ಬಿಬಿಎಂಪಿ ಚುನಾವಣೆ: 1 ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಅಸಾಧ್ಯ?

By Kannadaprabha NewsFirst Published Jul 29, 2022, 6:26 AM IST
Highlights

ಕಾಲಮಿತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಿ: ಸುಪ್ರೀಂ ಮಹತ್ವದ ಆದೇಶ

ನವದೆಹಲಿ(ಜು.29):  ಬಹುಕಾಲದಿಂದ ಬಾಕಿ ಉಳಿದಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಗುರುವಾರ ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್‌, ವಾರ್ಡ್‌ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣೆ ಪ್ರಕ್ರಿಯೆ ಆರಂಭಿಸಲು ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬಿಬಿಎಂಪಿ ಚುನಾವಣೆ ನಡೆಸುವ ಕುರಿತಾದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ. ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ನ್ಯಾಯಪೀಠ, ಇನ್ನು ಒಂದು ವಾರದಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಪಟ್ಟಿಪ್ರಕಟಿಸಬೇಕು. ಆ ಬಳಿಕ 2020ರ ಬಿಬಿಎಂಪಿ ಕಾಯ್ದೆ ಹಾಗೂ ಸಾಂವಿಧಾನಿಕ ಪರಿಮಿತಿಗೆ ಅನ್ವಯವಾಗುವಂತೆ ರಾಜ್ಯ ಚುನಾವಣಾ ಆಯೋಗವು ಸೂಕ್ತ ಕಾಲಮಿತಿಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು. ಇದಕ್ಕೆ ರಾಜ್ಯ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿತು.

ಒಂದು ವೇಳೆ, ರಾಜ್ಯ ಚುನಾವಣಾ ಆಯೋಗ ಈ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನೀಡಿತು. ಇದಕ್ಕೂ ಮೊದಲು ಬಿಬಿಎಂಪಿಯ ಚುನಾವಣೆಗಳನ್ನು ತಡೆಹಿಡಿಯುವಂತೆ ಆದೇಶಿಸಿದ್ದ ಸುಪ್ರೀಂಕೋರ್ಟ್‌, 8 ವಾರದೊಳಗೆ ಕ್ಷೇತ್ರ ಪುನರ್‌ವಿಂಗಡನೆಯನ್ನು ಪೂರ್ಣಗೊಳಿಸಿ ಆನಂತರ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮೇ.20ರಂದು ಸೂಚನೆ ನೀಡಿತ್ತು. ಬಿಬಿಎಂಪಿ ಚುನಾವಣೆಗಳನ್ನು ಸಕಾಲದಲ್ಲಿ ನಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯ ಸಮಯದಲ್ಲಿ ಕೋರ್ಚ್‌ ಈ ಆದೇಶ ನೀಡಿತ್ತು. ಸುಪ್ರೀಂಕೋರ್ಟ್‌ ಆದೇಶದಂತೆ ಬಿಬಿಎಂಪಿ ವಾರ್ಡ್‌ಗಳ ಪುನರ್‌ವಿಂಗನೆ ನಡೆಸಿದ ಆಯೋಗ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸಿತ್ತು.

BBMP Elections: ಮೋದಿ ಶೋ ನಡೆಸಿ ಚುನಾವಣೆಗೆ ಬಿಜೆಪಿ ಸಿದ್ಧತೆ?

1 ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಅಸಾಧ್ಯ?

ಬಿಬಿಎಂಪಿಯ ವಾರ್ಡ್‌ ಮೀಸಲಾತಿ ಪಟ್ಟಿಯನ್ನು ಒಂದು ವಾರದಲ್ಲಿ ಅಂತಿಮಗೊಳಿಸುವ ಮೂಲಕ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪ್ರಕಾರ ಮೀಸಲಾತಿಯನ್ನು ಸರ್ಕಾರ ಅಂತಿಮಗೊಳಿಸುವುದು ಅನುಮಾನವಾಗಿದೆ. ಹೀಗಾಗಿ, ಸರ್ಕಾರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಮತ್ತಷ್ಟುಸಮಯಾವಕಾಶ ಕೇಳುವ ಸಾಧ್ಯತೆ ಇದೆ.

ಸುಪ್ರೀಂಕೋರ್ಟ್‌ ಆದೇಶದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದಕ್ಕೆ ರಚಿಸಲಾದ ಭಕ್ತವತ್ಸಲ ಸಮಿತಿಯ ನೀಡಿರುವ ವರದಿಯಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ.33ರಷ್ಟುಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ. ಈ ಪ್ರಕಾರ ಬಿಬಿಎಂಪಿಯ ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪಡಿಸಬೇಕಿದೆ.

ಒಂದು ವೇಳೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಪಡಿಸಿದರೂ ಕರಡು ಮೀಸಲಾತಿ ಪಟ್ಟಿಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯಬೇಕಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ 7ರಿಂದ 15 ದಿನ ಕಾಲಾವಕಾಶ ನೀಡಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 15ರಿಂದ 20 ದಿನ ಬೇಕಾಗಲಿದೆ. ಅಷ್ಟೊಂದು ಕಾಲಾವಕಾಶ ಇಲ್ಲದಿರುವುದರಿಂದ ಆಕ್ಷೇಪಣೆಗೆ ಕನಿಷ್ಠ ಮೂರ್ನಾಲ್ಕು ದಿನಗಳಾದರೂ ನೀಡಬೇಕಿದೆ. ಹೀಗಾಗಿ, ರಾಜ್ಯ ಸರ್ಕಾರ ಒಂದು ವಾರದಲ್ಲಿ ಮೀಸಲಾತಿ ಪಟ್ಟಿಅಂತಿಮ ಪಡಿಸುವುದು ಅನುಮಾನವಾಗಿದ್ದು, ಸುಪ್ರೀಂ ಕೋರ್ಚ್‌ಗೆ ಮತ್ತಷ್ಟುಸಮಯ ಕೇಳಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಕೋರ್ಟ್‌ಗೆ ಅರ್ಜಿ

