ಯಲ್ಲಾಪುರ (ಸೆ.25) : ಸಹಕಾರ ಕ್ಷೇತ್ರ ಸದೃಢವಾಗಿರಲು ರೈತರೇ ಪ್ರಧಾನ ಕಾರಣ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ತಾಲೂಕಿನ ಹಿರೇಸರದ ಜಿ.ಎನ್. ಹೆಗಡೆ ನಿವಾಸದಲ್ಲಿ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಪತ್ತೇತರ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಜಿಲ್ಲೆ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಸ್ತುತ ಸಹಕಾರಿ ಕ್ಷೇತ್ರ ಉತ್ತಮ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಇದಕ್ಕೆ ಆಯಾ ಪ್ರದೇಶದ ರೈತರೇ ಪ್ರಮುಖ ಕಾರಣ. ಜಿಲ್ಲೆಯಲ್ಲಿ ಸಂಘ-ಸಂಸ್ಥೆಗಳ ಡಿಪಾಸಿಟ್‌ದಾರರಿಗೆ ಕೊರತೆಯಿಲ್ಲ. ಆದರೆ ಉತ್ತಮ ಸಾಲಗಾರರ ಕೊರತೆ ಕಂಡುಬರುತ್ತಿದೆ ಎಂದರು.
ಕಾರ್ಮಿಕರಿಗೆ ಡಿಜಿಟಲ್ ಆರೋಗ್ಯ ಸೇವೆ ಪ್ರಾಯೋಗಿಕವಾಗಿ ಆರಂಭ: ಸಚಿವ ಹೆಬ್ಬಾರ್
undefined
ಸಂಘ-ಸಂಸ್ಥೆಗಳು ನೀಡುವ ಸಾಲಕ್ಕೆ ಕಡಿಮೆ ಬಡ್ಡಿ ದರ ಆಕರಿಸುವುದು ರೈತರ ಸರ್ವಾಂಗೀಣ ಪ್ರಗತಿಗೆ ಪೂರಕವಾಗುತ್ತದೆ. ರೈತರು ಕೂಡ ಪಡೆದ ಸಾಲವನ್ನು ಮರಳಿ ನೀಡುವಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ ಹೊಂದಿರಬೇಕಾದುದು ಅತ್ಯವಶ್ಯಕ. ಸಂಸ್ಥೆಗಳು ರೈತರಿಗೆ ನೀಡುವ ಕೃಷಿ ಸಾಲ ರೈತರನ್ನು ಉಳಿಸಿದರೆ; ಕೃಷಿಯೇತರ ಸಾಲ ಸಂಸ್ಥೆಗಳ ಉಳಿವಿಗೆ ಕಾರಣವಾಗುತ್ತದೆ ಎಂದು ಅರ್ಥಪೂರ್ಣವಾಗಿ ಹೇಳಿದರು.
ಇಂದು ಉತ್ತಮ ಸಾಲಗಾರರನ್ನು ಉಳಿಸಿಕೊಳ್ಳುವುದು ಸಂಸ್ಥೆಗಳಿಗೆ ಸವಾಲಾಗಿದೆ. ಪ್ರಾಮಾಣಿಕ ಸಾಲಗಾರರನ್ನು ಉಳಿಸುವಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಹೊಂದಿದ ಮನಃಸ್ಥಿತಿ ವಿಭಿನ್ನವಾಗಿದೆ. ಸಹಕಾರಿ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದ ಉತ್ತರಕನ್ನಡದಲ್ಲಿ ರಾಮಕೃಷ್ಣ ಹೆಗಡೆ, ಕಡವೆ ಶ್ರೀಪಾದ ಹೆಗಡೆ, ಮುಂಡಗೋಡಿನ ಗೋಖಲೆ ಮತ್ತಿತರರ ಕೊಡುಗೆ ಅಮೂಲ್ಯವಾಗಿದೆ. ಇಂತಹ ಉತ್ತಮ ಹೆಸರನ್ನು ನಾವು ಕಳೆದುಕೊಳ್ಳಬಾರದು ಎಂದರು.
ಸಹಕಾರಿಯ ಅಧ್ಯಕ್ಷ ಜಿ.ಎನ್. ಹೆಗಡೆ ಮಾತನಾಡಿ, .3 ಲಕ್ಷ ವ್ಯವಹಾರದಿಂದ ಆರಂಭಗೊಂಡ ನಮ್ಮ ಸಂಸ್ಥೆ ಇಂದು ಕೋಟ್ಯಂತರ ವಹಿವಾಟು ನಡೆಸುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ಇಂದು ನಮ್ಮ 5ನೇ ಶಾಖೆ ತೆರೆಯಲಾಗುತ್ತಿದೆ. ಮುಂದಿನ ವರ್ಷ ದ್ವಿದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂಸ್ಥೆ ವೈವಿಧ್ಯಮಯ ಹಾಗೂ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ನಡೆಸಿದೆ ಎಂದರು.
ಕಾರ್ಮಿಕರ ಧನ ಸಹಾಯ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ
ಅತಿಥಿಗಳಾದ ಹಿತ್ಲಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನ ಭಟ್ಟ, ಉಮ್ಮಚಗಿ ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ. ಭಟ್ಟಸಂಕದಗುಂಡಿ, ಹಿತ್ಲಳ್ಳಿ ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ಮಂಜುನಾಥ ಶೇಟ್, ಹಿತ್ಲಳ್ಳಿ ಗ್ರಾಪಂ ಸದಸ್ಯ ಸತ್ಯನಾರಾಯಣ ಹೆಗಡೆ, ವಿಕಾಸ್ ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ, ಶಿರಸಿ ಶಾಖೆಯ ಸಲಹಾ ಸಮಿತಿ ಸದಸ್ಯ ಪ್ರೊ. ಕೆ.ವಿ. ಭಟ್ಟ, ಯಲ್ಲಾಪುರ ಶಾಖೆಯ ಸಲಹಾ ಸಮಿತಿ ಸದಸ್ಯ ಆರ್.ಡಿ. ಹೆಬ್ಬಾರ, ಮುಂಡಗೋಡು ಶಾಖೆಯ ಸಲಹಾ ಸಮಿತಿ ಸದಸ್ಯ ಎಸ್.ಎನ್. ಹೆಗಡೆ, ಸಾಮಾಜಿಕ ಕಾರ್ಯಕರ್ತರಾದ ಆರ್.ಎನ್. ಹೆಗಡೆ, ಭಾಸ್ಕರ ಹೆಗಡೆ ವೇದಿಕೆಯಲ್ಲಿದ್ದರು. ಕೆ.ಎಸ್. ಭಟ್ಟನಿರ್ವಹಿಸಿದರು. ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಶೇಟ್ ವಂದಿಸಿದರು.