ಸಾಂಸ್ಕೃತಿಕ ನಗರಿ, ಸಮಾಜವಾದದ ನೆಲೆವೀಡು ಎಂದು ಹೆಸರಾದ ಮಲೆನಾಡಿನಲ್ಲಿ ಹುಟ್ಟಿದ ಗಾಂಜಾ ಅಮಲು ನಿಯಂತ್ರಣಕ್ಕೆ ಬರುವ ಬದಲಿಗೆ, ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಯುವಕರ ಬದುಕನ್ನು ಹಾಳು ಮಾಡುವುದರ ಜೊತೆಗೆ ಅಪರಾಧ ಜಗತ್ತಿನಲ್ಲಿ ದಟ್ಟಪ್ರಭಾವ ತೋರಿಸುತ್ತಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಜು.28): ಸಾಂಸ್ಕೃತಿಕ ನಗರಿ, ಸಮಾಜವಾದದ ನೆಲೆವೀಡು ಎಂದು ಹೆಸರಾದ ಮಲೆನಾಡಿನಲ್ಲಿ ಹುಟ್ಟಿದ ಗಾಂಜಾ ಅಮಲು ನಿಯಂತ್ರಣಕ್ಕೆ ಬರುವ ಬದಲಿಗೆ, ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಯುವಕರ ಬದುಕನ್ನು ಹಾಳು ಮಾಡುವುದರ ಜೊತೆಗೆ ಅಪರಾಧ ಜಗತ್ತಿನಲ್ಲಿ ದಟ್ಟಪ್ರಭಾವ ತೋರಿಸುತ್ತಿದೆ. ಇದು ಪೊಲೀಸರಿಗೆ ಈಗ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ಮಲೆನಾಡಿನ ದಟ್ಟಕಾಡುಗಳಲ್ಲಿ ಕಳೆದ ಎರಡು ದಶಕದಿಂದ ದಂಧೆಯಾಗಿ ವಿಸ್ತರಿಸುತ್ತಿರುವ ಗಾಂಜಾ ಘಮಲು ಬೆಂಗಳೂರಿನವರೆಗೂ ತನ್ನ ಮಾಯಾಲೋಕ ವಿಸ್ತರಿಸಿಕೊಂಡಿದೆ.
ಎರಡು ದಶಕದಿಂದ ಮಲೆನಾಡಿನ ಕಾಡುಗಳಲ್ಲಿ ಇದು ದಂಧೆಯಾಗಿದೆ. ಮಲೆನಾಡಿಗೆ ಗಾಂಜಾ ಹೊಸದೇನಲ್ಲ. ಗ್ರಾಮೀಣ ಭಾಗದ ಕೆಲವೆಡೆ ಬಳಕೆಯಿತ್ತು. ಅತ್ಯಂತ ಖಾಸಗಿಯಾಗಿ, ಸೀಮಿತವಾಗಿ ಬಳಕೆಯಾಗುತ್ತಿತ್ತು. ಎರಡು ದಶಕಗಳಿಂದ ಈ ದಂಧೆ ವಾಣಜ್ಯ ಸ್ವರೂಪ ಪಡೆದಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾರಾಟ ಜಾಲ ವಿಸ್ತರಿಸಿಕೊಂಡಿದೆ. ಮಲೆನಾಡಿನ ರೈತರು ಅರಿವಿದ್ದೋ, ಅರಿವಿಲ್ಲದೆಯೋ ಹಣದಾಸೆಗೆ ಈ ಜಾಲದಲ್ಲಿ ಸಿಲುಕಿ ಅಪಾಧಿಗಳಾಗುತ್ತಿದ್ದಾರೆ. ಮುಖ್ಯವಾಗಿ ಮಲೆನಾಡಿನ ಹೊಲ, ತೋಟಗಳಲ್ಲಿ ಉಪ ಬೆಳೆಯಂತೆ ಈ ಗಾಂಜಾ ಬೆಳೆಯಲಾಗುತ್ತಿದೆ.
