Price Hike: ದಿನಸಿ, ತರಕಾರಿ, ಗ್ಯಾಸ್‌ ಎಲ್ಲವೂ ದುಬಾರಿ: ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ

By Kannadaprabha NewsFirst Published Nov 27, 2021, 8:40 AM IST
Highlights

*   ಬೆಲೆ ಇಳಿಕೆ ಸದ್ಯಕ್ಕೆ ಅಸಾಧ್ಯ
*   ಸಣ್ಣ ಹೋಟೆಲ್‌, ತಳ್ಳುಗಾಡಿ ವ್ಯಾಪಾರಿಗಳ ಆರ್ಥಿಕ ಸ್ಥಿತಿ ಅತಂತ್ರ
*   ವ್ಯಾಪಾರ ಕೈಬಿಟ್ಟು ಕೂಲಿ ಕೆಲಸದತ್ತ ಒಲವು
 

ಬೆಂಗಳೂರು(ನ.27):  ನಿರಂತರ ಮಳೆ(Rain) ಹಾಗೂ ಇಂಧನ(Fuel), ದಿನಸಿ(Groceries) ವಸ್ತು ಹಾಗೂ ತರಕಾರಿಗಳ(Vegetable) ಬೆಲೆ ಏರಿಕೆಯಿಂದಾಗಿ ಬೀದಿ ಬದಿಯ ಸಣ್ಣ ಸಣ್ಣ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.

ನಿತ್ಯ ಸಗಟು ಮಾರುಕಟ್ಟೆಯಿಂದ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಖರೀದಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸಣ್ಣ ವ್ಯಾಪಾರಿಗಳು ದುಬಾರಿ ದರದಲ್ಲಿ ತಂದ ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಯಾಗದೇ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಮಳೆಗೆ ತೊಯ್ದ ಸೊಪ್ಪುಗಳು ಬೇಗ ಹಾಳಾಗುತ್ತಿರುವುದರಿಂದ ಹಾಕಿದ ಬಂಡವಾಳ ಮರಳಿ ಸಿಗದಂತಾಗಿದೆ.

Karnataka Rains: ಅಕಾಲಿಕ ಮಳೆಗೆ ತರಕಾರಿ ಬೆಳೆ ನಾಶ, ಗ್ರಾಹಕರ ಜೇಬಿಗೆ ಕತ್ತರಿ..!

ಇನ್ನು ಬೀದಿ ಬದಿ ತಳ್ಳು ಗಾಡಿಯಲ್ಲಿ ಊಟ, ತಿಂಡಿ ಮಾರಾಟ ಮಾಡುವ ಹೊಟೇಲ್‌ಗಳು(Hotels) ಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಇದೆ. ದಿನಸಿ ವಸ್ತುಗಳು, ಗ್ಯಾಸ್‌ ಸಿಲಿಂಡರ್‌(Gas Cylinder) ದರ ಹೆಚ್ಚಾಗಿರುವುದರಿಂದ ಬರುತ್ತಿದ್ದ ಲಾಭ ಕಡಿಮೆಯಾಗಿದೆ. ಇಂತಹ ಹೊಟೇಲ್‌ಗಳಲ್ಲಿ ಸಾಮಾನ್ಯವಾಗಿ ಕಡಿಮೆ ದರದಲ್ಲಿ ಊಟ, ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿಗೆ ಬರುವ ಗ್ರಾಹಕರು ಸಾಮಾನ್ಯ ಜನರು. ಹೀಗಿರುವಾಗ ದರ ಹೆಚ್ಚಿಸಲು ಹಿಂದೆ ಮುಂದೆ ನೋಡುವ ಸ್ಥಿತಿ ಮಾಲೀಕರದ್ದಾಗಿದೆ. ಕೆಲವು ತಳ್ಳು ಗಾಡಿಯ ಹೊಟೇಲ್‌ಗಳ ಮಾಲೀಕರು ಈ ವ್ಯಾಪಾರವನ್ನೇ ಕೈ ಬಿಟ್ಟಿದ್ದಾರೆ ಎಂದು ಎಂದು ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳುತ್ತಾರೆ.

