ಅಪಾಯಕಾರಿಯಾಗಿ ದ್ವಿಚಕ್ರ ವಾಹನ ವ್ಹೀಲಿಂಗ್, ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಮಾಡುವ ಸವಾರರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಬೆಂಗಳೂರು (ಡಿ.14): ಅಪಾಯಕಾರಿಯಾಗಿ ದ್ವಿಚಕ್ರ ವಾಹನ ವ್ಹೀಲಿಂಗ್, ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಮಾಡುವ ಸವಾರರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಹೊಸವರ್ಷದ ಸಂದರ್ಭದಲ್ಲಿ ಯಾವುದೇ ಅವಘಡಗಳು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಯುವಕರು ರಸ್ತೆಗಳಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್, ಡ್ರಂಕ್ ಆ್ಯಂಡ್ ಡ್ರೈವಿಂಗ್, ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದು, ಪೋಷಕರು ಹದಿಹರೆಯದ ಮಕ್ಕಳಿಗೆ ಬೈಕ್ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
56 ಮಂದಿ ಬಂಧನ: ಕಳೆದ ಹತ್ತು ದಿನಗಳಲ್ಲಿ ನಗರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ವ್ಹೀಲಿಂಗ್ ಮಾಡುವ 56 ಮಂದಿ ಸವಾರರನ್ನು ಬಂಧಿಸಿ, 75 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. 45 ಸವಾರರ ನೋಂದಣಿ ಪ್ರಮಾಣ ಪತ್ರ(ಆರ್‌ಸಿ) ಮತ್ತು 23 ಸವಾರರು ಚಾಲನಾ ಪರವಾನಗಿ(ಡಿಎಲ್) ಜಪ್ತಿ ಮಾಡಿ, ಅಮಾನತುಗೊಳಿಸಲು ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ 10 ಮಂದಿ ಅಪ್ರಾಪ್ತರ ಪೋಷಕರ ವಿರುದ್ಧ ಜೆ.ಜೆ.ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಒಂದೇ ದಿನ 1300 ಪ್ರಕರಣ: ನಗರ ಸಂಚಾರ ಪೊಲೀಸರು ಬುಧವಾರ ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರರು/ಚಾಲಕರ ವಿರುದ್ಧ 1,413 ಪ್ರಕರಣ ದಾಖಲಿಸಿ, ₹6.88 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ತ್ರಿಬಲ್ ರೈಡಿಂಗ್ 25, ಪ್ರವೇಶ ನಿಷೇಧ 65, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ 1,273 ಹಾಗೂ ಇತರೆ ಸಂಚಾರ ನಿಯಮ ಉಲ್ಲಘನೆ 50 ಸೇರಿ ಒಟ್ಟು 1,413 ಪ್ರಕರಣ ದಾಖಲಿಸಿದ್ದಾರೆ. ಅಂತೆಯೇ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡಿದ ಆರೋಪದಡಿ ಐದು ಪ್ರಕರಣ ದಾಖಲಿಸಿದ್ದು, ನಾಲ್ವರು ಸವಾರರನ್ನು ಬಂಧಿಸಿದ್ದಾರೆ. ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಚಾರ ನಿಯಮಗಳ ಪಾಲನೆ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಸ್ನೇಹಿತನ ಮನೆಗೆ ಪಾರ್ಟಿಗೆ ಬಂದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಟೆಕಿ ಬಂಧನ
ಬೈಕ್ ಜಪ್ತಿ: ಸಾರ್ವಜನಿಕ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಸಾಹಸ ಮಾಡುತ್ತಿದ್ದ ಸವಾರನನ್ನು ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿಯ ಕಿಶನ್(25) ಬಂಧಿತ ಸವಾರ. ಶನಿವಾರ ಮಧ್ಯಾಹ್ನ ಸುಮಾರು 12.15ಕ್ಕೆ ಬಿಟಿಎಂ ಲೇಔಟ್ 4ನೇ ಹಂತದ ಆರ್‌ಟಿಓ ಕಚೇರಿ ಮುಖ್ಯರಸ್ತೆ ಕಡೆಯಿಂದ ವಿಜಯಾ ಬ್ಯಾಂಕ್ ಲೇಔಟ್ ಸರ್ಕಲ್ ಕಡೆಗೆ ಕಿಶನ್ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ. ಈ ವೇಳೆ ಕರ್ತವ್ಯನಿರತ ಸಂಚಾರ ಪೊಲೀಸರು ಕಿಶನ್‌ನನ್ನು ದ್ವಿಚಕ್ರ ವಾಹನ ಸಹಿತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.