ಆಧಾರ್, ಬ್ಯಾಂಕ್ ಖಾತೆ ಪಾಸ್ ಬುಕ್ ಸೇರಿದಂತೆ ಇತರೆ ಮಾಹಿತಿ ಪಡೆದು ವಂಚಿಸುವ ಆನ್‌ಲೈನ್ ವಂಚನೆ ಜಾಲ ಈಗ ಗ್ರಾಮ್ಯ ಪ್ರದೇಶಕ್ಕೂ ಲಗ್ಗೆ ಇಟ್ಟಿದೆ. ಹುಡುಗಿಯ ಮಧುರ ಧ್ವನಿಗೆ ಮರುಳಾದ ಹಲವರು ಕಾರು ಆಸೆಗೆ ಬಿದ್ದು, 1ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ(ಜು.17): ಹೆಲೋ ನಮಸ್ಕಾರ, ಅಭಿನಂದನೆಗಳು ನೀವು ಗೆದ್ದಿದ್ದೀರಿ ಮಾರುತಿ ಸ್ವಿಪ್ಟ್ ಕಾರು. ಶಾಪ್‌ಲೆಸ್ ಆನ್‌ಲೈನ್ ಕಂಪನಿಯಿಂದ ನಿಮಗೆ ಸ್ವಿಪ್ಟ್ ಕಾರು ಉಚಿತ ಕೊಡುಗೆಯಾಗಿ ದೊರೆಯಲಿದ್ದು, ನಿಮ್ಮ ಆಧಾರ್, ಬ್ಯಾಂಕ್ ಖಾತೆ ಪಾಸ್ ಬುಕ್ ಸೇರಿದಂತೆ ಇತರೆ ಮಾಹಿತಿ ನೀಡಿ, ಕಾರು ಕೊಂಡೊಯ್ಯಿರಿ!. ಹೀಗಂತ ಹುಡುಗಿಯ ಮಧುರ ಧ್ವನಿಗೆ ಮರುಳಾದ ಹಲವರು ಕಾರು ಆಸೆಗೆ ಬಿದ್ದು, ಸಾವಿರಾರು ರುಪಾಯಿ ಕಳೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ಇದೀಗ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?:
ಆನ್‌ಲೈನ್ ಮೋಸಗಳ ಬಗ್ಗೆ ಪದೇ ಪದೇ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಹೆಣಗಾಡುತ್ತಿದ್ದರೂ, ಸಾರ್ವಜನಿಕರು ಇಂತಹ ಮೋಸಗಳಿಗೆ ಬಲಿಯಾಗುತ್ತಲೇ ಇದ್ದಾರೆ.ಶಿಡ್ವಘಟ್ಟತಾಲೂಕಿನ ಬಳವನಹಳ್ಳಿಯ ಪಿಲಿಪ್ ಎಂಬ ವ್ಯಕ್ತಿಗೆ ಒಂದು ತಿಂಗಳ ಹಿಂದೆ ಅನಾಮಧೇಯ ಕರೆಯೊಂದು ಬಂದಿತ್ತು. ಕರೆ ಮಾಡಿದ ವ್ಯಕ್ತಿ ಏಕಾಏಕಿ ಅಭಿನಂದನೆಗಳನ್ನು ಹೇಳಿ, ಮಾರುತಿ ಸ್ವಿಪ್ಟ್ ಕಾರು ನೀವು ಗೆದ್ದಿದ್ದು, ಇದನ್ನು ನಿಮಗೆ ತಲುಪಿಸಲು ಆಧಾರ್, ಬ್ಯಾಂಕ್ ಪಾಸ್ ಪುಸ್ತಕ ಸೇರಿದಂತೆ ಇತರೆ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದ್ದಾರೆ.
