ಬೆಂಗ್ಳೂರಿನ ಕ್ರಿಮಿನಲ್‌ಗಳ ಮೇಲೆ ಕಣ್ಗಾವಲು: ಕಮಿಷನರ್‌ ಪ್ರತಾಪ್‌ ರೆಡ್ಡಿ

Published : May 18, 2022, 04:59 AM IST
ಬೆಂಗ್ಳೂರಿನ ಕ್ರಿಮಿನಲ್‌ಗಳ ಮೇಲೆ ಕಣ್ಗಾವಲು: ಕಮಿಷನರ್‌ ಪ್ರತಾಪ್‌ ರೆಡ್ಡಿ

ಸಾರಾಂಶ

*  ಕ್ರಿಮಿನಲ್‌ಗಳ ಜತೆ ಪೊಲೀಸರ ಸ್ನೇಹ ಸಹಿಸಲ್ಲ: ರೆಡ್ಡಿ *  ವೃತ್ತಿಪರ ಕ್ರಿಮಿನಲ್‌ಗಳ ಮೇಲಿನ ಕಣ್ಗಾವಲಿಗೆ ಡಿಸಿಪಿ ಮಟ್ಟದಲ್ಲಿ ವಿಶೇಷ ಘಟಕ *  ಬೆಂಗಳೂರಿಗೆ ನಂಬಿಕೆ ಹಾಗೂ ಜವಾಬ್ದಾರಿಯುತ ಪೊಲೀಸ್‌ ವ್ಯವಸ್ಥೆ ನೀಡುತ್ತೇನೆ   

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಮೇ.18): ರಾಜಧಾನಿ ವ್ಯಾಪ್ತಿಯಲ್ಲಿ ನಡೆಯುವ ಬಹುಮುಖ್ಯ ಅಪರಾಧ ಕೃತ್ಯಗಳ ತನಿಖೆ ನಿರ್ವಹಣೆಗೆ ಹಾಗೂ ವೃತ್ತಿಪರ ಕ್ರಿಮಿನಲ್‌ಗಳ ಮೇಲೆ ನಿರಂತರ ಕಣ್ಗಾವಲಿಗೆ ಡಿಸಿಪಿ ಮಟ್ಟದಲ್ಲಿ ವಿಶೇಷ ಘಟಕಗಳನ್ನು ರಚಿಸಲಾಗುತ್ತದೆ ಎಂದು ನಗರ ನೂತನ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ(Pratap Reddy) ಭರವಸೆ ನೀಡಿದ್ದಾರೆ.

ಮಂಗಳವಾರ ನಗರ ಪೊಲೀಸ್‌ ಆಯುಕ್ತರಾಗಿ(Commissioner of Police) ಅಧಿಕಾರ ಸ್ವೀಕರಿಸಿದ ಬಳಿಕ ‘ಕನ್ನಡಪ್ರಭ’ಕ್ಕೆ(Kananda Prabha) ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಜಾಗತಿಕ ಮಟ್ಟದಲ್ಲಿ ಗ್ಲೋಬಲ್‌ ಸಿಟಿಯಾಗಿರುವ ಬೆಂಗಳೂರಿಗೆ(Bengaluru) ನಂಬಿಕೆ ಹಾಗೂ ಜವಾಬ್ದಾರಿಯುತ ಪೊಲೀಸ್‌(Police) ವ್ಯವಸ್ಥೆಯನ್ನು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಧಿಕೃತ ಕ್ಲಬ್‌ಗಳು ಹಾಗೂ ರೌಡಿಸಂ ಸೇರಿದಂತೆ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುತ್ತೇನೆ. ಡ್ರಗ್ಸ್‌ ಮಾಫಿಯಾ(Druga Mafia) ಹಾಗೂ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುತ್ತೇನೆ ಎಂದು ಹೇಳಿದ ಆಯುಕ್ತರು, ಕ್ರಿಮಿನಲ್‌ಗಳ ಜತೆ ಪೊಲೀಸರ ಸ್ನೇಹವನ್ನು ಸಹಿಸುವುದಿಲ್ಲ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಪೊಲೀಸರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ ಎಂದು ಗುಡುಗಿದ್ದಾರೆ.

ಕಮಲ್ ಪಂತ್ ಎತ್ತಂಗಡಿ, ಪ್ರತಾಪ್‌ ರೆಡ್ಡಿ ಬೆಂಗಳೂರು ನಗರದ ನೂತನ ಹೊಸ ಪೊಲೀಸ್‌ ಆಯುಕ್ತ

ಸಂದರ್ಶನದ ಪೂರ್ಣ ವಿವರ ಹೀಗಿದೆ:

ಬೆಂಗಳೂರಿನ ಆಯುಕ್ತರಾಗಿ ನಿಮ್ಮ ಮೊದಲ ಆದ್ಯತೆಗಳೇನು?

-ರೌಡಿಸಂ ಸೇರಿ ಕಾನೂನುಬಾಹಿರ ಕೃತ್ಯಗಳಿಗೆ ನಿಯಂತ್ರಣ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಅಪರಾಧ ಪ್ರಕರಣಗಳ ತನಿಖೆ ಸುಧಾರಣೆ ಇವು ನನ್ನ ಆದ್ಯತೆಗಳಾಗಿವೆ. ವಿಶ್ವ ಮಟ್ಟದಲ್ಲಿ ಬೆಂಗಳೂರಿಗೆ ಗ್ಲೋಬಲ್‌ ಸಿಟಿ ಇಮೇಜ್‌ ಇದೆ. ಈ ನಗರದಲ್ಲಿ ನಡೆಯುವ ಸಣ್ಣ ಘಟನೆಯು ವಿಶ್ವ ಮಟ್ಟದಲ್ಲಿ ಸಂಚಲನ ಮೂಡಿಸುತ್ತದೆ. ಚರ್ಚೆ ಹುಟ್ಟು ಹಾಕುತ್ತದೆ. ನಗರದ ಜನರಿಗೆ ನಂಬಿಕೆ ಹಾಗೂ ಜವಾಬ್ದಾರಿಯುತ ಪೊಲೀಸ್‌ ವ್ಯವಸ್ಥೆ ರೂಪಿಸುತ್ತೇನೆ. ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳನ್ನು ತಡೆಯಲು ಕ್ರಮವಹಿಸುತ್ತೇನೆ.