ಬಿಜೆಪಿ ಕಾರ್ಯಕರ್ತರ ರಕ್ಷಣೆ ಮಾಡುವುದು ನಮ್ಮ ಕೈಯಲ್ಲಿ ಆಗುತ್ತಿಲ್ಲ - ಈಶ್ವರಪ್ಪ
ಒಂದೊಂದು ಹೊಲದಲ್ಲಿ ಹತ್ತಿಪ್ಪತ್ತು ಗಿಡದಿಂದ ಹಿಡಿದು ನೂರಾರು ಗಿಡಗಳವರೆಗೆ ಬೆಳೆಸಲಾಗುತ್ತಿದೆ. ಈ ಬೆಳೆಯ ಹಿಂದೆ ವ್ಯವಸ್ಥಿತ ಜಾಲವೇ ಇದೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೆಭೇದಿಸುತ್ತಿದ್ದಾರೆ. ಗಾಂಜಾದ ಮೂಲ ಪತ್ತೆ ಇದುವರೆಗೂ ಸಾಧ್ಯವಾಗಿಲ್ಲ. ಅಥವಾ ಆ ಪ್ರಯತ್ನ ಗಂಭೀರವಾಗಿ ನಡೆದಿಲ್ಲವೇನೋ ಎಂಬ ಸಂಶಯ ಕೂಡ ಕೆಲವೊಮ್ಮೆ ಸಾರ್ವಜನಿಕರನ್ನು ಕಾಡಿದ್ದಿದೆ. ಮಲೆನಾಡಿನ ಕಾಡಿನಂಚಿನಲ್ಲಿರುವ, ಬಡರೈತರನ್ನು ಗುರುತಿಸುವ ಕೆಲವು ಮಧ್ಯವರ್ತಿಗಳು ಗಾಂಜಾ ಬೀಜಗಳನ್ನು ನೀಡುತ್ತಾರೆ.
ಗಾಂಜಾ ಬೆಳೆದ ಬಳಿಕ ತಾವೇ ಖರೀದಿಸುತ್ತಿದ್ದಾರೆ. ಹಣದಾಸೆಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಯೋಚಿಸದ ಕೆಲವು ರೈತರು ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ, ಮೆಕ್ಕೆಜೋಳದ ನಡುವಿನಲ್ಲಿ ಗುಟ್ಟಾಗಿ ಬೆಳೆಯುತ್ತಿದ್ದಾರೆ. ಯಾರ ಕಣ್ಣಿಗೂ ಸಿಗದೇ ವ್ಯವಹಾರ ಪೂರೈಸಿಕೊಂಡು ಕಾಸು ಮಾಡಿಕೊಳ್ಳುವ ಸಾಕಷ್ಟುಮಂದಿ ಇದ್ದಾರೆ. ಆದರೆ, ಕೆಲವರು ಅಬಕಾರಿ ಅಧಿಕಾರಿಗಳು, ಪೊಲೀಸರ ಕೈಗೆ ಸಿಕ್ಕು ಜೈಲು ಪಾಲಾಗಿ, ತಮ್ಮನ್ನೇ ನಂಬಿಕೊಂಡ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ.
ಡ್ರೋಣ್ ಮೂಲಕ ಪತ್ತೆ: ಕಳೆದ ಎರಡು ವರ್ಷದ ಹಿಂದೆ ಅಬಕಾರಿ ಇಲಾಖೆ ಡ್ರೋಣ್ ಮೂಲಕ ಗಾಂಜಾ ಬೆಳೆ ಪತ್ತೆ ಹಚ್ಚಲು ವಿಶೇಷ ಪ್ರಯತ್ನ ನಡೆಸಿತು. ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಯಿತು. ಹಲವರ ಬಂಧನವಾಯಿತು. ಆದರೂ, ಈ ದಂಧೆಗೆ ಕಡಿವಾಣ ಬಿದ್ದಿಲ್ಲ. ಕೆಲವು ವರ್ಷಗಳ ಹಿಂದಿನಿಂದ ಪೊಲೀಸರು ಕೂಡ ಗಂಭೀರ ಪ್ರಯತ್ನ ನಡೆಸಿ ಗಾಂಜಾ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ. ಹಲವೆಡೆ ದಾಳಿ ನಡೆಸಿ, ಅಪಾರ ಪ್ರಮಾಣದ ಗಾಂಜಾ, ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಬೆಳೆಯ ನಡುವೆ ಗಾಂಜಾ ಬೆಳೆಗೆ ನಗರ ಪ್ರದೇಶವೇ ಮಾರುಕಟ್ಟೆ. ನಗರದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಾಂಜಾ ಪ್ರಕರಣಗಳು ಈಗ ಗಲ್ಲಿ, ಗಲ್ಲಿಗಳಲ್ಲಿ ನಡೆಯುತ್ತಿವೆ. ನಗರ ಪ್ರದೇಶದ ಯುವಕರು ಹೆಚ್ಚು ದಾಸರಾಗುತ್ತಿದ್ದಾರೆ.
