ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಳಕೋಡ ಗ್ರಾಮದ ಸುಬ್ರಾಯ ಶೆಟ್ಟಿ ಅವರು ಸುಮಾರು 150ಕ್ಕೂ ಹೆಚ್ಚು ದೇಶಿ ತಳಿ ಮಲೆನಾಡು ಗಿಡ್ಡ ಗೋವುಗಳನ್ನು ಸುಬ್ರಾಯ ಶೆಟ್ಟಿ ಹಾಗೂ ಅವರ ಪುತ್ರ ವಿನಾಯಕ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರ ಹಾಗೆ ಸಾಕಾಣಿಕೆ ಮಾಡುತ್ತಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಡಿ.23): ಆ ಮನೆಯಲ್ಲಿ ಸುಂದರ, ಗಣಪ, ಭವಾನಿ, ಗಿಡ್ಡನದ್ದೇ ಕಾರು-ಬಾರು..ಮಧ್ಯಾಹ್ನ ಹೊಟ್ಟೆ ತುಂಬಾ ತಿಂದು ಒಂದು ರೌಂಡು ಕಾಡಿನಲ್ಲಿ ಸುತ್ತಾಡಿ ಸಂಜೆ ಕಡೆಗೆ ಮನೆಗೆ ಹಿಂತಿರುಗುತ್ತಾರೆ. ಗುಂಪಾಗಿ ಒಟ್ಟಾಗಿ ಹೋಗುವ ಇವರನ್ನು ನೋಡುವುದೇ ಚೆಂದ. ಯಾವುದೇ ಬಂಧನಕ್ಕೊಳಗಾಗದೆ, ಒಂದು ಕಡೆ ಕೂಡಿ ಹಾಕದೆ ಸ್ವತಂತ್ರವಾಗಿ ಓಡಾಡಲು ಬಿಡುತ್ತಿರುವ ಇವರನ್ನು ಆ ಮನೆಯವರು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಯಾವುದೇ ಲಾಭದ ನಿರೀಕ್ಷೆಯಿಲ್ಲದೇ ಕುಟುಂಬದ ಭಾಗದಂತೆ ಇವರು ನೋಡಿಕೊಳ್ಳುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಈ ಗೋ ಪ್ರೇಮಿ ಕುಟುಂಬ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು, ತುಂಟಾಟವಾಡುತ್ತ ಗೋ ಪಾಲಕನ ಜತೆ ಪ್ರೀತಿಯಿಂದ, ಸಲುಗೆಯಿಂದ ಓಡಾಡುತ್ತಿರುವ ಈ ದೇಶಿ ತಳಿ ಗೋವುಗಳು ಈ ಕುಟುಂಬದ ಸದಸ್ಯರಿದ್ದಂತೇ. ಗಣಪ, ಗಿಡ್ಡ, ಭವಾನಿ, ಸುಂದರ ಅಂತಾ ಕೂಗಿದ್ರೆ ಸಾಕು ಸಣ್ಣ ಮಕ್ಕಳಂತೆ ಓಡಿಕೊಂಡು ಬಂದು ಈ ಮನೆಯ ಸದಸ್ಯರ ತೋಳನ್ನು ಸೇರುತ್ತವೆ. ಈ ಎಲ್ಲಾ ದೃಶ್ಯಗಳು ಕಂಡುಬರೋದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಳಕೋಡ ಗ್ರಾಮದ ಸುಬ್ರಾಯ ಶೆಟ್ಟಿಯವರ ಮನೆಯಲ್ಲಿ. ಸುಮಾರು 150ಕ್ಕೂ ಹೆಚ್ಚು ದೇಶಿ ತಳಿ ಮಲೆನಾಡು ಗಿಡ್ಡ ಗೋವುಗಳನ್ನು ಸುಬ್ರಾಯ ಶೆಟ್ಟಿ ಹಾಗೂ ಅವರ ಪುತ್ರ ವಿನಾಯಕ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರ ಹಾಗೆ ಸಾಕಾಣಿಕೆ ಮಾಡುತ್ತಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಸಲ ಗೋವುಗಳ ಮುಖ ನೋಡಿ, ಅವುಗಳೊಂದಿಗೆ ಆಟ ಆಡದೆ ಈ ಕುಟುಂಬದ ಸದಸ್ಯರ ದಿನ ಹೋಗುವುದಿಲ್ಲ. ಇಲ್ಲಿರುವ 150 ಹಸುಗಳಿಗೂ ಈ ಮನೆಯವರು ವಿವಿಧ ಹೆಸರುಗಳನ್ನ ಇಟ್ಟಿದ್ದು, ಆ ಹೆಸರುಗಳಿಂದಲೇ ಅವುಗಳನ್ನು ಕರೆದು ಮೇವು ಹಾಕಿ ಅವುಗಳ ಜತೆ ಆಟವಾಡುತ್ತಾರೆ. ಈ ಮನೆಯ ವಿನಾಯಕ ಶೆಟ್ಟಿ BA, Bed, MA ಕನ್ನಡ ಮತ್ತು MCJ ಪದವಿಗಳನ್ನು ಪಡೆದಿದ್ದು, ಇವರು ಬೇರೆಡೆ ಕೆಲಸಕ್ಕೆ ಅಲೆದಾಡುವ ಬದಲು ತಮ್ಮ ಮನೆಯ ಗೋವುಗಳನ್ನು ಸಾಕಾಣಿಕೆ ಮಾಡುತ್ತಾ, ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಲೆ ತಲಾಂತರದಿಂದ ಈ ಕುಟುಂಬ ಗೋವುಗಳಿಗೆ ತೋರಿಸುತ್ತಿರುವ ಪ್ರೀತಿಗೆ ಯಾರೂ ಮನಸೋಲದವರಿಲ್ಲ. ಈ ಕುಟುಂಬ ಸರಕಾರದ ಅನುದಾನಕ್ಕೆ ಸಾಕಷ್ಟು ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ಪಶುಗಳಿಗೆ ಚಿಕಿತ್ಸೆ ಒದಗಿಸಲು ಸಿಬ್ಬಂದಿ, ಆ್ಯಂಬುಲೆನ್ಸ್‌ಗಳ ಕೊರತೆಯಿರುವುದರಿಂದ ಈ ಕುಟುಂಬವೇ ಖುದ್ದಾಗಿ ಖರ್ಚು ಮಾಡಿ ಗೋವುಗಳಿಗೆ ಚಿಕಿತ್ಸೆ ಕೂಡಾ ಒದಗಿಸುತ್ತದೆ.
ಶಿರಸಿ: ಮೂರು ತಿಂಗಳ ಹಸುಗೂಸು ಬಿಟ್ಟು ಹೋದ ಕಟುಕ ಪೋಷಕರು..!