ಕಾನೂನುಬಾಹಿರ ಚಟುವಟಿಕೆಗಳಿಗೆ ಪೊಲೀಸರ ಸಹಕಾರ ಇದೆ ಎಂಬ ಆರೋಪವಿದೆ?

-ಅಕ್ರಮ ಕೃತ್ಯಗಳಿಗೆ ಪೊಲೀಸರು ಪಾಲ್ಗೊಳ್ಳುವುದಾಗಲಿ ಅಥವಾ ಸಹಕರಿಸುವುದಾಗಲಿ ಮಾಡಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇನೆ. ನಗರದಲ್ಲಿ ಡ್ರಗ್ಸ್‌ ಹಾಗೂ ಅಕ್ರಮ ವಲಸಿಗರ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಅವುಗಳ ವಿರುದ್ಧ ಮೇಲಿನ ಕಾರ್ಯಾಚರಣೆಯನ್ನು ಮತ್ತಷ್ಟುತೀವ್ರಗೊಳಿಸಲಾಗುತ್ತದೆ. ತಮ್ಮ ಠಾಣಾ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಅಸ್ಪದ ನೀಡದಂತೆ ಠಾಣಾಧಿಕಾರಿಗಳ ಮೇಲೆ ಕಣ್ಣಿಡುವಂತೆ ಡಿಸಿಪಿಗಳಿಗೆ ಸೂಚಿಸಿದ್ದೇನೆ.

ಅಪರಾಧ ಪ್ರಕರಣಗಳ ತನಿಖಾ ಲೋಪದಿಂದ ಶಿಕ್ಷಾ ಪ್ರಮಾಣ ಕಡಿಮೆ ಆಗುತ್ತಿದೆ?

-ಅಪರಾಧ(Crime) ಪ್ರಕರಣ ತನಿಖಾ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಮುಖ ಅಪರಾಧ ಕೃತ್ಯಗಳ ತನಿಖೆ ನಿರ್ವಹಣೆ ಸಲುವಾಗಿ ಡಿಸಿಪಿ ಮಟ್ಟದಲ್ಲಿ ಪ್ರತ್ಯೇಕ ನಿರ್ವಹಣಾ ಘಟಕ ರಚಿಸಲಾಗುತ್ತದೆ. ಹಾಗೆಯೇ ವೃತ್ತಿಪರ ಕ್ರಿಮಿನಲ್‌ಗಳು ಹಾಗೂ ಜೈಲಿನಿಂದ ಹೊರಬರುವ ಕ್ರಿಮಿನಲ್‌ಗಳ ಮೇಲೆ ನಿರಂತರ ನಿಗಾಹಿಸುವ ಸಲುವಾಗಿ ಕೂಡ ಡಿಸಿಪಿ ಮಟ್ಟದಲ್ಲಿ ಕ್ರಿಮಿನಲ್‌ಗಳ ಕಣ್ಗಾವಲು ಘಟಕ ರಚಿಸಲಾಗುತ್ತದೆ.

ಕ್ಲಬ್‌ಗಳಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪವಿದೆ?

-ನಗರದಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಕ್ಲಬ್‌ ನಡೆಸಲು ಬಿಡುವುದಿಲ್ಲ. ಈಗಾಗಲೇ ಸಿಸಿಬಿ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಹಣ ವಸೂಲಿ ಸಹಿಸುವುದಿಲ್ಲ.

ನಗರದಲ್ಲಿ ನೈಟ್‌ ಲೈಫ್‌ ಸಮಯ ವಿಸ್ತರಣೆಗೆ ಸಮ್ಮತಿ ನೀಡುತ್ತೀರಾ?

-ನೈಟ್‌ ಲೈಫ್‌(Night Life) ವಿಸ್ತರಣೆ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಸವಿಸ್ತಾರ ಸಮಾಲೋಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸದ್ಯ ನೈಟ್‌ ಲೈಫ್‌ ಸಮಯ ವಿಸ್ತರಣೆ ಪ್ರಸ್ತಾಪದ ಕುರಿತು ಹೆಚ್ಚಿನ ಮಾಹಿತಿ ಇಲ್ಲ.

ಸೈಬರ್‌ ವಂಚನೆ ತಡೆಗೆ ಸಿಇಎನ್‌ ಠಾಣೆಗಳ ಸುಧಾರಣೆ ಸಾಧ್ಯವೇ?

-ಪ್ರಸುತ್ತ ಸೈಬರ್‌ ವಂಚನೆ ಕೃತ್ಯಗಳು ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ವ್ಯಾಪ್ತಿಯ ಸೈಬರ್‌ ಠಾಣೆಗಳಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಇವುಗಳ ಕಾರ್ಯದೊತ್ತಡ ತಗ್ಗಿಸಿ ಸಿಇಎನ್‌ ಠಾಣೆಗಳ ಬಲವರ್ಧನೆಗೆ ಯೋಜನೆ ರೂಪಿಸಲಾಗುತ್ತದೆ.
 

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು