ಏರೋ ಇಂಡಿಯಾ: ಅನಾಹುತ ತಡೆಗೆ ಕಾರ್ಯತಂತ್ರ

By Kannadaprabha News  |  First Published Feb 1, 2021, 7:08 AM IST

14 ದೇಶದ 78, ಭಾರತೀಯ ಮೂಲದ 523 ಪ್ರದರ್ಶಕರು ಭಾಗಿ| 45 ಚದರ ಕಿ.ಮೀ. ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ| ಅಕಸ್ಮಾತ್‌ ಸಂಭವಿಸಿದರೆ ಹಾನಿ ತಪ್ಪಿಸಲು ಕ್ರಮ| ಜಿಐಎಸ್‌ ನಕ್ಷೆ ಸಿದ್ಧಪಡಿಸಿದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ|


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಫೆ.01):  ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುವ ಆವರಣ ಮಾತ್ರವಲ್ಲ, ಅದರ ಸುತ್ತಲಿನ 45 ಚದರ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸದಂತೆ, ಅಕಸ್ಮಾತ್‌ ಸಂಭವಿಸಿದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಂಭವನೀಯ ಹಾನಿ ತಪ್ಪಿಸಲು ರಾಜ್ಯ ಸರ್ಕಾರ ಕಾರ್ಯತಂತ್ರ ರೂಪಿಸಿದೆ.

Latest Videos

undefined

ವೈಮಾನಿಕ ಪ್ರದರ್ಶನದ ವಾಯುನೆಲೆ, ಪ್ರದರ್ಶನ ಕೇಂದ್ರ ಮಾತ್ರವಲ್ಲ, ಅದರ ಸುತ್ತ-ಮುತ್ತಲಿನ 45 ಚದರ ಕಿ.ಮೀ ವ್ಯಾಪ್ತಿಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ನಕ್ಷೆ ಸಿದ್ಧಪಡಿಸಲಾಗಿದೆ. ಅಕಸ್ಮಾತ್‌ ಅನಾಹುತ ಸಂಭವಿಸಿದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಘಟನಾ ಸ್ಥಳ ತಲುಪಿ ಹಾನಿ ಪ್ರಮಾಣ ಕಡಿಮೆ ಮಾಡಲು 45 ಚ.ಕಿ.ಮೀ ವ್ಯಾಪ್ತಿಯನ್ನು ಗ್ರಿಡ್‌, ಸಬ್‌ ಗ್ರಿಡ್‌ ಹಾಗೂ ಮೈಕ್ರೋಗ್ರಿಡ್‌ಗಳಾಗಿ ವಿಂಗಡಿಸಲಾಗಿದೆ.

ಪ್ರತಿ ಗ್ರಿಡ್‌ 5 ಚ.ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ನಂತರ ಗ್ರಿಡ್‌ಗಳನ್ನು 1 ಚ.ಕಿ.ಮೀ ಸಬ್‌ ಗ್ರಿಡ್‌ಗಳಾಗಿ ವಿಭಜಿಸಲಾಗಿದೆ. ಸಬ್‌ ಗ್ರಿಡ್‌ಗಳನ್ನು ತಲಾ 100 ಚ.ಮೀ ಮೈಕ್ರೋಗ್ರಿಡ್‌ಗಳಾಗಿ ಬೇರ್ಪಡಿಸಲಾಗಿದೆ. ಪ್ರತಿ ಗ್ರಿಡ್‌ಗಳಿಗೆ 1, 2, 3 ಸಂಖ್ಯೆ ನೀಡಲಾಗಿದೆ. ಸಬ್‌ ಗ್ರಿಡ್‌ಗಳಿಗೆ ಎ, ಬಿ, ಸಿ ಎಂದು, ಮೈಕ್ರೋಗ್ರಿಡ್‌ಗಳಿಗೆ 0, 1, 2, 3 ಸಂಖ್ಯೆ ನೀಡಲಾಗಿದೆ. ಇದರಿಂದ ಪ್ರತಿ ಒಂದು ಸ್ಥಳದ ಮಾಹಿತಿ ಲಭ್ಯವಾಗಲಿದ್ದು, ನಿಗಾ ವಹಿಸುವುದಕ್ಕೆ ಸಹಕಾರಿ ಆಗಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಏರೋ ಇಂಡಿಯಾ ಶೋ ಬೆಂಗಳೂರು: ಫೆ.1 ರಿಂದ ಆಗಸದಲ್ಲಿ ವೈಮಾನಿಕ ಹಾರಾಟಕ್ಕೆ ನಿಷೇಧ!