ಕೂಲಿ ಕೆಲಸಕ್ಕೆ ವ್ಯಾಪಾರಿಗಳು:

ನಗರದಲ್ಲಿ(Bengaluru) ಸುಮಾರು 1.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಈ ಪೈಕಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದ ತಳ್ಳು ಗಾಡಿ ವ್ಯಾಪಾರಿಗಳು ವ್ಯಾಪಾರವಿಲ್ಲದೇ, ದುಬಾರಿ ಬೆಲೆಯ ತರಕಾರಿ ತಂದು ಮಾರಲಾಗದೆ ವ್ಯಾಪಾರ ನಿಲ್ಲಿಸಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕೆಲವರಿಗಂತೂ ಕೂಲಿ ಕೆಲಸವೂ ಸಿಗದೇ ಉಪವಾಸ ಮಲಗುವ ಸ್ಥಿತಿಯಲ್ಲಿದ್ದಾರೆ. ಇವರ ಪರಿಸ್ಥಿತಿ ಸುಧಾರಿಸಲು ತರಕಾರಿಗಳ ಬೆಲೆ ಕಡಿಮೆಯಾಗಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಇಳಿಕೆ ಕನಸಿನ ಮಾತಾಗಿದೆ ಎಂದು ರಂಗಸ್ವಾಮಿ ತಿಳಿಸಿದರು.

Price Hike: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್; ನಗರ ಆಟೋ ಪ್ರಯಾಣ ದರ ಏರಿಕೆ!

ಕಳೆದ ಕೆಲವು ವಾರಗಳಿಂದ ನಿರಂತವಾಗಿ ಸುರಿದ ಮಳೆಯಿಂದ ತರಕಾರಿ ಬೆಳೆಗಳು ಹಾಳಾಗಿವೆ. ಇದರಿಂದ ಸಗಟು ವರ್ತಕರಿಗೆ, ಮಾರುಕಟ್ಟೆಗಳಿಗೆ ಉತ್ಪನ್ನ ಪೂರೈಕೆಯಲ್ಲಿ ಕೊರತೆ ಆಗಿದೆ. ರೈತರಲ್ಲಿ ಇದ್ದ ಅಲ್ಪ ಸ್ವಲ್ಪ ತರಕಾರಿ ಮಳೆಗೆ ಗುಣಮಟ್ಟಕಳೆದುಕೊಂಡಿದೆ. ಹೀಗಾಗಿ ಗುಂಡು ಮೆಣಸಿನಕಾಯಿ (ಕ್ಯಾಪ್ಸಿಕಂ), ಟೊಮೆಟೋ, ನುಗ್ಗೇಕಾಯಿ ದರಗಳು .100ರ ಗಡಿ ದಾಟಿದರೆ, ಕ್ಯಾರೆಟ್‌, ಹಸಿ ಮೆಣಸಿಕಾಯಿ, ಬೀನ್ಸ್‌, ಶುಂಠಿ, ಬೆಳ್ಳುಳ್ಳಿ ಹಾಗೂ ಮತ್ತಿತರ ದರ ಅಧಿಕವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿಯಿಂದಾಗಿ ಬೀದಿ ಬದಿ ವ್ಯಾಪಾರಿಗಳ ಬದುಕು ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಹಾಕಿದ ಬಂಡವಾಳವೇ ಬರುತ್ತಿಲ್ಲ

ಸೊಪ್ಪು, ತರಕಾರಿಗಳು, ಇಂಧನ, ಅಡುಗೆ ಅನೀಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಬೀದಿ ಬದಿ ಸಣ್ಣ ಹೋಟಲ್‌ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಶೇ.40ರಷ್ಟು ಜನರಲ್ಲಿ ಶೇ.20ರಷ್ಟು ಮಂದಿ ಆ ಉದ್ಯೋಗದಿಂದ(Job) ವಿಮುಖರಾಗಿದ್ದಾರೆ. ಒಂದು ಪ್ಲೇಟ್‌ ಅನ್ನ ಸಾಂಬಾರ್‌ ಬೆಲೆ .30 ಎಂದರೆ ಅದರ ತಯಾರಿಕೆಗೆ ಬೇಕಾದ ಪದಾರ್ಥಗಳ ಬೆಲೆ ಸುಮಾರು .25-30 ತಗುಲುತ್ತದೆ. ಹಾಗೆಂದು ಬೆಲೆ ಹೆಚ್ಚಿಸಿದರೆ ಗ್ರಾಹಕರು(Customers) ಬರುವುದಿಲ್ಲ, ಬೆಲೆ ಹೆಚ್ಚಿಸದಿದ್ದರೆ ಹಾಕಿದ ಬಂಡವಾಳ(Investment) ಮರಳುವುದಿಲ್ಲ. ಹೀಗಾಗಿ ಮುಖ್ಯ ರಸ್ತೆ ಬದಿ, ಸರ್ಕಾರಿ ಕಚೇರಿಗಳ ಅಕ್ಕಪಕ್ಕದಲ್ಲಿನ ತಾತ್ಕಾಲಿಕ ಸಣ್ಣ ಹೋಟಲ್‌ಗಳ ಸಂಖ್ಯೆ ಕ್ಷೀಣಿಸಿದೆ ಎಂದು ರಂಗಸ್ವಾಮಿ ತಿಳಿಸಿದರು.
 

click me!