ಪಟ್ಟಣಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಡಾಬಾಗಳ ತ್ಯಾಜ್ಯ, ಕಲುಷಿತ ನೀರು ಬಿಡುವುದನ್ನು ತಡೆಗಟ್ಟಲು ಹೋದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಡಾಬಾ ಮಾಲೀಕರ ನಡುವೆ ವಾಗ್ವಾದ ಉಂಟಾಗಿ, ಕಾಮಗಾರಿಗೆ ತಡೆ ನಡೆಸಿದ ಘಟನೆ ನಡೆದಿದೆ.
ಕೊರಟಗೆರೆ : ಪಟ್ಟಣಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಡಾಬಾಗಳ ತ್ಯಾಜ್ಯ, ಕಲುಷಿತ ನೀರು ಬಿಡುವುದನ್ನು ತಡೆಗಟ್ಟಲು ಹೋದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಡಾಬಾ ಮಾಲೀಕರ ನಡುವೆ ವಾಗ್ವಾದ ಉಂಟಾಗಿ, ಕಾಮಗಾರಿಗೆ ತಡೆ ನಡೆಸಿದ ಘಟನೆ ನಡೆದಿದೆ.
ಜಂಪೇನಹಳ್ಳಿ ಕೆರೆಯ ದಂಡೆಯ ಮೇಲಿರುವ ಕೆಲವು ಡಾಬಾಗಳು ಮತ್ತು ಲಾಡ್ಜ್‌ಗಳಿಂದ ಹೊರಬರುವ ಕಲುಷಿತ ನೀರು ಮತ್ತು ತ್ಯಾಜ್ಯ ಬಿಡುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಭಾಗ್ಯಮ್ಮ, ಆರೋಗ್ಯಾಧಿಕಾರಿ ಮಹಮದ್ ಹುಸೇನ್ ಸೇರಿದಂತೆ ಸಿಬ್ಬಂದಿ ಸಾರ್ವಜನಿಕರ ದೂರಿನ ಮೇಲೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾದರು. ಡಾಬಾ ಮತ್ತು ಹೋಟೆಲ್‌ಗಳ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿದ್ದೀರಿ, ಡಾಬಾದಲ್ಲಿ ಉಪಯೋಗಿಸುವ ಮದ್ಯದ ಖಾಲಿ ಬಾಟಲ್, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ಕೆರೆಗೆ ಹಾಕಿದ್ದೀರಿ. ಇದು ಕಾನೂನು ರೀತಿಯಲ್ಲಿ ಅಪರಾಧ. ಈ ಕೆರೆಯ ನೀರನ್ನು ಪಟ್ಟಣದ ಸಾರ್ವಜನಿಕರ ಕುಡಿಯುವ ನೀರಿಗೆ ಬಳಸಲಾಗುತ್ತಿದ್ದು, ನೀವು ತ್ಯಾಜ್ಯ ಹಾಕಿದರೆ ಜನರ ಆರೋಗ್ಯಕ್ಕೆ ತೊಂದರೆ ಆಗುತ್ತದೆ. ಕೂಡಲೆ ಮಾಲಿನ್ಯವನ್ನು ತಡೆಗಟ್ಟಬೇಕು, ತಪ್ಪಿದರೆ ನಮ್ಮ ಕರ್ತವ್ಯ ಮಾಡುತ್ತೇವೆ ಎಂದು ಡಾಬಾ ಮಾಲೀಕರಿಗೆ ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ, ಕೆರೆಯನ್ನು ಮುಚ್ಚುವ ಅಧಿಕಾರ ಯಾರಿಗೂ ಇಲ್ಲ, ಆದರೆ ಇಲ್ಲಿ ಕೆಲವರು ಪರಿಹಾರ ಬಂದಿಲ್ಲ ಎಂಬ ನೆಪ ಇಟ್ಟುಕೊಂಡು ಕೆರೆಯನ್ನು ಮುಚ್ಚಿ ಡಾಬಾ ನಿರ್ಮಾಣ ಮಾಡಿ ಅದರ ಕಲುಷಿತ ನೀರು ಮತ್ತು ತ್ಯಾಜ್ಯವನ್ನು ಪಟ್ಟಣದ ಸಾರ್ವಜನಿಕರು ಕುಡಿಯುವ ನೀರಿನ ಕೆರೆಗೆ ಬಿಡುತ್ತಿದ್ದಾರೆ. ಈ ಬಗ್ಗೆ ಡಾಬಾದವರಿಗೆ ಹಲವು ಬಾರಿ ಮೌಖಿಕ ಮತ್ತು ಲಿಖಿತ ನೋಟಿಸ್ ನೀಡಿದ್ದೇವೆ ಆದರೂ ಅವರು ಕೆರೆಯನ್ನು ಕಲುಷಿತ ಮಾಡುತ್ತಿದ್ದಾರೆ ಇದು ಕಾನೂನಿನ ರೀತಿಯಲ್ಲಿ ಅಪರಾಧ ಎಂದರು.