ಶಿರಸಿ: ಲಾಕ್‌ಡೌನ್‌ದಲ್ಲಿ ಮತ್ತೊಂದು ಬಾವಿ ತೋಡಿದ ಗೌರಿ..!

By Kannadaprabha News  |  First Published Mar 22, 2021, 10:02 AM IST

ಇನ್ನೊಂದು ಸಾಧನೆಯ ಮೆಟ್ಟಿಲೇರಿದ ಶಿರಸಿಯ ಗೌರಿ ನಾಯ್ಕ| ಕೊರೋನಾದಿಂದ ಕೂಲಿ ಕೆಲಸ ಸಿಗದಿದ್ದಾಗ ಸಮಯ ಸದುಪಯೋಗ| ಕೂಲಿ ಕೆಲಸ ಮಾಡಿ ಮನೆ ನಿರ್ಮಿಸಿಕೊಂಡ ಗೌರಿ ನಾಯ್ಕ| ಕನ್ನಡಪ್ರಭ ಅಸಾಮಾನ್ಯ ಕನ್ನಡಿಗ| 


ಮಂಜುನಾಥ ಸಾಯಿಮನೆ

ಶಿರಸಿ(ಮಾ.21): ಅಡಕೆ ಗಿಡಗಳಿಗೆ ನೀರಿಲ್ಲ ಎಂಬ ಕಾರಣಕ್ಕೆ ಕೈನಲ್ಲಿ ಕಾಸಿಲ್ಲದ ಸಂದರ್ಭದಲ್ಲಿ ಒಬ್ಬಳೇ ಆಳದ ಬಾವಿ ತೋಡಿ ಸಾಹಸ ಮೆರೆದು ಖ್ಯಾತಿ ಪಡೆದಿದ್ದ ಇಲ್ಲಿಯ ಗಣೇಶನಗರದ ಮಹಿಳೆ ಗೌರಿ ನಾಯ್ಕ ಈಗ ಇನ್ನೊಂದು ಸಾಧನೆಯ ಮೆಟ್ಟಿಲೇರಿದ್ದಾರೆ.

Latest Videos

undefined

ಕೊರೋನಾ ಲಾಕ್‌ಡೌನ್‌ ವೇಳೆ ಅಡಕೆ ತೋಟದ ಇನ್ನೊಂದು ಮೂಲೆಯಲ್ಲಿ ಮತ್ತೆ ಒಬ್ಬರೇ ಇನ್ನೊಂದು ಬಾವಿ ತೋಡಿದ್ದಾರೆ. ಈ ಬೇಸಿಗೆಯಲ್ಲಿಯೂ ಬಾವಿಯಲ್ಲಿ 5 ಅಡಿ ಉತ್ತಮ ನೀರಿದ್ದು, ಅವರ ಸಾಧನೆ ಮತ್ತೆ ಹುಬ್ಬೇರಿಸುವಂತೆ ಮಾಡಿದೆ.

ಕೂಲಿ ಕೆಲಸ ಮಾಡಿ ಜೀವನ ನಡೆಸುವ ಗೌರಿ ನಾಯ್ಕ ಗಣೇಶ ನಗರದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಡಕೆ, ಬಾಳೆ ಗಿಡಗಳನ್ನು ನೆಟ್ಟುಕೊಂಡಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರಾಜ್ಯದೆಲ್ಲೆಡೆ ಬರಗಾಲದ ತೀವ್ರತೆ ಜಾಸ್ತಿಯಾಗಿತ್ತು. ಸಹಜವಾಗಿಯೇ ಶಿರಸಿ ಭಾಗದಲ್ಲಿಯೂ ನೀರಿನ ಕೊರತೆ ಉಂಟಾಗಿತ್ತು. ಅಡಕೆ ಸಸಿಗಳು ಮತ್ತು ಬಾಳೆ ಒಣಗುವುದನ್ನು ಕಂಡು ಮರುಗಿದ ಶ್ರಮಜೀವಿ ಗೌರಿ, ಯಾರ ಸಹಾಯವನ್ನೂ ಪಡೆಯದೇ ಬಾವಿ ನಿರ್ಮಿಸಿದ್ದರು. ಈ ಮೂಲಕ ತಾನೂ ಬಾಳಿ, ಬಾಳೆ, ಅಡಕೆ ಗಿಡಗಳಿಗೂ ಜೀವ ನೀಡಿದ್ದರು.

ಮಸೀದಿಗಳಲ್ಲಿ ಮೈಕ್‌ ಬಳಕೆ ನಿರ್ಬಂಧ ಕಾನೂನು ಜಾರಿಯಾಗದಿದ್ದಲ್ಲಿ ಸಾವಿರ ಠಾಣೆಗಳಲ್ಲಿ ದೂರು: ಮುತಾಲಿಕ್‌

