ಶಿರಸಿ: ಬೇಡ್ತಿ-ವರದಾ ಜೋಡಣೆಗೆ ಇನ್ನಷ್ಟು ಚಿಂತನೆ ಅಗತ್ಯ, ಸ್ವರ್ಣವಲ್ಲೀ ಸ್ವಾಮೀಜಿ

Kannadaprabha News   | Asianet News
Published : Mar 22, 2021, 10:19 AM IST
ಶಿರಸಿ: ಬೇಡ್ತಿ-ವರದಾ ಜೋಡಣೆಗೆ ಇನ್ನಷ್ಟು ಚಿಂತನೆ ಅಗತ್ಯ, ಸ್ವರ್ಣವಲ್ಲೀ ಸ್ವಾಮೀಜಿ

ಸಾರಾಂಶ

ಒಡಲು ಬರಿದಾದ ಬೇಡ್ತಿ ನದಿ ಸ್ಥಳ ವೀಕ್ಷಿಸಿದ ಸ್ವರ್ಣವಲ್ಲೀ ಸ್ವಾಮೀಜಿ| 24ರ ಸಭೆಗೆ ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆ| ಈಗಾಗಲೇ ಪ್ರಸ್ತಾಪವಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯತೆಯಿದೆ: ಶ್ರೀಗಳು| 

ಶಿರಸಿ(ಮಾ.21): ಬೇಡ್ತಿ ವರದಾ ನದಿ ಜೋಡಣೆಗೆ ವಿರೋಧ ಪ್ರಬಲವಾಗುತ್ತಿದೆ. ಅಭಿವೃದ್ಧಿ ಯೋಜನೆಗಳ ನಿರೀಕ್ಷೆ ಜನತೆಯಲ್ಲಿದ್ದರೆ, ಇರುವ ಜೀವ ಜಲವನ್ನೂ ಬೇರೆಡೆ ಒಯ್ಯುವ ಯೋಜನೆ ಬಜೆಟ್‌ ನಲ್ಲಿ ಸಿಕ್ಕಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಮಾ. 24ರಂದು ನಗರದ ಟಿಆರ್‌ಸಿ ಸಭಾಭವನದಲ್ಲಿ ಸಭೆ ಕರೆಯಲಾಗಿದ್ದು, ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆ ಇದೆ.

ಬೇಡ್ತಿ ವೀಕ್ಷಿಸಿದ ಶ್ರೀಗಳು:

ನದಿ ಜೋಡಣೆ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬೇಡ್ತಿ ನದಿಯ ಸ್ಥಳವನ್ನು ಭಾನುವಾರ ವೀಕ್ಷಿಸಿದರು. ನದಿ ಈಗಾಗಲೇ ಬರಿದಾಗಿದ್ದುದನ್ನು ಅವರು ಅವಲೋಕಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ಈಗಾಗಲೇ ಪ್ರಸ್ತಾಪವಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯತೆಯಿದೆ. ಬಯಲುಸೀಮೆ ಪ್ರದೇಶಗಳಿಗೆ ಕುಡಿಯಲು ನೀರೇ ಸಿಗಬಾರದು ಎಂಬುದು ನಮ್ಮ ಅಭಿಪ್ರಾಯವಲ್ಲ. ಅಲ್ಲಿನ ನೀರಿನ ಕೊರತೆಯನ್ನೂ ನಾವು ನೋಡಿದ್ದೇವೆ. ಆದರೆ, ಇಲ್ಲಿನ ನದಿಗಳಲ್ಲೂ ನೀರಿನ ತೀವ್ರ ಅಭಾವವಿದೆ. ನೀರಿನ ಲಭ್ಯತೆ ಇಲ್ಲದೇ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿನ ನದಿಗಳಿಗೇ ನೀರು ತುಂಬಿಸಬೇಕು ಎನ್ನುವ ಸ್ಥಿತಿಯಿದೆ. ಹೀಗಿರುವಾಗ ಈ ಭಾಗದ ನೀರನ್ನು ತೆಗೆದುಕೊಂಡು ಹೋದರೆ ಇಲ್ಲಿಯೂ ಬಯಲುಸೀಮೆ ಪ್ರದೇಶದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯಲ್ಲಿ ನೀರಿನ ಕೊರತೆಯ ಅನುಭವವಾಗಿದೆ. ಇದರಿಂದ ಫಲಾನುಭವಿ ಜಿಲ್ಲೆಗಳಿಗೆ ನೀರು ತಲುಪಿಲ್ಲ. ಇದಕ್ಕೆ ಬೇರೆ ಬೇರೆ ಕಾರಣ ಇರಬಹುದು. ಆದರೆ ನೀರಿನ ಕೊರತೆಯೇ ಮುಖ್ಯ ಕಾರಣವಾಗಿದೆ. ವಿಜ್ಞಾನಿಗಳು ಆಗಲೇ ಇದನ್ನು ಹೇಳಿದ್ದರು. ಈ ಭಾಗದಲ್ಲಿ ಇರಲಿ, ಬಯಲುಸೀಮೆ ಪ್ರದೇಶಕ್ಕಿರಲಿ ಎರಡೂ ಕಡೆ ನೀರು ಸಿಗುವ ಉಪಾಯ ಮಾಡಬೇಕು ಎಂದು ಆಗ್ರಹಿಸಿದರು.

