ಮುಖ್ಯಮಂತ್ರಿಯಾಗಿ ಯಡಿಯೂರಪ್ಪರನ್ನು ಮುಂದುವರಿಸಲೇಬೇಕು: ಮಠಾಧೀಶರು

By Kannadaprabha NewsFirst Published Jun 18, 2021, 3:01 PM IST
Highlights

* ಬಿಎಸ್‌ವೈ ಬೆಂಬಲಕ್ಕೆ ನಿಂತ ವೀರಶೈವ ಮಠಾಧೀಶರ ಧರ್ಮಪರಿಷತ್‌
* ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮಿಸಿದ ಯಡಿಯೂರಪ್ಪ
* ವೀರಶೈವರನ್ನು ಸಿಎಂ ಮಾಡಬೇಕು ಎಂಬ ವಿಚಾರ ಬಂದಾಗ ಸಮಸ್ಯೆ ಮಾಡೋದು ಏಕೆ? 
 

ಬಳ್ಳಾರಿ(ಜೂ.18):  ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಿಲ್ಲೆಯ ವಿವಿಧ ಮಠಾಧೀಶರು, ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನು ಎರಡು ವರ್ಷಗಳ ಕಾಲ ಬಿ.ಎಸ್‌. ಯಡಿಯೂರಪ್ಪ ಅವರೇ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ.

ನಗರದ ಕಲ್ಯಾಣಸ್ವಾಮಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳ್ಳಾರಿ ಜಿಲ್ಲಾ ವೀರಶೈವ ಲಿಂಗಾಯತ ಧರ್ಮಪರಿಷತ್‌ನ 20ಕ್ಕೂ ಹೆಚ್ಚು ಮಠಾಧೀಶರು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮಿಸಿ, ಯಶಸ್ವಿಯಾದ ಯಡಿಯೂರಪ್ಪರಂತಹ ಕ್ರಿಯಾಶೀಲ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಕುರಿತು ಚರ್ಚಿಸುತ್ತಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.

ಬಿಎಸ್‌ವೈ ಅವರು ಸಿಎಂ ಆಗಿ ಮುಂದುವರಿಯಬೇಕು ಎಂಬುದು ಜಿಲ್ಲೆಯ ಇಡೀ ವೀರಶೈವ ಲಿಂಗಾಯತ ಸಮುದಾಯದ ಅಭಿಪ್ರಾಯವೇ ಹೊರತು, ನಮ್ಮ ವೈಯಕ್ತಿಕ ನಿಲುವಲ್ಲ. ವೀರಶೈವ ಲಿಂಗಾಯತ ಸಮುದಾಯ ಹೇಳುವುದನ್ನೇ ಅವರ ಮುಖವಾಣಿಯಾಗಿ ನಾವು ಮಾತನಾಡುತ್ತಿದ್ದೇವೆ. ‘ಯಡಿಯೂರಪ್ಪ ಅವರು ಬಿಜೆಪಿಗೆ ಆಕ್ಸಿಜನ್‌ ಇದ್ದಹಾಗೆ. ಬೇರೆಯವರು ಆ ಸ್ಥಾನಕ್ಕೆ ಬಂದರೆ ಆ ಪಕ್ಷಕ್ಕೆ ಆಕ್ಸಿಜನ್‌ ಸಂಪೂರ್ಣ ಇಳಿಕೆಯಾಗಿ ಐಸಿಯುಗೆ ಹೋಗಬೇಕಾಗುತ್ತದೆ ಎಂದು ವೀರಶೈವ ಲಿಂಗಾಯತರು ಹೇಳುತ್ತಿದ್ದಾರೆ’ ಎಂದರು.

ಬಳ್ಳಾರಿಯಲ್ಲಿ ಹೊಲಗಳಿಗೇ ತೆರಳಿ ಕೊರೋನಾ ಲಸಿಕೆ ಅಭಿಯಾನ

ಬಿಎಸ್‌ವೈ ಅವರಿಗೆ ವಯಸ್ಸಾಗಿದೆ. ಹೀಗಾಗಿಯೇ ಬದಲಾಯಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವಾಗ ವಯಸ್ಸಾಗಿರಲಿಲ್ಲವೇ? ಅಧಿಕಾರ ಸಿಕ್ಕ ಬಳಿಕ ಈಗ ಅವರ ವಯಸ್ಸು ನೆನಪಾಯಿತೇ ಎಂದು ಪ್ರಶ್ನಿಸಿದ ಮಠಾಧೀಶರು, ಬರುವ ಚುನಾವಣೆಯಲ್ಲಿ ಸಮರ್ಥ ನಾಯಕರು ಯಾರಿದ್ದಾರೋ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಸಿ, ಮುಖ್ಯಮಂತ್ರಿಯನ್ನಾಗಿ ಮಾಡಿ. ಅದಕ್ಕೆ ನಮ್ಮ ಯಾವ ತಕರಾರೂ ಇಲ್ಲ ಎಂದು ಹೇಳಿದರು.

