
ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿ ಹನೂರು ತಾಲ್ಲೂಕು ತಹಸೀಲ್ದಾರ್ ಚೈತ್ರಾ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರು, ಸಾಲೂರು ಮಠದಲ್ಲಿ ನಡೆಯಲಿರುವ ಪಟ್ಟದ ಮಹದೇವಸ್ವಾಮೀಜಿಯ 32ನೇ ಸಂಸ್ಮರಣೋತ್ಸವದಲ್ಲಿ ಭಾಗವಹಿಸಲು ಮುಂದಾಗಿದ್ದರು. ಆದರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸುಳ್ವಾಡಿ ದುರಂತದ ಸಂತ್ರಸ್ತರು ಹಾಗೂ ವಿವಿಧ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ಇಮ್ಮಡಿ ಮಹದೇವಸ್ವಾಮಿ ಅವರಿಗೆ ಸಾಲೂರು ಮಠದ ಆವರಣಕ್ಕೆ ಪ್ರವೇಶ ನೀಡಬಾರದು ಎಂದು, ಸಾಲೂರು ಮಠದ ಮಹದೇಶ್ವರಸ್ವಾಮಿ ಎಜುಕೇಶನ್ ಸೊಸೈಟಿಯ ಸದಸ್ಯರಾಗಿರುವ ಪೊನ್ನಾಚಿ ಮಹದೇವಸ್ವಾಮಿ ಅವರು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆರೋಪಿಯ ಭಾಗವಹಿಸುವಿಕೆಯಿಂದ ಗಲಭೆ, ಶಾಂತಿಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯನ್ನು ತಪ್ಪಿಸಲು, ಹನೂರು ತಹಸೀಲ್ದಾರ್ ಅವರು ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೆ ಪ್ರವೇಶ ನಿಷೇಧಿಸುವಂತೆ ಆದೇಶಿಸಿದ್ದಾರೆ. ಈ ಆದೇಶವು ಇಂದಿನಿಂದ ಮುಂದಿನ ಸೂಚನೆ ಅಥವಾ ಆದೇಶ ಹೊರಬರುವವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
ಸದ್ಯ ಈ ಆದೇಶದಿಂದ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಪೊಲೀಸರು ಹಾಗೂ ಆಡಳಿತ ವರ್ಗವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.