ಐದು ವರ್ಷಗಳಿಂದ 36 ಲಕ್ಷ ರೂಪಾಯಿ ಜಿಎಸ್ಟಿ ಬಾಕಿ ಉಳಿಸಿಕೊಂಡ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ. ಒಟ್ಟು 63 ಲಕ್ಷ ಬಾಕಿ. ಇದಕ್ಕಾಗಿ ಪಂಚಾಯಿತಿ ತನ್ನ ವ್ಯಾಪ್ತಿಯ ವ್ಯಾಪಾರಸ್ಥರು, ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿದೆ ಎನ್ನಲಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.14): ಇಂದು ಪ್ರತೀ ವಸ್ತು, ಸೇವೆಗೂ ಕೇಂದ್ರ ಸರ್ಕಾರ ಜಿಎಸ್ಟಿ ವಿಧಿಸಿದೆ. ಜಿಎಸ್ಟಿ ಇಲ್ಲದೆಯೇ ವಸ್ತುಗಳ ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗೆಯೇ ಗ್ರಾಮ ಪಂಚಾಯಿತಿಗಳು ನಡೆಸುವ ವಾಣಿಜ್ಯ ವಹಿವಾಟುಗಳಿಗೂ ಜಿಎಸ್ಟಿ ಕಟ್ಟಲೇಬೇಕು. ಆದರೆ ಇಲ್ಲೊಂದು ಗ್ರಾಮ ಪಂಚಾಯಿತಿ ಜಿಎಸ್ಟಿ ಬಂದಾಗಿನಿಂದ ಇದುವರೆಗೂ ತೆರಿಗೆಯನ್ನು ಕಟ್ಟಿಯೇ ಇಲ್ಲ. ಬದಲಾಗಿ ಲಕ್ಷಾಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ.
undefined
ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ದೇಶದಲ್ಲಿ ಜಿಎಸ್ಟಿ ಜಾರಿಗೆ ಬಂದಾಗಿನಿಂದ ಇದುವರೆಗೆ ಜಿಎಸ್ಟಿಯನ್ನೇ ಕಟ್ಟಿಲ್ಲ. ಪರಿಣಾಮ ಬರೋಬ್ಬರಿ 36 ಲಕ್ಷ ರೂಪಾಯಿ ಜಿಎಸ್ಟಿಯನ್ನು ಬಾಕಿ ಉಳಿಸಿಕೊಂಡಿದ್ದು, ಈಗ ಜಿಎಸ್ಟಿ ಕಚೇರಿಯಿಂದ ಪಂಚಾಯಿತಿಗೆ ನೊಟೀಸ್ ನೀಡಲಾಗಿದೆ. ಫೆಬ್ರವರಿ 8 ರಂದು ಜಿಎಸ್ಟಿ ಕಟ್ಟಲು ಕೊನೆಯ ಗಡುವು ನೀಡಿ ನೊಟೀಸ್ ಮಾಡಲಾಗಿದ್ದರೂ ಪಂಚಾಯಿತಿ ಮಾತ್ರ ಜಿಎಸ್ಟಿ ಕಟ್ಟಿಲ್ಲ. ಹೀಗಾಗಿ ಈ ಜಿಎಸ್ಟಿ 36 ಲಕ್ಷ ತೆರಿಗೆಗೆ ಬಡ್ಡಿ ಎಲ್ಲಾ ಸೇರಿ ಎರಡು ಪಟ್ಟು ದಂಡವನ್ನು ಪಂಚಾಯಿತಿ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಜಿಎಸ್ಟಿ ತೆರಿಗೆಯನ್ನು ಪಾವತಿಸುವುದಕ್ಕಾಗಿ ಪಂಚಾಯಿತಿ ತನ್ನ ವ್ಯಾಪ್ತಿಯ ವ್ಯಾಪಾರಸ್ಥರು, ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿದೆ ಎನ್ನಲಾಗಿದೆ.
ವಿಧಾನಸಭೆಯಲ್ಲಿ ಸಿದ್ದು ಸರ್ಕಾರ ಉರುಳಿಸೋ ಮಾತು, ನಿಂಬೆಹಣ್ಣು ಮಂತ್ರಿ ...