ಅಂದಹಾಗೆ, ಈ ಮನೆಯ ಮಾಲಕ ಸುಬ್ರಾಯ ಶೆಟ್ಟಿ ಅವರ ತಂದೆಯ ಕಾಲದಿಂದಲೂ ದನಗಳನ್ನು ಸಾಕಲಾಗುತ್ತಿದೆ. ಅಂದಿನ ಕಾಲದಿಂದ ಇವರ ಮನೆಯಲ್ಲಿ 300 ದನಗಳನ್ನು ಸಾಕಲಾಗುತ್ತಿತ್ತು. ಬಳಿಕ ಸ್ಥಳೀಯ ದೇವಸ್ಥಾನಗಳಿಗೆ 35 ದನಗಳು ಹಾಗೂ ಬಡವರಿಗೆ ಒಂದೆರಡರಂತೆ ಹಲವು ದನಗಳನ್ನು ಉಚಿತವಾಗಿ ನೀಡಿದ್ದರು. ಹೀಗೆಲ್ಲಾ ದಾನ ಮಾಡಿ ಈ ಮನೆಯಲ್ಲಿ ಪ್ರಸ್ತುತ 150 ದನಗಳಿವೆ. ಇನ್ನು ಇವರ ಮನೆಯಲ್ಲಿ ಮಲೆನಾಡ ಗಿಡ್ಡ ಹಸು, ಕರುಗಳಿಗೆ ಮಧ್ಯಾಹ್ನದ ಬಿಸಿಯೂಟ ತಿನ್ನಿಸುತ್ತಾರೆ. ಜತೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ದಿನ, ದೀಪಾವಳಿ ಹಬ್ಬದ ದಿನಗಳಲ್ಲಿ ಹಸುಗಳಿಗೆ ಹೋಳಿಗೆ ಊಟ, ಬೂಂದಿ ಲಾಡು, ಪಾಯಸ ಬಡಿಸಲಾಗುತ್ತದೆ. ಇವರ ಮನೆಯಲ್ಲಿ ನೂರಾರು ಗೋವುಗಳಿದ್ದರೂ ಒಂದೇ ಒಂದು ಗೋವಿನಿಂದ ಹಾಲು ಕರಿಯಲ್ಲ, ಎಲ್ಲವನ್ನೂ ಕರುಗಳೇ ಕುಡಿಯಲಿ ಎಂದು ಬಿಟ್ಟು ಬಿಡುತ್ತಾರೆ. ಯಾವ ಕಾರಣಕ್ಕೂ ಹಾಲನ್ನಾಗಲೀ, ಹಸುಗಳನ್ನಾಗಲೀ ಇವುಗಳನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಈ ಗೋವುಗಳ ಸಾಕಾಣಿಕೆಗೆ ಅಂತಾನೆ ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಮೇವು ತರುವುದು, ಹಿಂಡಿ ತರುವುದು, ಅವುಗಳ ಆರೈಕೆ ಹೀಗೆ ಹತ್ತು ಹಲವು ರೀತಿ ಖರ್ಚುಗಳನ್ನು ಈ ಕುಟುಂಬ ಭರಿಸುತ್ತದೆ. ಗೋವುಗಳು ನಮ್ಮ ಮನೆ ದೇವರು, ಅವುಗಳ ಸೇವೆ ಮಾಡುವುದೇ ನಮ್ಮ ಭಾಗ್ಯ ಅಂತಾ ಗೋವುಗಳ ಸೇವೆ ಮಾಡುತ್ತಿದೆ ಈ ಕುಟುಂಬ.
ಸುಬ್ರಾಯ ಶೆಟ್ಟಿ, ಗೋ ಪಾಲಕರು
ಒಟ್ಟಿನಲ್ಲಿ 150ಕ್ಕೂ ಹೆಚ್ಚು ದೇಶಿ ತಳಿ ಮಲೆನಾಡು ಗಿಡ್ಡ ಹಸುಗಳನ್ನು ನಿಸ್ವಾರ್ಥದಿಂದ ಈ ಕುಟುಂಬ ಸಾಕುತ್ತಾ ಬಂದಿದೆ. ಗೋವುಗಳ ಮೇಲಿನ ಪ್ರೀತಿ ಸಂಬಂಧಿಸಿ ಈ ಕುಟುಂಬ ಮಾಡುತ್ತಿರುವ ಗೋ ಸೇವೆ ಎಲ್ಲರಿಗೂ ಮಾದರಿಯಾಗಿದ್ದು, ಸರಕಾರ ಇಂತಹ ಗೋ ಪ್ರೇಮಿಗಳಿಗೆ ಅನುದಾನ ಒದಗಿಸಿ ಹೆಚ್ಚೆಚ್ಚು ಗೋವುಗಳನ್ನು ಸಾಕಲು ಪ್ರೇರೇಪಿಸಬೇಕಿದೆ.