
ವಿಜಯನಗರ : ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಚಿನ್ನದ ದರವು ಸಾಮಾನ್ಯ ಜನರ ಬದುಕಿನ ಮೇಲೆ ಭಾರೀ ಹೊರೆ ತಂದಿರುವ ಹಿನ್ನೆಲೆಯಲ್ಲಿ, ವಿಜಯನಗರ ಜಿಲ್ಲೆಯಲ್ಲಿ ಭಕ್ತನೊಬ್ಬ ವಿಭಿನ್ನ ಹಾಗೂ ಅಪರೂಪದ ಹರಕೆಯನ್ನು ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಭಕ್ತ ಕೆ. ನಾಗರಾಜ ಉಲವತ್ತಿ ಅವರು ಚಿನ್ನದ ದರ ಇಳಿಕೆಯಾಗಲಿ ಎಂಬ ವಿಶಿಷ್ಟ ಬೇಡಿಕೆಯನ್ನು ದೇವಿಯ ಮುಂದೆ ಇಟ್ಟಿದ್ದಾರೆ. “ಚಿನ್ನದ ದರ ಕಡಿಮೆಯಾಗಲಿ, ಬಡವರು ಹಾಗೂ ಸರ್ವಸಾಮಾನ್ಯರೂ ಚಿನ್ನ ಖರೀದಿಸಲು ಸಾಧ್ಯವಾಗಲಿ” ಎಂಬ ಆಶಯದೊಂದಿಗೆ ಈ ಹರಕೆಯನ್ನು ಸಲ್ಲಿಸಿದ್ದಾರೆ.
ಚಿನ್ನದ ಬೆಲೆ ಯಾವಾಗ ಇಳಿಕೆಯಾಗಲಿದೆ ಎಂಬ ಆತಂಕ ಮತ್ತು ಕುತೂಹಲ ದೇಶದ ಜನರನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ, ಅದೇ ವಿಷಯವನ್ನು ದೇವಿಯ ಬಳಿ ಹರಕೆ ರೂಪದಲ್ಲಿ ಪ್ರಸ್ತಾಪಿಸಿ ಭಕ್ತಿಭಾವ ಮೆರೆದಿದ್ದಾರೆ. “ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ” ಎಂಬ ವಾಕ್ಯವನ್ನು ಬಾಳೆ ಹಣ್ಣಿನ ಮೇಲೆ ಬರೆದು, ಅದನ್ನು ತಾಯಿಯ ರಥೋತ್ಸವದ ವೇಳೆ ಭಕ್ತಿಪೂರ್ವಕವಾಗಿ ಅರ್ಪಿಸುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಡುವೆ, ಈ ವಿಭಿನ್ನ ಹರಕೆ ಎಲ್ಲರ ಗಮನ ಸೆಳೆದಿದ್ದು, ದೇವಿಯ ಕೃಪೆಯಿಂದ ಚಿನ್ನದ ದರ ಇಳಿಯಲಿ ಎಂಬ ಆಶಯವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಲಿ ಎಂಬುದು ದೇಶದ ಸರ್ವಸಾಮಾನ್ಯರ ದೊಡ್ಡ ಬೇಡಿಕೆಯಾಗಿರುವ ಸಂದರ್ಭದಲ್ಲಿ, ಈ ರೀತಿಯ ವಿಭಿನ್ನ ಭಕ್ತಿ ಸಮರ್ಪಣೆ ವಿಶೇಷ ಚರ್ಚೆಗೆ ಕಾರಣವಾಗಿದೆ.