ಆದರೆ, ಅಡಕೆ ಮತ್ತು ಬಾಳೆಗೆ ನೀರು ಸಮರ್ಪಕವಾಗಿ ಸಾಲುತ್ತಿರಲಿಲ್ಲ. ಕಳೆದ ಏಪ್ರಿಲ್‌, ಮೇ ತಿಂಗಳ ವೇಳೆ ಕೊರೊನಾದಿಂದಾಗಿ ಎಲ್ಲೆಡೆ ಲಾಕ್‌ಡೌನ್‌ ಆರಂಭಗೊಂಡಾಗ ಗೌರಿ ಕೂಲಿ ಕೆಲಸಕ್ಕೂ ತೆರಳದಂತಾಯಿತು. ಇರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿದ ಗೌರಿ ನಾಯ್ಕ, ನೀರಿನ ಕೊರತೆ ಉಂಟಾದ ಪ್ರದೇಶದಲ್ಲಿ ಇನ್ನೊಂದು ಬಾವಿ ತೋಡಲು ನಿರ್ಧರಿಸಿ ಟೊಂಕ ಕಟ್ಟಿದರು. ಭಗವಂತನ ಮೇಲೆ ಭಕ್ತಿ, ಮಾಡುವ ಕೆಲಸದಲ್ಲಿ ಶ್ರದ್ಧೆಯೇ ಅವರ ಬಂಡವಾಳವಾಗಿದ್ದು, ಲಾಕ್‌ಡೌನ್‌ ಅವಧಿಯನ್ನು ಸದುಪಯೋಗ ಮಾಡಿಸಿಕೊಂಡಿದ್ದಾರೆ. ಆ ಬಳಿಕ ಜೀವನೋಪಾಯಕ್ಕಾಗಿ ಇನ್ನೊಬ್ಬರ ಮನೆ ಕೆಲಸಕ್ಕೆ ತೆರಳುವುದು ಅನಿವಾರ್ಯವಾಗಿತ್ತು. ಲಾಕ್‌ಡೌನ್‌ ಬಳಿಕ ಸಮಯ ಸಿಕ್ಕಾಗಲೆಲ್ಲ ಬಾವಿ ತೋಡುವ ಕಾರ್ಯವನ್ನು ಮುಂದುವರಿಸಿದ್ದಾರೆ. ಸತತ 8 ತಿಂಗಳ ಕಾಲ ಈ ಕಾರ್ಯ ನಡೆಸಿ, ಅಂತೂ 60 ಅಡಿ ಆಳದ ಬಾವಿ ಕಾರ್ಯವನ್ನು ಈಗ ಪೂರ್ಣಗೊಳಿಸಿದ್ದಾರೆ. ಗೌರಿಯ ಸಾಧನೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಭಗವಂತನ ಮೇಲೆ ಮತ್ತು ನಾವು ಮಾಡುವ ಕೆಲಸದ ನಿಷ್ಠೆ ನಮಗೆ ಸಿಗುವ ಅತಿ ದೊಡ್ಡ ಶಕ್ತಿ ಎನ್ನುತ್ತಾಳೆ ಗೌರಿ.

ಕನ್ನಡಪ್ರಭ ಅಸಾಮಾನ್ಯ ಕನ್ನಡಿಗ

ಗೌರಿ ನಾಯ್ಕ ಅವರು ಮೊದಲ ಬಾರಿ ಬಾವಿ ತೋಡಿದಾಗ ಯಾರ ಗಮನಕ್ಕೂ ಬರದೇ ಈ ಸಾಧನೆ ನಡೆದಿತ್ತು. ಆಕೆಯ ಈ ಸಾಹಸವನ್ನು ‘ಕನ್ನಡಪ್ರಭ’ ದಿನಪತ್ರಿಕೆ ಬೆಳಕಿಗೆ ತಂದಿತ್ತಲ್ಲದೇ 2018ರಲ್ಲಿ ಅಸಾಮಾನ್ಯ ಕನ್ನಡಿಗ ಪ್ರಶಸ್ತಿಯನ್ನೂ ಪ್ರದಾನ ಮಾಡಿ ಗೌರವಿಸಿತ್ತು. ಆ ಬಳಿಕ ಹಲವು ಸಂಘಟನೆಗಳು ಗೌರಿಯನ್ನು ಸನ್ಮಾನಿಸಿದ್ದವು.

ಯಾರಿಂದಲೂ ಸಹಾಯ ನಿರೀಕ್ಷಿಸದ ಛಲಗಾತಿ

ಗೌರಿ ನಾಯ್ಕ ತಾನು ಮಾಡುವ ಕಾರ್ಯಕ್ಕೆ ಯಾರ ಸಹಾಯವನ್ನೂ ನಿರೀಕ್ಷಿಸುವುದಿಲ್ಲ, ಪಡೆಯುವುದಿಲ್ಲ. ಆಕೆಯ ಮಗ ಅಂಗಡಿ ನಡೆಸುತ್ತಿದ್ದು, ಅವರಿಗೆ ತೊಂದರೆ ಆಗಬಾರದು ಎಂದು ಆಕೆ ತಾನೊಬ್ಬನೇ ಬಾವಿ ನಿರ್ಮಾಣ ಕಾರ್ಯ ನಡೆಸಿದ್ದಾಳೆ. ಸುಮಾರು 250 ಅಡಕೆ ಗಿಡಗಳು, ಅಷ್ಟೇ ಪ್ರಮಾಣದ ಬಾಳೆ ಗಿಡಗಳನ್ನು ಮನೆ ಸುತ್ತಮುತ್ತ ಬೆಳೆಸಿಕೊಂಡಿರುವ 52 ವಯಸ್ಸಿನ ಗೌರಿ ನಾಯ್ಕ, ಛಲ ಮತ್ತು ಮೌನ ಕಾರ್ಯದ ಮೂಲಕ ಸಾಧನೆ ಮಾಡಿದ್ದಾಳೆ.

ಎರಡನೇ ಬಾವಿ ತೋಡುವಾಗ ಧರೆಯ ಮಣ್ಣನ್ನೂ ಸ್ವಲ್ಪ ತೆಗೆಯಬೇಕಾಯಿತು. ಅಡಕೆ, ಬಾಳೆಗೆ ನೀರು ನೀಡಲು ಈ ಬಾವಿಯ ಅಗತ್ಯತೆ ಇತ್ತು. ದೇವರ ದಯೆಯಿಂದ ಈ ಕಾರ್ಯ ಮಾಡಲು ಸಾಧ್ಯವಾಯಿತು ಎಂದು ಗೌರಿ ನಾಯ್ಕ ತಿಳಿಸಿದ್ದಾರೆ.
 

click me!