ನಗರದಲ್ಲಿನ ಅಕ್ರಮ ಹೋರ್ಡಿಂಗ್ ಹಾಗೂ ಫ್ಲೆಕ್ಸ್ ಅಳವಡಿಕೆ ವಿಷಯವನ್ನು ಲಘುವಾಗಿ ಪರಿಗಣಿಸದಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಎಚ್ಚರಿಸಿರುವ ಹೈಕೋರ್ಟ್.
ಬೆಂಗಳೂರು (ಡಿ.14): ನಗರದಲ್ಲಿನ ಅಕ್ರಮ ಹೋರ್ಡಿಂಗ್ ಹಾಗೂ ಫ್ಲೆಕ್ಸ್ ಅಳವಡಿಕೆ ವಿಷಯವನ್ನು ಲಘುವಾಗಿ ಪರಿಗಣಿಸದಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಎಚ್ಚರಿಸಿರುವ ಹೈಕೋರ್ಟ್, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಜಾಹೀರಾತು ಫಲಕ ಹಾಕುವವರನ್ನು ದಂಡಿಸುವ ನಿಯಮವನ್ನು ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಬೈಲಾದಲ್ಲಿ ಸೇರಿರುವುದು ಕಂಡುಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಹೋರ್ಡಿಂಗ್ ಹಾವಳಿ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರ ಮತ್ತು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು.
ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್ ಅಳವಡಿಕೆಯಿಂದ ವಾಹನದಟ್ಟಣೆ ಉಂಟಾಗುವುದಲ್ಲದೆ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಹಾಗಾಗಿ ಸರ್ಕಾರ ಮತ್ತು ಬಿಬಿಎಂಪಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿದವರಿಗೆ ದಂಡದ ಪ್ರಮಾಣ ನಿಗದಿಪಡಿಸುವ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಬೇಕು ಎಂದು ನ್ಯಾಯಾಲಯ ವಿಚಾರಣೆಯನ್ನು 2025ರ ಜ.16ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ನ್ಯಾಯಪೀಠ ಪ್ರತಿಕ್ರಿಯಿಸಿ, ಅಕ್ರಮ ಜಾಹಿರಾತು ಅಳವಡಿಕೆ ನಿಯಂತ್ರಣಕ್ಕೆ ಕೋರಿ 2017ರಲ್ಲಿ ಪಿಐಎಲ್ ಸಲ್ಲಿಕೆಯಾಗಿವೆ.
ಅವುಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಬೆಂಗಳೂರಿನ ಅಂದ ಹಾಳುಗೆಡವುತ್ತಿರುವ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ಅಥವಾ ಹೋರ್ಡಿಂಗ್ ಗಳನ್ನು ನಿಯಂತ್ರಿಸಲು ಹೈಕೋರ್ಟ್ ಹಲವು ನಿರ್ದೇಶನ ನೀಡಿದೆ. ಆದರೂ ನಗರದಲ್ಲಿ ಅವುಗಳ ಹಾವಳಿ ಮೀತಿ ಮೀರಿದೆ. ಬೆಂಗಳೂರಿನ ಜಾಹೀರಾತು ಫಲಕಗಳ ಅಕ್ರಮ ಅಳವಡಿಕೆ ಅತಿ ಮುಖ್ಯವಾದ ಸಮಸ್ಯೆಯಾಗಿದ್ದು, ಎಲ್ಲ ನಗರವಾಸಿಗಳಿಗೂ ಹಲವು ವರ್ಷಗಳಿಂದ ತೊಂದರೆ ನೀಡುತ್ತಿದೆ. ಇಷ್ಟಾದರೂ ಎಚ್ಚೆತ್ತುಕೊಂಡಿಲ್ಲ, ಉದ್ದೇಶಿತ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಬೈಲಾ-2024ರಲ್ಲಿನ ಅಕ್ರಮ ಜಾಹೀರಾತು ಹಾಕುವವರನ್ನು ಶಿಕ್ಷಿಸುವ ಅಂಶವೇ ಇಲ್ಲ ಎಂದು ಚಾಟಿ ಬೀಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ಭಾರೀ ಸಂಖ್ಯೆಯಲ್ಲಿ ಬಾಕಿ: ಗೃಹಸಚಿವ ಪರಮೇಶ್ವರ್
ಕೋರ್ಟ್ ಆಕ್ಷೇಪವಿದ್ದರೂ ದಂಡ ನಿಗದಿ ಏಕಿಲ್ಲ: ಉದ್ದೇಶಿತ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಬೈಲಾ 2024 ರಲ್ಲಿನ ಬೈಲಾ 15(1)(ಐಐಐ)ರಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳಲ್ಲಿನ ಅಕ್ರಮ ಫ್ಲೆಕ್ಸ್ , ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಾಗುವುದು ಮತ್ತು ಅದರ ಮಾಲೀಕರನ್ನು ದಂಡಿಸಲಾಗುವುದು ಎಂದು ಹೇಳಲಾಗಿದೆ. ಆದರೆ, ನ್ಯಾಯಾಲಯ ಹಿಂದೆಯೇ ಈ ಅಂಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರೂ ಸಹ ಸಾರ್ವಜನಿಕ ಸ್ಥಳಗಳು, ಪಾದಚಾರಿ ಮಾರ್ಗಗಳು, ಸಾರ್ವಜನಿಕ ರಸ್ತೆ ಮತ್ತಿತರ ಕಡೆ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್ ಹಾಕಿದವರಿಗೆ ದಂಡದ ಪ್ರಮಾಣವನ್ನು ನಿಗದಿಪಡಿಸಿಲ್ಲ ಎಂದು ನ್ಯಾಯಾಲಯ ಆಕ್ಷೇಪಿಸಿತು.