ಭಕ್ತವತ್ಸಲ ಸಮಿತಿಯ ಶಿಫಾರಸು ಮಾಡಿರುವ ಪ್ರಕಾರ ಬಿಬಿಎಂಪಿ ಮೀಸಲಾತಿ ನಿಗದಿ ಪಡಿಸಿದರೆ ಅದನ್ನು ಕೋರ್ಚ್‌ನಲ್ಲಿ ಸಾರ್ವಜನಿಕರು ಪ್ರಶ್ನಿಸುವ ಸಾಧ್ಯತೆಗಳಿವೆ. ಇನ್ನು ಅತೃಪ್ತರು, ಪಾಲಿಕೆ ಮಾಜಿ ಸದಸ್ಯರು ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ಈಗಾಗಲೇ ಹೈಕೋರ್ಚ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಗೊಂದಲಗಳು ನಿವಾರಣೆಗೊಂಡರೆ ಮಾತ್ರ ಬಿಬಿಎಂಪಿ ಚುನಾವಣೆಗೆ ಗ್ರೀನ್‌ ಸಿಗ್ನಲ್‌ ದೊರೆಯಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ವರ್ಷಾಂತ್ಯಕ್ಕೆ ಚುನಾವಣೆ?

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಆಗಸ್ಟ್‌ 5ರಂದು ಪ್ರಕರಣ ಸುಪ್ರೀಂ ಕೋರ್ಚ್‌ನಲ್ಲಿ ಮತ್ತೆ ವಿಚಾರಣೆ ಬರಲಿದೆ. ಈ ವೇಳೆ ಕೋರ್ಚ್‌ ಎಲ್ಲ ಗೊಂದಲಗಳನ್ನು ಬದಿಗಿಟ್ಟು ಚುನಾವಣೆ ನಡೆಸುವಂತೆ ತಾಕೀತು ಮಾಡಿದರೆ ಮಾತ್ರ ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ. ಇಲ್ಲದಿದ್ದರೆ ಪಾಲಿಕೆ ಚುನಾವಣೆ ಮತ್ತಷ್ಟುವಿಳಂಬವಾಗುವುದು ಖಚಿತ.

ಆಯೋಗದಿಂದ ಸಿದ್ಧತೆ ಶುರು

ಹೊಸದಾಗಿ ರಚನೆಯಾಗಿರುವ 243 ವಾರ್ಡಗಳಿಗೆ ಚುನಾವಣೆ ನಡೆಸಲು ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗ ಈಗಾಗಲೇ ನಗರದ 28 ವಿಧಾನಸಭಾ ಕ್ಷೇತ್ರಗಳಿಗೆ ಆಯಾ ವಲಯಗಳ ಜಂಟಿ ಆಯುಕ್ತರನ್ನು ಅಧಿಕ ಜಿಲ್ಲಾ ಚುನಾವಣಾ ಅಧಿಕಾರಿಗಳನ್ನಾಗಿ ನಿಯೋಜಿಸಿದೆ.

ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್; ರಾಜ್ಯ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ಎಲ್ಲ ವಾರ್ಡ್‌ಗಳಲ್ಲಿ ವಾಸವಿರುವ ಮತದಾರರ ಪಟ್ಟಿಹಂಚಿಕೆ, ಹೊಸ ಬೂತ್‌ಗಳ ರಚನೆ, ಹೊಸ ಮತದಾರರ ಸೇರ್ಪಡೆ ಕಾರ್ಯ ಮಾಡಬೇಕಿದೆ. ಈ ಕಾರ್ಯವನ್ನು ಪೂರ್ಣಗೊಳಿಸಲು ಕನಿಷ್ಠ ಒಂದೂವರೆ ತಿಂಗಳು ಕಾಲಾವಕಾಶ ತೆಗೆದುಕೊಳ್ಳಬಹುದು. ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಪರಿಶೀಲಿಸಿ ಆಕ್ಷೇಪಣೆಗಳನ್ನು ಪಡೆದು, ಅವುಗಳನ್ನು ವಿಲೇವಾರಿ ಮಾಡಿ ಅಂತಿಮ ಪಟ್ಟಿಸಿದ್ಧಪಡಿಸಲು ಸೆಪ್ಟಂಬರ್‌ವರೆಗೆ ಕಾಲಾವಕಾಶ ಬೇಕಾಗಲಿದೆ.

ಬಿಬಿಎಂಪಿ ಚುನಾವಣೆಗೆ ಪಕ್ಷ ಹಾಗೂ ಸರ್ಕಾರ ಎರಡೂ ಸಿದ್ಧವಾಗಿವೆ. ಈಗಾಗಲೇ ಪಕ್ಷ ಚುನಾವಣೆಯ ತಯಾರಿ ಮಾಡಿದೆ. ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಮಾಡಲಿದೆ. ಉಳಿದ ಕೆಲಸಗಳನ್ನು ಸರ್ಕಾರ ಮಾಡಲಿದೆ ಅಂತ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.  
 

click me!