ಅವೈಜ್ಞಾನಿಕ ಬೆಳೆಹಾನಿ ಪರಿಹಾರದಿಂದ ಆತ್ಮಹತ್ಯೆ: ಕುಮಾರಸ್ವಾಮಿ

By Kannadaprabha NewsFirst Published Dec 24, 2022, 2:30 AM IST
Highlights

ಹಳೇ ಕಾಲದ ವ್ಯವಸ್ಥೆಯಲ್ಲೇ ಈಗಲೂ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯಲು ಮಾಡುವ ಖರ್ಚಿಗೂ ಆ ಪರಿಹಾರ ಸಾಲದಂತಾಗಿದೆ ಎಂದು ಕಿಡಿಕಾರಿದ ಎಚ್‌ಡಿಕೆ 

ಮಂಡ್ಯ(ಡಿ.24): ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಆರಂಭವಾಗಿದೆ. ಮೂರು ವರ್ಷಗಳಿಂದ ಮಳೆಯಿಂದ ಬೆಳೆ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ಪಂಚರತ್ನ ರಥಯಾತ್ರೆಯ ನಡುವೆ ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಹಳೇ ಕಾಲದ ವ್ಯವಸ್ಥೆಯಲ್ಲೇ ಈಗಲೂ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯಲು ಮಾಡುವ ಖರ್ಚಿಗೂ ಆ ಪರಿಹಾರ ಸಾಲದಂತಾಗಿದೆ ಎಂದು ಕಿಡಿಕಾರಿದರು.

ನಾನು, ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ. ರೈತರು ಸಾಲ ಮಾಡಿಕೊಳ್ಳದ ರೀತಿ ಆರ್ಥಿಕವಾಗಿ ಸದೃಢವಾಗಿ ಬದುಕುವ ರೀತಿಯನ್ನು ಪಂಚರತ್ನ ಯೋಜನೆಯಲ್ಲಿ ಅಳವಡಿಸಿದ್ದೇನೆ. ಈ ಬಗ್ಗೆ ರಾಜ್ಯದ ಪ್ರತಿ ಮನೆ ಮನೆಗಳಿಗೆ ಮಾಹಿತಿ ತಲುಪಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

Latest Videos

ಮಂಡ್ಯದಲ್ಲಿ ಪಂಚರತ್ನ ಯಾತ್ರೆ ಅಬ್ಬರ, ಟ್ರೆಂಡ್ ಆಗ್ತಿದೆ ವೆರೈಟಿ ಹಾರಗಳ ಸ್ವಾಗತ

ಅಭಿವೃದ್ಧಿ ಬೇಕಿಲ್ಲ: 

ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಕೆಣಕಿ ರಾಜಕೀಯವಾಗಿ ಯಶಸ್ಸು ಗಳಿಸಲು ಅವರು ಹೊರಟ್ಟಿದ್ದಾರೆ. ಆದರೆ, ಮಂಡ್ಯ ಜಿಲ್ಲೆ ಕರಾವಳಿಯಂತಲ್ಲ. ಜಿಲ್ಲೆಯ ಜನ ಶ್ರಮಜೀವಿಗಳು. ಕರಾವಳಿ ಪ್ರದೇಶದ ಜನರ ಜೀವನ ಶೈಲಿ, ಅಲ್ಲಿನ ವಾತಾವರಣವೇ ಬೇರೆ. ಬಿಜೆಪಿಯವರಿಗೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದೇ ಮುಂದೆ ಮುಳುವಾಗಲಿದೆ ಎಂದು ಭವಿಷ್ಯ ನುಡಿದರು.

Assembly election: ಪಂಚರತ್ನ ರಥಯಾತ್ರೆ ತಡೆಯಲು ಕೊರೊನಾ ಭೂತ ಬಿಡಲಾಗುತ್ತಿದೆ: ಕುಮಾರಸ್ವಾಮಿ

ಲಘುವಾಗಿ ಪರಿಗಣಿಸಲ್ಲ: 

ಕೊರೋನಾ ಎದುರಾಗದಂತೆ ಮುನ್ನೆಚ್ಚರಿಕೆಯಾಗಿ ಮೊದಲ ಹಂತದಲ್ಲಿ ಕೆಲವು ಮಾರ್ಗಸೂಚಿಗಳನ್ನು ರಾಜ್ಯಸರ್ಕಾರ ಬಿಡುಗಡೆ ಮಾಡಿದೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಚೀನಾದಲ್ಲಿ ಮತ್ತೆ ದೊಡ್ಡಮಟ್ಟದಲ್ಲಿ ಕೋವಿಡ್‌ ಅನಾಹುತ ಹೆಚ್ಚಾಗಿದೆ. ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ರಾಜ್ಯ ಮತ್ತು ರಾಷ್ಟ್ರದಲ್ಲಿ ಸಮಸ್ಯೆಗಳು ಏನಾಗುತ್ತೆ ನೋಡೋಣ. ನಾವು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ ಎಂದು ಹೇಳಿದರು. ಕೊರೋನಾವನ್ನೇ ಮುಂದಿಟ್ಟುಕೊಂಡು ರಾಜಕೀಯ ಉದ್ದೇಶಕ್ಕಾಗಿ ಬೇರೆ ರೀತಿಯಲ್ಲಿ ವಿರೋಧ ಪಕ್ಷವನ್ನು ಹತ್ತಿಕ್ಕುವ ವಾತಾವರಣ ನಿರ್ಮಾಣ ಮಾಡಲು ಹೋದರೆ ಅದಕ್ಕೆ ನಮ್ಮ ಸಹಮತವಿಲ್ಲ ಎಂದು ಹೇಳಿದರು.

ಎತ್ತಿನ ಗಾಡಿ ಏರಿ ರೈತರ ಜತೆ ರೈತ ದಿನ ಆಚರಿಸಿದ ಎಚ್ಡಿಕೆ

ರೈತ ದಿನಾಚರಣೆ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎತ್ತಿನಗಾಡಿ ಏರಿ ರೈತರೊಂದಿಗೆ ಸಂಭ್ರಮಿಸಿದರು. ಕೇಕ್‌ ಕತ್ತರಿಸುವುದರೊಂದಿಗೆ ರೈತರೊಂದಿಗೆ ರೈತ ದಿನ ಆಚರಿಸಿದರು. ಪಂಚರತ್ನ ರಥಯಾತ್ರೆ ವಾಸ್ತವ್ಯ ಹೂಡಿದ್ದ ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಯಾತ್ರೆ ಆರಂಭಕ್ಕೂ ಮುನ್ನ ಗ್ರಾಮದ ಜನ ಸಿದ್ಧಪಡಿಸಿದ್ದ ಎತ್ತಿನಗಾಡಿಯಲ್ಲಿ ರಥಯಾತ್ರೆ ನಡೆಯುವ ಜಾಗದವರೆಗೆ ತೆರಳಿದರು. ಈ ಸಮಯದಲ್ಲಿ ಗ್ರಾಮಸ್ಥರು ಹಾಗೂ ಜೆಡಿಎಸ್‌ ಕಾರ್ಯಕರ್ತರು ಹರ್ಷೋದ್ಘಾರ ಮೊಳಗಿಸಿದರು. ರೈತ ದಿನಾಚರಣೆ ಪ್ರಯುಕ್ತ ರೈತರ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿದರು. ನಂತರ ಊರಿನ ಅಂಗವಿಕಲರು, ಮಹಿಳೆಯರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಭರವಸೆ ನೀಡಿದರು.

click me!