ಬೀದಿಬದಿ ವ್ಯಾಪಾರಸ್ಥರ ಮೇಲೆ ನಗರಸಭೆಯ ಸಿಬ್ಬಂದಿ ದೌರ್ಜನ್ಯ ಎಸಗಿದ ಕಾರವಾರ ನಗರಸಭೆಯ ಸಿಬ್ಬಂದಿ
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಬೆಳಗಾವಿ(ಆ.04): ಅವರು ಬೀದಿ- ಬದಿಯಲ್ಲಿ ಹೂವು, ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಸ್ಥರು. ಅದರಲ್ಲೂ ಇದೀಗ ಶ್ರಾವಣವಾದ್ದರಿಂದ ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು, ಹಣ್ಣುಗಳನ್ನ ಖರೀದಿಸಿ ತಂದು ಮಾರಾಟಕ್ಕೆ ಕುಳಿತಿದ್ದರು. ಆದ್ರೆ, ನಗರಸಭೆ ಅಧಿಕಾರಿಗಳ ದಬ್ಬಾಳಿಕೆಯಿಂದಾಗಿ ಇದೀಗ ಬೀದಿ ಬದಿ ವ್ಯಾಪಾರಸ್ಥರು ತಂದಿದ್ದ ಹೂವು, ಹಣ್ಣು ರಸ್ತೆ ಪಾಲಾಗಿದ್ದಲ್ಲದೇ, ಬಡವರ ವ್ಯಾಪಾರವೂ ಹಾಳಾಗಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದಾದ್ರೂ ಎಲ್ಲಿ...? ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾದ್ರೂ ಯಾಕೆ..? ಅಂತೀರಾ...ಈ ಸ್ಟೋರಿ ನೋಡಿ...
undefined
ಒಂದೆಡೆ ರಸ್ತೆಯಲ್ಲಿ ಬಿದ್ದಿರುವ ಹೂವು, ಹಣ್ಣುಗಳು, ಇನ್ನೊಂದೆಡೆ ರಸ್ತೆಯ ಮೇಲೆಯೇ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಜನರು. ಮತ್ತೊಂದೆಡೆ ನ್ಯಾಯಕ್ಕಾಗಿ ಆಗ್ರಹಿಸಿ ನಗರಸಭೆ ಮುಂಭಾಗ ಜಮಾವಣೆಗೊಂಡಿರುವ ವ್ಯಾಪಾರಸ್ಥರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. ಕಾರವಾರ ನಗರದ ರಸ್ತೆ ಬದಿಯಲ್ಲಿ ಹೂವು-ಹಣ್ಣು ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಬೀದಿಬದಿ ವ್ಯಾಪಾರಸ್ಥರ ಮೇಲೆ ನಗರಸಭೆಯ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ. ಬೀದಿಬದಿ ವ್ಯಾಪಾರ ಮಾಡದಂತೆ ವ್ಯಾಪಾರಸ್ಥರು ತಂದಿದ್ದ ಹೂವು, ಹಣ್ಣುಗಳನ್ನ ರಸ್ತೆಗೆ ಚೆಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
UTTARA KANNADA RAINFALL; ಮಲಗಿದ್ದವರ ಮೇಲೆ ಮನೆ ಕುಸಿದು 4 ಮಂದಿ ದುರ್ಮರಣ
ನಾಳೆ ವರಮಹಾಲಕ್ಷ್ಮಿ ಹಬ್ಬ ಇರೋದ್ರಿಂದ ಕಾರವಾರ ನಗರದ ಮಾರುಕಟ್ಟೆಯಲ್ಲೂ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಹಬ್ಬದಲ್ಲಿ ಹೆಚ್ಚಾಗಿ ವ್ಯಾಪಾರವಾಗುವ ಹೂವು, ಹಣ್ಣುಗಳ ಮಾರಾಟಕ್ಕಾಗಿ ಅನೇಕರು ನಗರದ ಸಿದ್ದಿವಿನಾಯಕ ದೇವಸ್ಥಾನ ಪಕ್ಕದ ರಸ್ತೆ ಬದಿಗಳಲ್ಲಿ ವ್ಯಾಪಾರಕ್ಕೆ ಕುಳಿತಿದ್ದರು. ಆದರೆ, ಕಾರವಾರದಲ್ಲಿ ನಗರಸಭೆ ಹೂವು, ಹಣ್ಣುಗಳ ವ್ಯಾಪಾರಕ್ಕೆ ಮಾರುಕಟ್ಟೆಯೊಂದನ್ನು ನಿರ್ಮಾಣ ಮಾಡಿದ್ದು ಅಲ್ಲಿಯೇ ವ್ಯಾಪಾರ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ನಗರಸಭೆ ನಿರ್ಮಿಸಿರುವ ಮಾರುಕಟ್ಟೆಯಲ್ಲಿ ವ್ಯಾಪಾರವಾಗದ ಕಾರಣ ವ್ಯಾಪಾರದ ನಿರೀಕ್ಷೆಯಿಂದ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ನಿಂತು ಹೂವು, ಹಣ್ಣು ವ್ಯಾಪಾರದಲ್ಲಿ ತೊಡಗಿದ್ದರು. ಈ ಹಿನ್ನೆಲೆ ನಗರ ಸಭೆ ಕಮಿಷನರ್ ಆರ್.