ದಾಖಲೆ ಕಳುಹಿಸಿದ ಕೂಡಲೇ ಮತ್ತೆ ಕರೆ ಮಾಡಿದ ವ್ಯಕ್ತಿ ನೋಂದಣಿ ಸೇವೆಗಾಗಿ ನೀವು 6,500 ಪಾವಿತಿಸಿ ಎಂದು ಹೇಳಿದ್ದಾನೆ. ಅದೇ ಖುಷಿಯಲ್ಲಿ ವೈಯಕ್ತಿಕ ಖಾತೆಗೆ 6,500 ಹಾಕಿದ್ದಾನೆ. ನಂತರ ನಿಮಗೆ ಕಾರು ಬೇಕಾ ಇಲ್ಲ ನಗದು ಹಣ ಬೇಕಾ ಎಂದು ವ್ಯಕ್ತಿ ಕರೆ ಮಾಡಿ ಕೇಳಿದ್ದಾನೆ. ತಮಗೆ ನಗದು ನೀಡುವಂತೆ ಕೇಳಿದ್ದಾರೆ. 8.6 ಲಕ್ಷ ಮೊತ್ತದ ಹಣ ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾದರೆ ಜಿಎಸ್‌ಟಿ 25,800 ಪಾವತಿಸುವಂತೆ ಸೂಚಿಸಿದ್ದಾನೆ. ಇದಕ್ಕೂ ಒಪ್ಪಿದ ಪಿಲಿಪ್, ಅಷ್ಟೂ ಹಣವನ್ನು ಆನ್‌ಲೈನ್‌ನಲ್ಲಿಯೇ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
1 ಲಕ್ಷ ಕಳೆದುಕೊಂಡ ಮೇಲೆ ದೂರು ದಾಖಲು:
30 ಸಾವಿರಕ್ಕೂ ಹೆಚ್ಚು ಹಣ ಪಾವತಿಸಿ ಮತ್ತೆ ಟಿಡಿಎಸ್ ಎಂದು 51,400 ರೂ. ಪಾವತಿಸಿದ್ದಾರೆ. ರಹದಾರಿ ತೆರಿಗೆ 15 ಸಾವಿರ, ಇತರೆ ವೆಚ್ಚಗಳ ಲೆಕ್ಕದಲ್ಲಿ10 ಸಾವಿರ ಸೇರಿದಂತೆ ಸುಮಾರು 1 ಲಕ್ಷಕ್ಕೂ ಹೆಚ್ಚು ಹಣ ಪಿಲಿಪ್ ಪಾವತಿಸಿದ್ದಾರೆ. ಆದರೆ ಸ್ವಿಪ್ಟ್ ಆಗಲೀ, ನಗದು ಹಣವಾಗಲೀ ಖಾತೆಗೆ ಬಂದಿಲ್ಲ. ಇದರಿಂದ ಅನುಮಾನಗೊಂಡು ಮತ್ತೆ ಕೇಳಿದ 25 ಸಾವಿರ ಹಾಕದೆ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಈವೆರೆಗೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಆನ್‌ಲೈನ್ ವಂಚನೆ ಇದೀಗ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ್ದು, ಈ ಕುರಿತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕೆಂದು ಪೊಲೀಸ್ ಇಲಾಖೆಯೂ ಮನವಿ ಮಾಡಿದೆ.
ಬೆಳ್ಳಂಬೆಳಗ್ಗೆಯೇ ಪಿಆರ್‌ಒವೊಬ್ಬರಿಗೆ ಪಂಗನಾಮ!
ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯರಾಮ್ ಎಂಬುವರಿಗೆ ಬೆಳ್ಳಂಬೆಳಗ್ಗೆ ಅನಾಮಿಕ ಕರೆಯೊಂದು ಬಂದಿತ್ತು. ನೀವು ಎರಡು ಎಟಿಎಂ ಕಾರ್ಡ್‌ಗಳನ್ನು ಹೊಂದಿದ್ದೀರಿ. ಇದು ಕಾನೂನಿನಲ್ಲಿ ಅಪರಾಧ ಹಾಗಾಗಿ ಒಂದು ಕಾರ್ಡ್‌ನ್ನು ರದ್ದು ಪಡಿಸುತ್ತೇವೆ ಅದರ ಸಂಖ್ಯೆ ಹೇಳಿ ಎಂದು ಕೇಳಿದ್ದಾರೆ.
ಗಾಬರಿಯಾದ ಜಯರಾಮ್ ಡೆಬಿಟ್ ಕಾರ್ಡಿನ ಹಿಂಭಾಗದಲ್ಲಿರುವ ಸಂಖ್ಯೆ ಹೇಳಿದ್ದಾರೆ. ಕೂಡಲೇ ಮೊಬೈಲ್‌ಗೆ ಸಂದೇಶ ಬಂದಿತ್ತು. ನಂತರ ಕರೆ ಮಾಡಿದ ಅದೇ ವ್ಯಕ್ತಿ ನಿಮ್ಮ ಮೊಬೈಲ್‌ಗೆ ಬಂದಿರುವ ಸಂದೇಶದಲ್ಲಿ ಒಟಿಪಿ ಸಂಖ್ಯೆ ಇದೆ. ಅದನ್ನು ತಿಳಿಸಿ ಎಂದು ಕೇಳಿದ್ದಾನೆ. ಅದೃಷ್ಟವಶಾತ್ ಎಚ್ಚೆತ್ತುಕೊಂಡು ಜಯರಾಮ್, ಒಟಿಪಿ ಸಂಖ್ಯೆ ಹೇಳದೆ ಕರೆ ಕಟ್ ಮಾಡಿದ್ದಾರೆ.
ಎಲ್.ಅಶ್ವತ್ಥನಾರಾಯಣ
ಸೈಬರ್ ವಂಚನೆ ಬಗ್ಗೆ ಆನ್‌ಲೈನಲ್ಲೇ ದೂರು: ಕಂಪ್ಲೇಂಟ್ ಸ್ವೀಕಾರ ಹೇಗೆ?