ಅಪರಾಧದ ಜೊತೆ ಗಾಂಜಾ ನಂಟು: ನಗರದಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಮತ್ತಿನಲ್ಲಿದ್ದರು ಎಂಬ ಅಂಶ ಗಂಭೀರವಾದುದು. ಗಾಂಜಾ ಮತ್ತಿನಲ್ಲಿ ಆರೋಪಿಗಳು ಹಲ್ಲೆ, ಕೊಲೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಈಚೇಗೆ ಗಾಂಜಾ ಸೇವೆ ಮಾಡಿ ಹಲ್ಲೆ ನಡೆದಿದ್ದ ಯುವಕರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದರು. ಯುವಕರು ಹಾಡಹಗಲೇ ಲಾಂಗು, ಮಚ್ಚು ಹಿಡಿದುಕೊಂಡು ದರೋಡೆಗಿಳಿದಿದ್ದರು. ಜಿಲ್ಲೆಯಲ್ಲಿ ಗಾಂಜಾ ಪ್ರಕರಣದಲ್ಲಿ ಕಾರಾಗೃಹ ಸೇರುತ್ತಿರುವ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ ಒಬ್ಬ ಆರೋಪಿಯಾದರೂ ಜಿಲ್ಲಾ ಕಾರಾಗೃಹ ಸೇರುತ್ತಿದ್ದಾರೆ.
ಜೈಲು ಸೇರಿ ಕೆಲವೇ ದಿನಗಳಲ್ಲಿ ಅವರು ಬಿಡುಗಡೆ ಆಗುತ್ತಿದ್ದಾರೆ. ಹೊರ ಬಂದವರು ಮತ್ತೆ ಗಾಂಜಾ ದಂಧೆಯಲ್ಲಿ ತೊಡಗುತ್ತಿದ್ದಾರೆ. ಒಣ ಗಾಂಜಾವನ್ನು ಚೀಲಗಟ್ಟಲೆ ಸಾಗಣಿ ಮಾಡುವುದಕ್ಕೆ ಶಿವಮೊಗ್ಗ- ಮಂಡಗದ್ದೆಯ ಮಾರ್ಗವನ್ನು ಪೆಡ್ಲರ್‌ಗಳು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಮೀನು ಹೋಟೆಲ್‌ಗಳೇ ಪೆಡ್ಲರ್‌ಗಳಿಗೆ ಗಾಂಜಾ ವಿನಿಮಯಕ್ಕೆ ಪ್ರಮುಖ ಅಡ್ಡೆಗಳಾಗಿವೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಹಿಂಭಾಗದ ಬೈಪಾಸ್ ರಸ್ತೆ, ಸೂಳೆಬೈಲು, ಎಂಜಿನಿಯರಿಂಗ್ ಕಾಲೇಜುಗಳು, ಟಿಪ್ಪುನಗರ, ಆರ್‌ಎಂಎಲ್ ನಗರ, ಅಣ್ಣಾ ನಗರ, ತುಂಗಾ ನಗರ, ಬುದ್ದನಗರ ಹೀಗೆ ಹಲವು ಬಡಾವಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಎಗ್ಗಿಲ್ಲದೆ ನಡೆಯುತ್ತಿದೆ.
3 ವರ್ಷಗಳಲ್ಲಿನ ಪ್ರಕರಣ
- 2020ನೇ ಸಾಲಿನಲ್ಲಿ ಒಟ್ಟು 89 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 203 ಜನ ಆರೋಪಿತರನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 186 ಕೆಜಿ ಹಸಿ ಗಾಂಜಾ ಗಿಡಗಳು ಮತ್ತು 41 ಕೆ.ಜಿ. ಒಣ ಗಾಂಜಾ ಸೇರಿ ಒಟ್ಟು .16.81 ಲಕ್ಷ ಮೌಲ್ಯದ 227 ಕೆಜಿ ವಶಪಡಿಸಿಕೊಳ್ಳಲಾಗಿದೆ.