ಶಿರಸಿ: ಲಾಕ್‌ಡೌನ್‌ದಲ್ಲಿ ಮತ್ತೊಂದು ಬಾವಿ ತೋಡಿದ ಗೌರಿ..!

ಮಾ. 24ರ ಗೋಷ್ಠಿ ಮುಖ್ಯಾಂಶ

ಅಂದು ಬೆಳಗ್ಗೆ 10ರಿಂದ 11-30ರ ವರೆಗೆ ಗೋಷ್ಠಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಠದ ಪ್ರಮುಖ ವಿ.ಎನ್‌. ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಸರ ಬರಹಗಾರ ನಾಗೇಶ ಹೆಗಡೆ ದಿಕ್ಸೂಚಿ ಮಾತನಾಡಲಿದ್ದಾರೆ. ಡಾ. ಟಿ.ವಿ. ರಾಮಚಂದ್ರ ಉಪನ್ಯಾಸ ನೀಡಲಿದ್ದಾರೆ. ಉದ್ಘಾಟನೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ, ಅನಂತ ಅಶೀಸರ, ಶಾಂತಾರಾಮ ಸಿದ್ದಿ, ಪ್ರಮೋದ ಹೆಗಡೆ ಭಾಗವಹಿಸಲಿದ್ದಾರೆ.

ಮೊದಲ ಗೋಷ್ಠಿಯಲ್ಲಿ ಪಾಂಡುರಂಗ ಹೆಗಡೆ, ಗಣೇಶ ಭಟ್‌ ಉಪ್ಪೋಣಿ, ಡಾ. ಪಿ.ಆರ್‌. ಭಟ್‌, ಬಾಲಚಂದ್ರ ಸಾಯೀಮನೆ, ಜಿ.ವಿ. ಹೆಗಡೆ ಹುಳಗೋಳ, ನರಸಿಂಗ ಹೆಗಡೆ, ನರೇಂದ್ರ ಹೊಂಡಗಾಶಿ, ಮಹೇಶ ತೇಲಂಗ, ಡಿ.ಎಂ. ಭಟ್‌, ಆರ್‌. ವಾಸುದೇವ, ಪ್ರಕಾಶ ಮೇಸ್ತಾ, ಡಾ. ಅಮಿತ ಹೆಗಡೆ, ಡಾ. ಶ್ರೀಧರ ಭಟ್‌, ಶಿವಾನಂದ ಕಳವೆ, ಡಾ. ದೀಪಕ್‌ ಭಟ್‌, ಸುಹಾಸ ಹೆಗಡೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಮೂರನೇ ಗೋಷ್ಠಿ ಜನಪ್ರತಿನಿಧಿಗಳೊಂದಿಗೆ ನಡೆಯಲಿದೆ. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಸದಸ್ಯರಾದ ಉಷಾ ಹೆಗಡೆ, ಜಿ.ಎನ್‌. ಹೆಗಡೆ ಮುರೇಗಾರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಸೇರಿದಂತೆ ವಿವಿಧ ಹಂತದ ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
 

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು