್ನುತ್ತಿದ್ದೀರಿ. ಇದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಕಿಡಿಕಾರಿದರು. ಜತೆಗೆ ಕಾವೇರಿ ನೀರು ತಮಿಳುನಾಡಿಗೆ ಹರಿಸಿದ್ದೀರಿ. ಬೆಂಗಳೂರಿನ ನಿವಾಸಿಗಳಿಗೆ 15 ದಿನಗಳಿಗೊಮ್ಮೆ ಕಾವೇರಿ ನೀರು ಬರುತ್ತಿದೆ ಎಂದರು.
ಈ ವೇಳೆ ಬಿಜೆಪಿಯ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಆರ್‌.ವಿಶ್ವನಾಥ್‌, ಮುನಿರತ್ನ, ಎಸ್‌.ರಘು ಸೇರಿ ಹಲವರು ಎದ್ದು ನಿಂತು ಕಳೆದ ಆರು ತಿಂಗಳಲ್ಲಿ ನಯಾಪೈಸೆ ಅಭಿವೃದ್ದಿ ಆಗಿಲ್ಲ ಎಂದು ಟೀಕಿಸಿದರು.

ನಗರದ ಮಾನ ಕಳೆಯಬೇಡಿ: ಖಾದರ್

ಸ್ಪೀಕರ್‌ ಯು.ಟಿ.ಖಾದರ್, ಇಷ್ಟೂ ವರ್ಷ ನೀವೇ ಅಧಿಕಾರದಲ್ಲಿದ್ದಿರಿ. ಈಗ ಏಕಾಏಕಿ ನಗರದ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮ ನಗರದ ಮಾನ ಮರ್ಯಾದೆ ನೀವೇ ಕಳೆಯುತ್ತಿದ್ದೀರಿ. ಎಲ್ಲದನ್ನೂ ಟೀಕಿಸುವುದು ಸರಿಯಲ್ಲ. ಎನ್‌.ಎ.ಹ್ಯಾರಿಸ್‌ ಪ್ರಸ್ತಾಪಿಸುವವರೆಗೂ ನೀವು ಬೆಂಗಳೂರು ಶಾಸಕರು ಏನು ಮಾಡುತ್ತಿದ್ದಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮಲಿಂಗಾರೆಡ್ಡಿ ತಿರುಗೇಟು

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಏನೂ ಮಾಡಿಲ್ಲ, ಆದರೂ ₹25 ಸಾವಿರ ಕೋಟಿ ಬಿಲ್‌ ಪಾವತಿ ಬಾಕಿ ಉಳಿಸಿದೆ. ಗಾರ್ಡನ್‌ ಸಿಟಿ, ಪಿಂಚಣಿದಾರರ ಸ್ವರ್ಗ ಎನ್ನುತ್ತಿದ್ದ ಬೆಂಗಳೂರನ್ನು ಗಾರ್ಬೆಜ್‌ ಸಿಟಿ ಮಾಡಿದವರು ನೀವು. ರಸ್ತೆ ಗುಂಡಿ ಮುಚ್ಚಲೂ ಎರಡು ವರ್ಷ ಹೈಕೋರ್ಟ್ ಮಾನಿಟರ್‌ ಮಾಡಬೇಕಾಯಿತು. ಇದೀಗ ಅಸಹನೆಯಿಂದ ನಮ್ಮ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ತಿರುಗೇಟು ನೀಡಿದರು.

ತೆಲಂಗಾಣ ಸಿಎಂ ಆಯ್ಕೆ: 2ನೇ ದಿನವೂ ಡಿಕೆಶಿ, ಜಮೀರ್‌ ಸದನಕ್ಕೆ ಗೈರು

ಮುನಿರತ್ನ ಮೆಲ್ಸೇತುವೆ ಬಗ್ಗೆ ಮಾತನಾಡುತ್ತಾರೆ. ಚಾಲುಕ್ಯದಿಂದ ಹೆಬ್ಬಾಳವರೆಗೆ ಮೆಲ್ಸೇತುವೆ ಆಗುವುದನ್ನು ತಡೆದಿದ್ದೇ ಬಿಜೆಪಿಯವರು. ಇದೀಗ ನಮ್ಮ ಸರ್ಕಾರ ಬಂದ ತಕ್ಷಣ ನೀವು ಸ್ಥಗಿತಗೊಳಿಸಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಹೆಬ್ಬಾಳದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುತ್ತಿದ್ದೇವೆ. ನಮಗೆ ಕಾಲಾವಕಾಶ ನೀಡಿ ಯೋಜನಾಬದ್ಧ ಅಭಿವೃದ್ಧಿ ಮಾಡಿ ತೋರುತ್ತೇವೆ ಎಂದರು.

ಡಿಕೆಶಿಯನ್ನು ರಾಮನಗರಕ್ಕೆ ಉಸ್ತುವಾರಿ ಮಾಡಿ: ಅಶ್ವತ್ಥ

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗಳೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಅವರು ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಉತ್ತರಿಸಿದರು. ಈ ವೇಳೆ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು, ‘ಈಗ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವವರನ್ನು (ಡಿ.ಕೆ.ಶಿವಕುಮಾರ್) ನೀವು ರಾಮನಗರದಲ್ಲೇ ಇಟ್ಟುಕೊಳ್ಳಿ. ನಮಗೆ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನಾಗಿ ಮಾಡಿ’ ಎಂದು ಕಾಂಗ್ರೆಸ್‌ ಸದಸ್ಯ ಮಾಗಡಿ ಬಾಲಕೃಷ್ಣ ಅವರ ಕಾಲೆಳೆದರು.

click me!