ವಾಯವ್ಯ ಸಾರಿಗೆಗೆ ಬಿಎಂಟಿಸಿಯ ಗುಜರಿ ಬಸ್‌..!

By Kannadaprabha News  |  First Published May 28, 2022, 7:30 AM IST

*  ಬೆಂಗಳೂರಲ್ಲಿ ಓಡಿಸಿ ಬಿಟ್ಟಿರುವ 100 ಬಸ್‌ ಖರೀದಿಗೆ ನಿರ್ಧಾರ
*  ಪ್ರತಿ ಬಸ್‌ಗೆ 50 ಸಾವಿರದಿಂದ 1 ಲಕ್ಷ
*  ಸರ್ಕಾರ ವಿಶೇಷ ಅನುದಾನ ನೀಡಿ ಕೊಡಿಸುವ ವ್ಯವಸ್ಥೆ ಮಾಡಲಿ
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.28): ಉತ್ತರ ಕರ್ನಾಟಕ ಎಂದರೆ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತದೆ ಎಂಬ ಆರೋಪ ಸರ್ವೆ ಸಾಮಾನ್ಯವಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ವಾಯವ್ಯ ಸಾರಿಗೆ ಸಂಸ್ಥೆಗೆ ಬೆಂಗಳೂರಲ್ಲಿ ಓಡಾಡಿ ಗುಜರಿಯಾಗಿರುವ ಬಸ್‌ಗಳು ಬರಲಿವೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Latest Videos

undefined

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ (ಬಿಎಂಟಿಸಿ) ನೂರಾರು ಬಸ್‌ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದೆ. ಬಹುತೇಕ ಎಲ್ಲವೂ ಲಕ್ಷಗಟ್ಟಲೇ ಕಿಮೀ ಓಡಾಡಿದ ಬಸ್‌ಗಳಾಗಿವೆ. ಈ ಬಸ್‌ಗಳು ಸಂಚಾರಕ್ಕೆ ಅಯೋಗ್ಯವಾಗಿವೆ ಎಂದುಕೊಂಡೇ ಅವುಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ನಿರ್ಧರಿಸಿದೆ. ಆದರೆ ಆ ಬಸ್‌ಗಳಲ್ಲಿ 100ಕ್ಕೂ ಅಧಿಕ ಬಸ್‌ಗಳನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಖರೀದಿಸಲು ನಿರ್ಧರಿಸಿದೆ.

NWKRTC: ವಾಯವ್ಯ ಸಾರಿಗೆ ಒಂದೇ ದಿನ 6 ಕೋಟಿ ಆದಾಯ

ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಚಿಕ್ಕೋಡಿ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ ಆರು ಜಿಲ್ಲೆಗಳ 9 ವಿಭಾಗಗಳು ಬರುತ್ತವೆ. ಬರೋಬ್ಬರಿ 4 ಸಾವಿರಕ್ಕೂ ಅಧಿಕ ಬಸ್‌ಗಳು ಸದ್ಯ ಸಂಚರಿಸುತ್ತಿವೆ. ಆದರೂ ಸಂಸ್ಥೆಯ ವ್ಯಾಪ್ತಿಯಲ್ಲಿ ಸಮರ್ಪಕ ಬಸ್‌ ಸೇವೆ ಲಭ್ಯವಾಗುತ್ತಿಲ್ಲ. ಇದೀಗ ಹೊಸ ಬಸ್‌ ಖರೀದಿಸಲು ಸಂಸ್ಥೆಗೆ ಶಕ್ತಿ ಇಲ್ಲವಂತೆ. ಅದಕ್ಕಾಗಿ ಬಿಎಂಟಿಸಿಯಿಂದ ಹಳೆ ಬಸ್‌ಗಳನ್ನು ಅಂದರೆ ಅಲ್ಲಿ ಬಳಸಿ ಗುಜರಿಗೆ ಹಾಕಲು ನಿರ್ಧರಿಸಿರುವ ಬಸ್‌ಗಳನ್ನು ಇಲ್ಲಿಗೆ ತರಲು ನಿರ್ಧರಿಸಿದೆ.

50 ಸಾವಿರದಿಂದ 1 ಲಕ್ಷ:

ಹೀಗೆ ಗುಜರಿಗೆ ಹಾಕಲಿರುವ ಬಸ್‌ಗಳಿಗೆ ವಾಯವ್ಯ ಸಾರಿಗೆ . 50 ಸಾವಿರದಿಂದ . 1 ಲಕ್ಷ ವರೆಗೂ ಕೊಟ್ಟು ಬಿಎಂಟಿಸಿಯಿಂದ ಖರೀದಿಸಲು ನಿರ್ಧರಿಸಿದೆ. ಈ ಸಂಬಂಧ ಸಂಸ್ಥೆಯ ಬೋರ್ಡ್‌ ಮಿಟಿಂಗ್‌ನಲ್ಲೇ ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲಿನ ಎಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿಗಳೆಲ್ಲ ಅಲ್ಲಿಗೆ ತೆರಳಿ ಬಸ್‌ಗಳನ್ನು ಪರಿಶೀಲಿಸಿಕೊಂಡು ಬಂದಿರುವುದುಂಟು. ಇಲ್ಲಿಂದ ಬಸ್‌ ಖರೀದಿಸುವ ಪ್ರಸ್ತಾವನೆಯನ್ನೂ ಅಲ್ಲಿಗೆ ರವಾನಿಸಲಾಗಿದೆ. ಅದಕ್ಕೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಇನ್ನೊಂದು ವಾರ ಅಥವಾ ಹದಿನೈದು ದಿನ, ಒಂದು ತಿಂಗಳಲ್ಲಿ ಬಸ್‌ ಖರೀದಿ ಪ್ರಕ್ರಿಯೆ ಮುಗಿಯಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಆಕ್ರೋಶ:

