ವಿಧವೆ ಸೊಸೆಗೆ ಮರು ವಿವಾಹ: ಭೇಷ್ ಅತ್ತೆ ಭೇಷ್‌..!

By Kannadaprabha NewsFirst Published Jul 17, 2019, 3:56 PM IST
Highlights

ಅತ್ತೆ-ಸೊಸೆ ಜಗಳದ ಬಗ್ಗೆಯೇ ಸುದ್ದಿಯಾಗುತ್ತಿರುವ ದಿನಗಳಲ್ಲಿ ದಕ್ಷಿಣ ಕನ್ನಡದ ಸುಳ್ಯ ಸಮೀಪದ ಮಹಿಳೆಯೊಬ್ಬರು ವಿಧವೆಯಾದ ತಮ್ಮ ಸೊಸೆಗೆ ಮರುವಿವಾಹ ಮಾಡೋ ಮೂಲಕ ಮಾದರಿಯಾಗಿದ್ದಾರೆ. ಈ ಮೂಲಕ ಸಮಾಜದ ಕಟ್ಟುಪಾಡುಗಳನ್ನು ಮೀರಿ ಮಗನ ಮಗುವಿಗೆ ತಾಯಾಗಲಿದ್ದ ಹೆಣ್ಣಿಗೆ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.

ಮಂಗಳೂರು(ಜು.17): ವಿಧವೆಯಾದ ಸೊಸೆಗೆ ಮರು ವಿವಾಹ ಮಾಡಿಸಿ ಸುಳ್ಯ ಸಮೀಪದ ಕಳಂಜ ಗ್ರಾಮದ ಅತ್ತೆಯೊಬ್ಬರು ಮಾದರಿಯಾಗಿದ್ದಾರೆ.

ಬೆಳ್ಳಾರೆಯ ಕೋಟೆ ದೇವಸ್ಥಾನದಲ್ಲಿ ಸೋಮವಾರ ನಡೆದ ಅಪರೂಪದ ಮದುವೆ ಸಮಾರಂಭವು ಇದೀಗ ಸುದ್ದಿಯಾಗಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲಾಳನ್ನು ಅದೇ ಗ್ರಾಮದ ದಿ.ಪದ್ಮಯ್ಯರ ಪುತ್ರ ಮಾಧವ ಎಂಬವರಿಗೆ ವಿವಾಹ ಮಾಡಲಾಗಿತ್ತು. ಆದರೆ ವಿವಾಹವಾದ ವರ್ಷದೊಳಗೆ ಅಪಘಾತದಿಂದ ಮಾಧವ ಇಹಲೋಕ ತ್ಯಜಿಸಿದರು.

ಕುಡುಕ ವರನ ತಿರಸ್ಕರಿಸಿದ ವಧುವಿಗೆ ಸರ್ಕಾರದ ಸನ್ಮಾನ

ಅದಾಗಲೇ ಗರ್ಭಿಣಿಯಾಗಿದ್ದ ಸುಶೀಲಳ ಚಿಗುರುತ್ತಿದ್ದ ಬದುಕು ಮೊಗ್ಗಾಗಿರುವಾಗಲೇ ಚಿವುಟಿ ಹೋಗಿತ್ತು. ಪತಿಯ ಮನೆಯವರು ಚಿಕ್ಕ ವಯಸ್ಸಿನ ಸೊಸೆಯ ಬದುಕು ಹಾಳಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿ ಮರುಮಾಂಗಲ್ಯಕ್ಕೆ ನಿಶ್ಚಯಿಸಿದರು. ಅದರಂತೆಯೇ ಪತಿಯ ತಾಯಿ ಕುಂಞ್ಯಕ್ಕಳ ಮುತುವರ್ಜಿಯಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನದ ಜಯಪ್ರಕಾಶ್ ಎಂಬವರೊಂದಿಗೆ ಕೋಟೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹೋತ್ಸವ ನೆರವೇರಿಸಿ ಆದರ್ಶ ಅತ್ತೆಯಾಗಿದ್ದಾರೆ. ವಿಶೇಷವೆಂದರೆ ಮೊದಲನೆಯ ವಿವಾಹ ಕೂಡ ಮೂರು ವರ್ಷಗಳ ಹಿಂದೆ ಕೋಟೆ ದೇವಸ್ಥಾನದಲ್ಲಿಯೇ ನಡೆದಿತ್ತು.

click me!