- 2021ನೇ ಸಾಲಿನಲ್ಲಿ ಒಟ್ಟು 58 ಪ್ರಕರಣಗಳನ್ನು ದಾಖಲಿಸಿದ್ದು, 163 ಜನ ಆರೋಪಿತರನ್ನು ಬಂಧಿಸಿದ್ದು, ಅವರಿಂದ 3 ಕೆ.ಜಿ. ಹಸಿ ಗಾಂಜಾ ಮತ್ತು 197 ಕೆ.ಜಿ. ಒಣ ಗಾಂಜಾ ಸೇರಿ ಒಟ್ಟು 39.15 ಲಕ್ಷ ಮೌಲ್ಯದ 200 ಕೆ.ಜಿ. 764 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
- 2022ನೇ ಸಾಲಿನಲ್ಲಿ ಜು.25ರವರೆಗೆ 17 ಪ್ರಕರಣಗಳು ದಾಖಲಾಗಿದ್ದು, 54 ಜನ ಆರೋಪಿತರನ್ನು ಬಂಧಿಸಲಾಗಿದೆ. 17 ಕೆಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಇದೇ ಅವಧಿಯಲ್ಲಿ 71 ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿದ್ದು, 106 ಆರೋಪಿಗಳನ್ನು ಬಂಧಿಸಲಾಗಿದೆ ಎಂಬುದು ಪೊಲೀಸ್ ಅಧಿಕಾರಿಗಳ ಮಾಹಿತಿ.
ಶಾಸಕ ಕೆ.ಎಸ್.ಈಶ್ವರಪ್ಪ ಅಸಮಾಧಾನ: ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಹೆಚ್ಚುತ್ತಿದ್ದಂತೆ ಎರಡು ವರ್ಷದ ಹಿಂದೆ ಸಚಿವರಾಗಿದ್ದ ಈಶ್ವರಪ್ಪ ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದಿದ್ದರು. ಕಠೋರ ಎಚ್ಚರಿಕೆ ನೀಡುವ ಮೂಲಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಒಂದು ಪಕ್ಷ ನಿಮಗೆ ಆಗದಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗಿ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆಯ ಮಾತನ್ನು ಆಡಿದ್ದರು. ಆ ಬಳಿಕ ನಿತ್ಯ ಒಂದಿಲ್ಲೊಂದು ದಾಳಿ ನಡೆಯುತ್ತಾ ಸ್ವಲ್ಪ ಮಟ್ಟಿಗೆ ಗಾಂಜಾ ನಿಯಂತ್ರಣಕ್ಕೆ ಬಂದಿತ್ತು.
ಬೈಂದೂರಲ್ಲಿ ಬಂದರು ನಿರ್ಮಾಣ; ಕೇಂದ್ರಕ್ಕೆ ಸಂಸದ ಮನವಿ
ಆದರೆ ಆ ಬಳಿಕ ಮತ್ತೆ ಪ್ರಕರಣ ಹೆಚ್ಚುತ್ತಲೇ ಸಾಗಿದೆ. ಕಾಲೇಜು ಹುಡುಗರಂತೂ ಇದರ ದಾಸರಾಗುವ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಈಗ್ಗೆ ಪುನಃ ಈ ಸಂಬಂಧ ಇಲಾಖೆಗೆ ಎಚ್ಚರಿಕೆ ನೀಡಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಗಾಂಜಾ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗದವರೇ ಆದ ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಮೇಲೆ ಗಾಂಜಾ ಪ್ರಕರಣಗಳಿಗೆ ಕಡಿವಾಣ ಬೀಳಬಹುದು ಎಂದು ಜನ ಭಾವಿಸಿದ್ದರು. ಆದರೆ, ಅವರಿಂದಲೂ ಗಾಂಜಾಕ್ಕೆ ನಿಯಂತ್ರಣ ಏರುವುದು ಸಾಧ್ಯವಾಗಿಲ್ಲ.