ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಸೋನಾ ಮಸೂರಿ ಅಕ್ಕಿ ಲಭ್ಯ..!

By Kannadaprabha NewsFirst Published Apr 18, 2021, 11:45 AM IST
Highlights

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತ ಖರೀದಿಗೆ ಸರ್ಕಾರ ಒಪ್ಪಿಗೆ| ನ್ಯಾಯಬೆಲೆ ಅಂಗಡಿ ಮೂಲಕ ಗ್ರಾಹಕರಿಗೆ ಸೋನಾ ಮಸೂರಿ ಅಕ್ಕಿ ವಿತರಿಸುವ ಪ್ರಪ್ರಥಮ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ: ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ| 

ಎಸ್‌. ನಾರಾಯಣ 

ಮುನಿರಾಬಾದ್‌(ಏ.18): ನಮಗೆ ನೀಡುವ ಅಕ್ಕಿ ಬರೀ ಕಲ್ಲು, ಮಣ್ಣು, ಹುಳುಗಳಿಂದಲೇ ಕೂಡಿರುತ್ತವೆ ಎಂದು ಆರೋಪ ಮಾಡುತ್ತಿದ್ದ ಎಪಿಎಲ್‌ ಮತ್ತು ಬಿಪಿಎಲ್‌ ಪಡಿತರ ಕಾರ್ಡುದಾರರಿಗೆ ಸರ್ಕಾರದಿಂದ ಸಂತಸದ ಸುದ್ದಿ ನೀಡಿದೆ.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುತ್ತಿರುವ ಪ್ರಸಿದ್ಧ ಸೋನಾ ಮಸೂರಿ ಅಕ್ಕಿಯನ್ನೇ ವಿತರಿಸಲು, ರಾಜ್ಯ ಸರ್ಕಾರ ಅಲ್ಲಿನ ಬತ್ತ ಖರೀದಿಸಲು ಮುಂದಾಗಿದೆ.

ಇದರೊಂದಿಗೆ ನ್ಯಾಯಬೆಲೆ ಅಂಗಡಿ ಮೂಲಕ ಗ್ರಾಹಕರಿಗೆ ಸೋನಾ ಮಸೂರಿ ಅಕ್ಕಿ ವಿತರಿಸುವ ಪ್ರಪ್ರಥಮ ರಾಜ್ಯವಾಗಿ ನಮ್ಮ ರಾಜ್ಯ ಹೊರಹೊಮ್ಮಲಿದೆ ಎಂದು ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಶನಿವಾರ ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಚತ್ತಿಸ್‌ಗಡ ರಾಜ್ಯದಿಂದ 28ಕ್ಕೆ ಕೆಜಿಯಂತೆ ಅಕ್ಕಿ ಖರೀದಿಸಿ ಈಗ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಹಂಚಲಾಗುತ್ತಿತ್ತು. ಚತ್ತಿಸ್‌ಗಡದಿಂದ ನಮ್ಮ ರಾಜ್ಯಕ್ಕೆ ಅಕ್ಕಿ ತರಬೇಕಾದರೆ ಸಾರಿಗೆ ವೆಚ್ಚ ಅಪಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಮುಖ್ಯಮಂತ್ರಿಗೆ ಪತ್ರ ಬರೆದು, ಚತ್ತಿಸ್‌ಗಡ ರಾಜ್ಯದಿಂದ ಅಕ್ಕಿ ತರಿಸುವ ಬದಲು ನಮ್ಮ ರಾಜ್ಯದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 10 ಲಕ್ಷ ಎಕರೆ ಪ್ರದೇಶದಲ್ಲಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬೆಳೆದ ಸೋನಾ ಮಸೂರಿ ಅಕ್ಕಿಯನ್ನು ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸಿ ಅದನ್ನು ನ್ಯಾಯಬೆಲೆ ಅಂಗಡಿ ಮೂಲಕ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ ಸರಬರಾಜು ಮಾಡುವಂತೆ ಸಲಹೆ ನೀಡಿದ್ದೆವು. ಇದರಿಂದ ಅಚ್ಚುಕಟ್ಟು ಪ್ರದೇಶ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬತ್ತ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗಲಿದ್ದು ಕೃಷಿ ಕಾರ್ಮಿಕರಿಗೂ ನೆರವಾಗಲಿದೆ. ಅಲ್ಲದೇ ಮುಚ್ಚಿ ಹೋದ ಅನೇಕ ಅಕ್ಕಿ ಗಿರಣಿಗಳು ಪುನಶ್ಚೇತನಗೊಂಡು ಉದ್ಯೊಗ ಅವಕಾಶಗಳು ಸೃಷ್ಟಿಯಾಗಲಿದೆ. ಇದರಿಂದ ರಾಜ್ಯದ ಅರ್ಥಿಕ ಸ್ಥಿತಿ ಸುಧಾರಿಸಲಿದೆ ಎಂಬ ವಿಷಯ ಪತ್ರದಲ್ಲಿ ಪ್ರಸ್ತಾಪಿಸಿದ್ದಾಗಿ ತಿಪ್ಪೇರುದ್ರಸ್ವಾಮಿ ತಿಳಿಸಿದರು.

ಪಡಿತರ ವಿತರಣೆ ಅಕ್ಕಿ ಪ್ರಮಾಣ ಕಡಿತ

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಒಂದು ಉನ್ನತಮಟ್ಟದ ಸಭೆ ಕರೆದು, ಈ ವಿಷಯ ಚರ್ಚಿಸಿ ರೈತರಿಂದ ಸೋನಾ ಮಸೂರಿ ಅಕ್ಕಿ ಖರೀದಿಸಲು ತೀರ್ಮಾನಿಸಿದ್ದಾರೆ. ರೈತರ ಹಿತ ದೃಷ್ಟಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ಕ್ರಮವು ಶ್ಲಾಘನೀಯ ಎಂದು ಕಾಡಾ ಅಧ್ಯಕ್ಷರು ತಿಳಿಸಿದರು.

ಸರ್ಕಾರವು 75 ಕೆಜಿ ಸೋನಾ ಮಸೂರಿ ಬತ್ತದ ಚೀಲಕ್ಕೆ 1401 ನಿಗದಿ ಮಾಡಿದ್ದು ಈ ಬಾರಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಯಲಿದ್ದು ರೈತರು ಅತಂಕಪಡುವ ಅಗತ್ಯವಿಲ್ಲ. ಸದ್ಯಕ್ಕೆ ಸರ್ಕಾರ ರೈತರಿಂದ 10 ಲಕ್ಷ ಟನ್‌ ಸೋನಾ ಮಸೂರಿ ಅಕ್ಕಿ ಖರೀದಿಸಲಿದೆ ಎಂದರು.

ಬತ್ತ ಮಾರಾಟ ಮಾಡಲು ರೈತರು ಮೇ. 5ರೊಳಗೆ ಸಹಕಾರಿ ಸಂಘಕ್ಕೆ ತೆರಳಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಜೂನ್‌ 30ರವರಗೆ ಸರ್ಕಾರದಿಂದ ಬತ್ತ ಖರೀದಿ ಪ್ರಕ್ರಿಯೆ ನಡೆಯಲಿದ್ದು ರೈತರು ಇದರ ಲಾಭ ಪಡೆಯಬೇಕೆಂದು ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ.
 

click me!