ಈ ಕುರಿತು ಪಂಚಾಯಿತಿ ಪಿಡಿಒ ನಟರಾಜ್ ಅವರನ್ನು ಕೇಳಿದರೆ ಹಿಂದಿನಿಂದಲೂ ಜಿಎಸ್ಟಿ ಬಾಕಿ ಉಳಿದಿದೆ. ಪಂಚಾಯಿತಿ ಸಿಬ್ಬಂದಿಯ ವೇತನ, ಅಭಿವೃದ್ಧಿ ಕೆಲಸಗಳು ಸೇರಿದಂತೆ ವಿವಿಧ ವೆಚ್ಚಗಳು ಜಾಸ್ತಿ ಇವೆ. ಪಂಚಾಯಿತಿ ಆದಾಯ ಕಡಿಮೆ ಇರುವುದರಿಂದ ಜಿಎಸ್ಟಿ ಬಾಕಿ ಉಳಿದಿದೆ. ಈಗಾಗಲೇ ನೊಟೀಸ್ ಬಂದಿದ್ದು ಮುಂದಿನ ನೊಟೀಸ್ ಬಂದರೆ ಎರಡು ಪಟ್ಟು ಹೆಚ್ಚಿನ ತೆರಿಗೆ ಕಟ್ಟಬೇಕಾಗಬಹುದು ಎಂದಿದ್ದಾರೆ.
ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವರ್ಣಿತ್ ನೇಗಿ ಅವರನ್ನು ಕೇಳಿದರೆ ಜಿಎಸ್ಟಿ ಉಳಿಸಿಕೊಂಡಿರುವ ವಿಷಯವೇ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಏನು ಕ್ರಮ ಕೈಗೊಳ್ಳಬಹುದೋ ಅದನ್ನು ಮಾಡುತ್ತೇನೆ. ಮತ್ತು ಪಂಚಾಯಿತಿಗೆ ಬರಬೇಕಾಗಿರುವ ತೆರಿಗೆ ಎಲ್ಲಿ ಬಾಕಿ ಇದೆ ಎನ್ನುವುದನ್ನು ಪರಿಶೀಲಿಸಿ ಅದನ್ನು ವಸೂಲಿ ಮಾಡಿ ಕೂಡಲೇ ತೆರಿಗೆ ಕಟ್ಟಲು ಸೂಚಿಸಲಾಗುವುದು ಎಂದಿದ್ದಾರೆ.
ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಈ ನಡೆಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. ಪ್ರತೀ ವರ್ಷ ಪಂಚಾಯಿತಿಯಲ್ಲಿ ಆಡಿಟಿಂಗ್ ನಡೆಯುತ್ತದೆ. ಈ ವೇಳೆ ಸಾಮಾಜಿಕ ಲೆಕ್ಕ ಸಮಿತಿ ವರದಿಯನ್ನು ಸಲ್ಲಿಸುತ್ತದೆ ಅಲ್ಲವೆ.? ಕಳೆದ ಐದು ವರ್ಷಗಳಿಂದ ಜಿಎಸ್ಟಿಯನ್ನು ಬಾಕಿ ಉಳಿಸಿಕೊಂಡಿರುವುದು ವರದಿಯಲ್ಲಿ ಅಧಿಕಾರಗಳ ಗಮನಕ್ಕೆ ತರಲಾಗುತ್ತದೆ ಅಲ್ಲವೇ.? ಇಷ್ಟೆಲ್ಲಾ ಆದರೂ ತಮ್ಮ ಗಮನಕ್ಕೆ ಇಲ್ಲ ಎಂದು ಅಧಿಕಾರಿಗಳು ಹೇಳುವುದಾದರೂ ಯಾಕೆ. ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದು ಜಿಎಸ್ಟಿ ಕಥೆಯಾದರೆ ಪಂಚಾಯಿತಿಯಿಂದ ಕೆಇಬಿಗೆ 27 ಲಕ್ಷ ವಿದ್ಯುತ್ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಪಂಚಾಯಿತಿಗೆ ಕತ್ತಲೆಯ ಭಾಗ್ಯ ಬರುವಂತೆ ಆಗಿದೆ. ಒಟ್ಟಿನಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವಿದ್ಯುತ್, ವಾಣಿಜ್ಯ ಸೇರಿ ಬರೋಬ್ಬರಿ 63 ಲಕ್ಷ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಇದು ಪಂಚಾಯಿತಿಗೆ ಬರುವ ಆದಾಯ ಏನಾಗುತ್ತದೆ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.