ಪಿ.ನಾಯಕ್ ಸೂಚನೆ ಮೇರೆಗೆ ನಗರಸಭೆ ಸಿಬ್ಬಂದಿ ಏಕಾಏಕಿ ಆಗಮಿಸಿ ವ್ಯಾಪಾರಸ್ಥರು ತಂದಿದ್ದ ಹೂವು, ಹಣ್ಣುಗಳನ್ನ ಚೆಲ್ಲಿ ಬುಟ್ಟಿ, ತಕ್ಕಡಿಗಳನ್ನು ಎತ್ತಿಕೊಂಡು ತೆರಳಿದ್ದಾರೆ. ಇದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ನಗರಸಭೆಗೆ ಮುತ್ತಿಗೆ ಹಾಕಿ ಸಿಬ್ಬಂದಿ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ನಗರದಲ್ಲಿ ಕಳೆದೊಂದು ವರ್ಷದ ಹಿಂದೆಯೇ ಹೂವು, ಹಣ್ಣಿನ ವ್ಯಾಪಾರಕ್ಕಾಗಿ ಪ್ರತ್ಯೇಕ ಮಾರುಕಟ್ಟೆಯನ್ನು ನಗರಸಭೆ ನಿರ್ಮಿಸಿದೆ. ಆದ್ರೆ, ಈಗಾಗಲೇ ಬೀದಿ ಬದಿಗಳಲ್ಲಿ ಖರೀದಿಸಿ ಜನರಿಗೆ ರೂಢಿಯಾಗಿದ್ದು, ಮಾರುಕಟ್ಟೆ ಪ್ರತ್ಯೇಕವಾಗುವುದರಿಂದ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. ಅಲ್ಲದೇ, ಇದೀಗ ಶ್ರಾವಣವಾದ್ದರಿಂದ ಕೆಲವು ದಿನಗಳ ಕಾಲ ಬೀದಿ ಬದಿ ಕುಳಿತೇ ವ್ಯಾಪಾರ ಮಾಡೋದಾಗಿ ನಗರಸಭೆ ಆಯುಕ್ತರಿಗೆ ಹೇಳಿಕೊಂಡು ವ್ಯಾಪಾರಸ್ಥರು ವ್ಯಾಪಾರಕ್ಕೆ ಕುಳಿತಿದ್ದರು. ಆದ್ರೆ, ದೇವಸ್ಥಾನ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಸ್ಥರಿಂದಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಹೂವು, ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ನಗರಸಭೆ ಸಿಬ್ಬಂದಿ ಬುಟ್ಟಿಗಳನ್ನು ಕಸದ ಗಾಡಿಯಲ್ಲಿ ಹೊತ್ತೊಯ್ದಿದ್ದು ಯಾವ ನ್ಯಾಯ..? ಹಣ ಪಡೆದು ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಬ್ಬದ ನಿಮಿತ್ತ ಹೆಚ್ಚಿನ ಮೊತ್ತದ ಹೂವು, ಹಣ್ಣುಗಳನ್ನು ಖರೀದಿಸಿ ವ್ಯಾಪಾರಕ್ಕೆ ತಂದಿದ್ದು, ಇದೀಗ ಆಗಿರುವ ನಷ್ಟವನ್ನು ಯಾರು ತುಂಬಿ ಕೊಡುತ್ತಾರೆ ಎಂದು ವ್ಯಾಪಾರಸ್ಥರು ಪ್ರಶ್ನಿಸಿದ್ದಾರೆ.
ಇನ್ನು ಬೀದಿಬದಿ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿರುವ ನಗರಸಭೆ ಅಧ್ಯಕ್ಷರು, ಆಯುಕ್ತರು ಗಣೇಶ ಚತುರ್ಥಿಯವರೆಗೆ ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದು, ಈ ಬಳಿಕ ವ್ಯಾಪಾರಸ್ಥರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಒಟ್ಟಿನಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿ ದರ್ಪದಿಂದ ವ್ಯಾಪಾರಿಗಳ ಹೂವು, ಹಣ್ಣಿಗಳನ್ನು ಬೀದಿಗೆ ಚೆಲ್ಲಿ ದೌರ್ಜನ್ಯವೆಸಗಿದ್ದು, ಬೀದಿಬದಿ ವ್ಯಾಪಾರಸ್ಥರ ಹಬ್ಬದ ವ್ಯಾಪಾರಕ್ಕೆ ಅಡ್ಡಿಯಾಗಿದ್ದಲ್ಲದೇ, ಭಾರೀ ಅನ್ಯಾಯವೆಸಗಲಾಗಿದೆ.