* ಮೀಸಲಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ
* ಪಂಚಮಸಾಲಿ ಮೀಸಲಾತಿಗಾಗಿ ಸಮಾವೇಶದಲ್ಲಿ ಬಸವಜಯ ಮೃತ್ಯುಂಜಯ ಶ್ರೀ ಎಚ್ಚರಿಕೆ
* ಪಿಎಸ್‌ಐ ನೇಮಕಾತಿಯಲ್ಲಿ ಎಲ್ಲರೂ ಭಾಗಿ
ದೋಟಿಹಾಳ(ಮೇ.28): ಪಂಚಮಸಾಲಿ ಸಮುದಾಯದ ಋುಣ ತೀರಿಸಬೇಕೆಂಬ ಮನಸ್ಸಿದ್ದರೆ ಬೇಡಿಕೆ ಈಡೇರಿಸಬೇಕು. ಮಾಡು ಇಲ್ಲವೆ ಮಡಿ ಹೋರಾಟದ ನಿರ್ಧಾರ ಕೈಗೊಳ್ಳಲಾಗಿದೆ. 2022 ಮುಗಿಯುವುದರೊಳಗೆ ಮೀಸಲಾತಿ ಪಡೆದೇ ಮಡಿಯುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಪಂಚಮಸಾಲಿ ಪೀಠದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಕುಷ್ಟಗಿ ತಾಲೂಕಿನ ದೋಟಿಹಾಳ ಸಮೀಪದ ಬಳೂಟಗಿ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಸಮಾವೇಶ, ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜಕ್ಕೋಸ್ಕರ ದೊಡ್ಡ ಮಠ ಕಟ್ಟಿಕೊಡಿ ಎಂದು ಕೇಳುತ್ತಿಲ್ಲ, ಮಠಕ್ಕೆ ಅನುದಾನ ಕೊಡಿ ಎಂದು ಕೇಳುತ್ತಿಲ್ಲ. ಪಂಚಮಸಾಲಿ ಸಮಾಜದಲ್ಲಿ ಲಕ್ಷಾಂತರ ಬಡಕುಟುಂಬಗಳಿದ್ದು, ಅಭಿವೃದ್ಧಿಗಾಗಿ ಮೀಸಲಾತಿ ಅನಿವಾರ್ಯವಾಗಿದೆ ಎಂದರು.
ಕಾಂಗ್ರೆಸ್ನ ಇಬ್ಬರು ಪ್ರಭಾವಿ ನಾಯಕರು ಬಿಜೆಪಿಗೆ ಬರಲು ನಾಟಕ ಮಾಡ್ತಿದ್ದಾರೆ- ಯತ್ನಾಳ್ ಬಾಂಬ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡುವ ದಿನಾಂಕವನ್ನು ಸ್ಪಷ್ಟವಾಗಿ ಹೇಳಬೇಕು. ಇಲ್ಲವೆಂದರೆ ಮೀಸಲಾತಿಯನ್ನು ಕೊಡಲು ಕಷ್ಟವಾಗುತ್ತದೆ ಎಂಬುದನ್ನಾದರೂ ಹೇಳಬೇಕು. ಸಮುದಾಯದ ಕ್ಷಮೆ ಕೇಳಿದರೆ ಅವರನ್ನು ಕೇಳುವುದನ್ನೇ ಬಿಡುತ್ತೇವೆ. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಪಟ್ಟಿಗೆ ಸೇರಿಸುವ ಕುರಿತು ಸ್ಪಷ್ಟಭರವಸೆ ನೀಡದಿದ್ದರೆ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.
ಪಂಚಮಸಾಲಿ ಸಮಾಜದ ರಾಷ್ಟ್ರಾಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪಡೆದುಕೊಂಡೆ ಸಾಯುತ್ತೇವೆ ಎಂದು ಎಚ್ಚರಿಸಿದರು.
ನನ್ನ ಪ್ರಾಣ ಇರುವವರೆಗೂ ಸಮಾಜಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ರಾಜಕೀಯವನ್ನು ಬದಿಗೊತ್ತಿ ಸಮಾಜದ ಏಳಿಗೆಗಾಗಿ ನಾನು ಶ್ರಮಿಸುತ್ತೇನೆ ಎಂದರು.
ವಿರಕ್ತಮಠ ನೆಲೋಗಿಯ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿದರು. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೆ. ಶರಣಪ್ಪ ವಕೀಲರು, ಬಸವರಾಹ ಹಳ್ಳೂರ, ಸಮಾಜದ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ, ಉಮೇಶ ಮಂಗಳೂರು, ದೇವೆಂದ್ರಪ್ಪ ಬಳೂಟಗಿ, ಚನ್ನಪ್ಪ ನಾಲತ್ವಾಡ, ಸಂಗಪ್ಪ ವಂಕಲಕುಂಟಿ ಇತರರು ಭಾಗವಹಿಸಿದ್ದರು.
ಮಂತ್ರಿ ಸ್ಥಾನಕ್ಕಾಗಿ 10 ಕೋಟಿ ಪಡೆದ ಸ್ವಾಮೀಜಿ: ಯತ್ನಾಳ
ಮಂತ್ರಿ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ ಸ್ವಾಮೀಜಿಯೊಬ್ಬರು ಆಕಾಂಕ್ಷಿಯಿಂದ 10 ಕೋಟಿ ಪಡೆದುಕೊಂಡು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾಳ
ಬಳೂಟಗಿ ಗ್ರಾಮದಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕೂಡಲಸಂಗಮದ ಶ್ರೀಗಳಿಗೆ ನೀವು ಹಣ ತೆಗೆದುಕೊಂಡಿದ್ದೇ ಆದರೆ ನಿಮ್ಮ ಜತೆಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದರು.
ಪಿಎಸ್‌ಐ ನೇಮಕಾತಿಯಲ್ಲಿ ಎಲ್ಲರೂ ಭಾಗಿ:
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಪಿಎಸ್‌ಐ ಹುದ್ದೆಯ ನೇಮಕಾತಿಯಲ್ಲಿ ಆರೋಪಿಗಳೆಲ್ಲರೂ ಸಿಕ್ಕಿಬಿದ್ದಿದ್ದಾರೆ. ಇನ್ನು ಒಂದು ತಿಂಗಳ ಒಳಗಾಗಿ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುತ್ತಾರೆ ಎಂದೂ ಯತ್ನಾಳ್ ಆರೋಪಿಸಿದರು.