ಕಮ್ಮರಚೇಡು ಕಲ್ಯಾಣಸ್ವಾಮಿಮಠದ ಶ್ರೀಕಲ್ಯಾಣಸ್ವಾಮಿ, ಎಮ್ಮಿಗನೂರಿನ ಹಂಪಿಸಾವಿರ ದೇವರುಮಠದ ವಾಮದೇವ ಶಿವಾಚಾರ್ಯ ಸ್ವಾಮಿ, ಮುಷ್ಠೂರಿನ ಓಂಕಾರೇಶ್ವರಮಠದ ರುದ್ರಮುನಿ ಶಿವಾಚಾರ್ಯಸ್ವಾಮಿ, ಮರಿಯಮ್ಮನಹಳ್ಳಿಗುರುಸಿದ್ದೇಶ್ವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿ, ಬುಕ್ಕಸಾಗರದ ಕರಿಸಿದ್ಧೇಶ್ವರಶಿವಾಚಾರ್ಯಸ್ವಾಮಿ, ಹರಗಿನಡೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯಸ್ವಾಮಿ, ಹಳೇಕೋಟೆಯ ಮರಿಸಿದ್ಧಲಿಂಗ ಶಿವಾಚಾರ್ಯಸ್ವಾಮಿ, ಸಿರುಗುಪ್ಪ ಗುರುಬಸವಮಠದ ಬಸವಭೂಷಣಸ್ವಾಮಿ, ಉತ್ತಂಗಿಯ ಸೋಮಶೇಖರಸ್ವಾಮಿ, ಹೂವಿನಹಡಗಲಿ ಗವಿಮಠದ ಡಾ. ಹಿರಿಯ ಶಾಂತವೀರಮಹಾಸ್ವಾಮಿ, ಮಲ್ಲನಕೇರಿಯ ಚೆನ್ನಬಸವಸ್ವಾಮಿ, ನಂದಿಪುರಮಠದ ಮಹೇಶ್ವರಸ್ವಾಮಿ, ಬೆಣ್ಣೆಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯಸ್ವಾಮಿ, ವೀರಾಪುರ ಜಡೇಶರಣರು ಸೇರಿದಂತೆ ವಿವಿಧ ಮಠಾಧೀಶರು ಸುದ್ದಿಗೋಷ್ಠಿಯಲ್ಲಿದ್ದರು.

ಬೆಲ್ಲ- ಸಕ್ಕರೆ ಬಿಎಸ್‌ವೈಗೆ ಸಮವಲ್ಲ...

ವೀರಶೈವರು ಮುಖ್ಯಮಂತ್ರಿಯಾಗುತ್ತಾರೆ ಎಂದಾಗಲೇ ನಾನಾ ರೀತಿಯ ತೊಂದರೆಗಳು ಎದುರಾಗುತ್ತವೆ. ಬಿಎಸ್‌ವೈ ಸಿಎಂ ಮಾಡುವಾಗಲೂ ಈ ಹಿಂದೆ ತಕರಾರು ಮಾಡಲಾಯಿತು. ವೀರಶೈವರನ್ನು ಸಿಎಂ ಮಾಡಬೇಕು ಎಂಬ ವಿಚಾರ ಬಂದಾಗ ಸಮಸ್ಯೆ ಮಾಡೋದು ಏಕೆ? ಬಿಎಸ್‌ವೈರಿಂದ ಬೆಳೆದವರೇ ಇದೀಗ ಸಿಎಂ ಆಗಬೇಕು ಎನ್ನುತ್ತಿದ್ದು, ಇದಕ್ಕೆ ಬಿಜೆಪಿಯ ಕೇಂದ್ರದ ನಾಯಕರು ಕಿವಿಗೊಡಬಾರದು ಎಂದು ಹಿರೇಹಡಗಲಿಯ ಹಾಲಸ್ವಾಮಿಮಠದ ಹಾಲವೀರಪ್ಪಜ್ಜ ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವೀರಶೈವರಿಗೆ ತೊಂದರೆಯಾದರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದ ಉದಾಹರಣೆಗಳಿದ್ದು, ಬಿಎಸ್‌ವೈ ಜತೆ ರಾಜ್ಯದ ಮಠಾಧೀಶರು ಸೇರಿದಂತೆ ಇಡೀ ವೀರಶೈವ ಲಿಂಗಾಯತ ಸಮುದಾಯ ಅವರ ಪರವಾಗಿ ನಿಂತಿದೆ ಎಂದರಲ್ಲದೆ, ಬೆಲ್ಲ ಸಕ್ಕರೆಗಳು ಬಿಎಸ್‌ವೈಗೆ ಸಮವಲ್ಲ ಎಂದು ಪರೋಕ್ಷವಾಗಿ ಅರವಿಂದ ಬೆಲ್ಲದ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 

click me!