ಉತ್ತರ ಕರ್ನಾಟಕದಲ್ಲಿ ಮೊದಲೇ ರಸ್ತೆಗಳು ಸರಿಯಿಲ್ಲ. ಇನ್ನೂ ಬಿಎಂಟಿಸಿಯಲ್ಲಿ ಬಳಸಿ ಗುಜರಿ ಹಾಕಲು ಸಿದ್ಧವಾಗಿರುವ ಬಸ್‌ಗಳನ್ನು ಇಲ್ಲಿಗೆ ತಂದರೆ ಪ್ರಯೋಜನ ವೇನು? ನಾವೇನು ಮಲತಾಯಿ ಮಕ್ಕಳಾ? ನಮಗೇಕೆ ಈ ಶಿಕ್ಷೆ? ಎಂದು ಪ್ರಶ್ನಿಸುವ ಸಾರ್ವಜನಿಕರು, ಒಂದು ವೇಳೆ ಸಂಸ್ಥೆಯಲ್ಲಿ ಹೊಸ ಬಸ್‌ ಖರೀದಿಸಲು ದುಡ್ಡು ಇಲ್ಲದಿದ್ದಲ್ಲಿ ಸರ್ಕಾರವೇ ವಿಶೇಷ ಅನುದಾನ ನೀಡಿ ಕೊಡಿಸುವ ವ್ಯವಸ್ಥೆ ಮಾಡಲಿ. ಅದು ಬಿಟ್ಟು ಅಲ್ಲಿನ ಗುಜರಿ ಬಸ್‌ ತಂದು ಇಲ್ಲಿ ಓಡಿಸುವುದು ಎಷ್ಟುಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದವರೇ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಗಮನಿಸಿ ಕೂಡಲೇ ಹಳೆ ಬಸ್‌ಗಳನ್ನು ಖರೀದಿಸುವ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಹೊಸ ಬಸ್‌ ಖರೀದಿಸಿ ಕೊಡಲು ಸರ್ಕಾರ ಮುಂದಾಗಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನಾಗರಿಕರದ್ದು.

NWKRTC: ದುಡಿದ ಹಣಕ್ಕಾಗಿ ಅಲೆದಾಟ: ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ನಿವೃತ್ತ ನೌಕರರ ಆಕ್ರೋಶ

ಒಟ್ಟಿನಲ್ಲಿ ಬೆಂಗಳೂರಲ್ಲಿ ಗುಜರಿಗೆ ಹೋಗುವ ಬಸ್‌ಗಳನ್ನು ವಾಯವ್ಯ ಸಾರಿಗೆ ಸಂಸ್ಥೆ ಖರೀದಿಸಲು ನಿರ್ಧರಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿರುವುದಂತೂ ಸತ್ಯ. ಇನ್ನೂ ಸರ್ಕಾರವೇನಾದರೂ ಇದನ್ನು ಸ್ಥಗಿತಗೊಳಿಸಿ ಹೊಸ ಬಸ್‌ ಖರೀದಿಗೆ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ನಮ್ಮಲ್ಲಿ ಹೊಸ ಬಸ್‌ ಖರೀದಿಗೆ ಬೇಕಾಗುವಷ್ಟು ಹಣಕಾಸಿಲ್ಲ. ಅದಕ್ಕಾಗಿ ಬಿಎಂಟಿಸಿಯಲ್ಲಿನ ಹಳೆ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದೇವೆ. ಪ್ರತಿ ಬಸ್‌ಗೆ . 50 ಸಾವಿರದಿಂದ . 1 ಲಕ್ಷ ತಗುಲಲಿದೆ. ಈ ಸಂಬಂಧ ನಮ್ಮ ಎಂಜಿನಿಯರ್‌, ತಾಂತ್ರಿಕ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿಕೊಂಡು ಬಂದಿದೆ ಅಂತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಹೇಳಿದ್ದಾರೆ.  

ಮುಖ್ಯಮಂತ್ರಿಗಳು ಈ ಭಾಗದವರೇ ಇದ್ದಾಗಲೂ ಇಲ್ಲಿಗೆ ಹಳೆಯ ಗುಜರಿ ಬಸ್‌ ಖರೀದಿಸಲು ಮುಂದಾಗಿರುವುದು ಬೇಸರದ ಸಂಗತಿ. ಉತ್ತರ ಕರ್ನಾಟಕದ ಜನತೆಯೇನು ಮಲತಾಯಿ ಮಕ್ಕಳಾ? ನಾವೇನು ತಪ್ಪು ಮಾಡಿದ್ದೇವೆ. ಅದನ್ನಾದರೂ ಈ ಸರ್ಕಾರ ತಿಳಿಸಲಿ ಅಂತ ಕಾಂಗ್ರೆಸ್‌ ಮುಖಂಡ ರಾಜಶೇಖರ ಮೆಣಸಿನಕಾಯಿ ತಿಳಿಸಿದ್ದಾರೆ. 
 

click me!