ಕಾರವಾರ (ಅ.15) : ಜಿಲ್ಲೆಯ ಬಹುತೇಕ ಕಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾದರೆ ಜನರು ಭಯದಿಂದ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ. ಕಳೆದ ಆರು ತಿಂಗಳಿಂದ 7300 ಜನರಿಗೆ ಬೀದಿ ನಾಯಿಗಳು ಕಡಿದಿವೆ. ಜಿಲ್ಲೆಯ ಬಹುತೇಕ ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಗಲಿನಲ್ಲಿ ಕಾಣಸಿಗದ ಬೀದಿನಾಯಿಗಳು ರಾತ್ರಿ ವೇಳೆ ಗುಂಪುಗುಂಪಾಗಿ ರಸ್ತೆಯ ಮೇಲೆ ಇರುತ್ತವೆ. ಪಾದಚಾರಿಗಳು ಅಥವಾ ವಾಹನ ಆ ರಸ್ತೆಯಲ್ಲಿ ಹೋದರೆ ಏಕಾಏಕಿ ಬೊಗಳುತ್ತಾ ಮೈ ಮೇಲೆರಗುತ್ತವೆ. ಇದರಿಂದಾಗಿ ಜನರು ಭಯದಿಂದ ಓಡಾಡುವಂತೆ ಆಗಿದೆ.
ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್
ಪ್ರಾಣಿ, ಮಾನವ ಬಲಿ:
ಕಳೆದ ಕೆಲವು ದಿನದ ಹಿಂದೆ ರಾಜೇಶ ಎನ್ನುವವರು ಕೆಂಚಾ ರಸ್ತೆಯಲ್ಲಿ ಸಂಜೆ ನಡೆದುಕೊಂಡು ಹೋಗುತ್ತಿದ್ದಾಗ ಆ ರಸ್ತೆಯಲ್ಲಿದ್ದ ಬೀದಿನಾಯಿಗಳು ಬೊಗಳುತ್ತಾ ಏಕಾಏಕಿ ಅವರನ್ನು ಸುತ್ತುವರಿದಿದ್ದವು. ಭಯದಿಂದ ತತ್ತರಿಸಿ ಹೋಗಿದ್ದರು. ಬುಧವಾರ ರಾತ್ರಿ ಪ್ರಸಾದ್ ಎನ್ನುವವರು ಗುರುಭವನ ರಸ್ತೆಯಲ್ಲಿ ದ್ವಿ ಚಕ್ರ ವಾಹನದ ಮೇಲೆ ಸಾಗುತ್ತಿದ್ದಾಗ ಅಲ್ಲಿದ್ದ 4-5 ನಾಯಿಗಳು ಏಕಾಏಕಿ ಬೊಗಳುತ್ತಾ ವಾಹನ ಬೆನ್ನಟ್ಟಿಬಂದಿದ್ದವು. ಇದರಿಂದ ಭಯಗೊಂಡ ಅವರು ಬೈಕಿನ ವೇಗ ಹೆಚ್ಚಿಸಿ ಎದುರಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿದ್ದರು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸಂಜೆ ವೇಳೆ ಟ್ಯೂಶನ್‌ಗೆ ಹೋಗುವ ಮಕ್ಕಳನ್ನೂ ತಟ್ಟಿಸಿಕೊಂಡು ಬಂದಿರುವ ಘಟನೆಗಳು ನಡೆದಿವೆ. ಭಟ್ಕಳ, ಕಾರವಾರದಲ್ಲಿ ವರ್ಷದ ಹಿಂದೆ ಇಬ್ಬರು ವ್ಯಕ್ತಿಗಳನ್ನು ಬೀದಿನಾಯಿಗಳು ಬಲಿ ತೆಗೆದುಕೊಂಡಿವೆ. ಮುಂಡಗೋಡ ತಾಲೂಕಿನಲ್ಲಿ ನೀರು ಕುಡಿಯಲು ಬಂದ ಅದೆಷ್ಟೋ ಜಿಂಕೆಗಳು ಬೀದಿನಾಯಿಗಳ ಆಹಾರವಾಗಿದೆ. ಜಿಲ್ಲೆಯ ಜನರು ಬೀದಿನಾಯಿಗಳ ಭಯದಿಂದ ತತ್ತರಿಸಿದ್ದು, ರಾತ್ರಿಯಾದರೆ ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ.
ಜಾನುವಾರು:
ಬೀಡಾಡಿ ಜಾನುವಾರುಗಳ ಹಾವಳಿ ಕೂಡ ಹೆಚ್ಚಾಗಿದೆ. ನಗರ, ಪಟ್ಟಣ, ಗ್ರಾಮೀಣ ಭಾಗ, ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಮಲಗುತ್ತಿವೆ. ಇದರಿಂದಾಗಿ ವಾಹನ ಸವಾರರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ಶಿವಪ್ರಕಾಶ ದೇವರಾಜು ಎಸ್‌ಪಿಯಿದ್ದಾಗ ಬೀಡಾಡಿ ಜಾನುವಾರುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಲು ಇಲಾಖೆಯಿಂದ ಕ್ರಮ ವಹಿಸಿದ್ದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಾಕಷ್ಟುಶ್ರಮ ಪಟ್ಟಿದ್ದರು. ಆದರೆ ಬೀಡಾಡಿ ಜಾನುವಾರುಗಳನ್ನು ಹಿಡಿಯುವುದು ಕಷ್ಟವಾಗಿದ್ದರಿಂದ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ.
ಬೀದಿ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಕೋಟೆನಾಡಿನ ಜನರು!
ಜಿಲ್ಲೆಯಲ್ಲಿ 70 ಸಾವಿರ ಸಾಕು ನಾಯಿಗಳಿವೆ. ಮನೆಗಳಲ್ಲಿರುವ ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಗುತ್ತಿದೆ. ಬೀದಿನಾಯಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಹಿಡಿದು ಲಸಿಕೆ ನೀಡಿ ಅಲ್ಲಿಯೇ ಬಿಡಲಾಗುತ್ತದೆ. ಬೇರೆಡೆ ಸಾಗಿಸುವಂತಿಲ್ಲ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ರಾಜೇಶ ಬಂಗ್ಲೆ ಹೇಳಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯುವುದು ಕಷ್ಟಸಾಧ್ಯ. ಆದರೂ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗೆ ರೇಬಿಸ್ ಲಸಿಕೆ ನೀಡಲು ಸಹಕಾರ ನೀಡುವಂತೆ ಕೋರಲಾಗಿದೆ. ಮನೆಗಳಲ್ಲಿ ಸಾಕುವ ನಾಯಿಗಳಿಗೆ ಲಸಿಕೆಯನ್ನು ಎಲ್ಲರೂ ಕೊಡಿಸಬೇಕು ಎಂದಿದ್ದಾರೆ.