ವೈಮಾನಿಕ ಪ್ರದರ್ಶನದ ವ್ಯಾಪ್ತಿಯ ಒಳಾಂಗಣದ ವಿಪತ್ತು ನಿರ್ವಹಣೆಗೆ ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿ ಹಾಗೂ ಹೊರಾಂಗಣ ವಿಪತ್ತು ನಿರ್ವಹಣೆಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯನ್ನು ಕಮಾಂಡಿಂಗ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಜತೆಗೆ ಸಂಚಾರಿ ಪೊಲೀಸ್‌, ಬಿಬಿಎಂಪಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಅಗ್ನಿ ಶಾಮಕ ದಳ, ಪೊಲೀಸ್‌ ಹಾಗೂ ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಹಾಯಕ ಕಮಾಂಡಿಂಗ್‌ ಅಧಿಕಾರಿಗಳನ್ನಾಗಿ ನೇಮಸಲಾಗಿದೆ. ಅಲ್ಲದೇ ಜಲಮಂಡಳಿ, ಲೋಕೋಪಯೋಗಿ (ಪಿಡ್ಲ್ಯೂಡಿ), ಬೆಸ್ಕಾಂ, ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಿ ತರಬೇತಿಯನ್ನೂ ನೀಡಲಾಗಿದೆ.
ಅನಾಹುತಗಳ ಬಗ್ಗೆ ನಿಗಾ ವಹಿಸುವುದಕ್ಕೆ ಹಾಗೂ ತಕ್ಷಣ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವುದಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಇಂಟಿಗ್ರೇಟೆಡ್‌ ಕಮಾಂಡಿಂಗ್‌ ಆ್ಯಂಡ್‌ ಕಂಟ್ರೋಲ್‌ ಕೊಠಡಿಯನ್ನೂ ರೂಪಿಸಲಾಗಿದೆ. ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ.

ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ದಿನಗಣನೆ ಆರಂಭಗೊಂಡಿದೆ. ಕಳೆದ ಬಾರಿ ವೈಮಾನಿಕ ಪ್ರದರ್ಶದ ತಾಲೀಮು ವೇಳೆ ಸೂರ್ಯ ಕಿರಣ್‌ ವಿಮಾನ ದುರಂತ ಹಾಗೂ ವಾಹನ ನಿಲುಗಡೆ ಸ್ಥಳದಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಾರಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಏರೋ ಇಂಡಿಯಾ ಅತ್ಯಂತ ದೊಡ್ಡ ಕಾರ್ಯಕ್ರಮವಾಗಿದೆ. ಯುದ್ಧ ಸಾಮಗ್ರಿಗಳ ಪ್ರದರ್ಶನ ನಡೆಯಲಿದೆ. ಇನ್ನು ವಿಮಾನಗಳ ಹಾರಾಟ ಕೇವಲ ವಾಯುನೆಲೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸುತ್ತಮುತ್ತಲಿನ ಪ್ರದೇಶದ ಬಗ್ಗೆಯೂ ಜಾಗೃತಿ ವಹಿಸಬೇಕಾದ ಅವಶ್ಯಕತೆ ಇದ್ದು, ಪ್ರಥಮ ಬಾರಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಾಯುನೆಲೆ ಸೇರಿದಂತೆ ಸುತ್ತಮುತ್ತಲಿನ 45 ಚ.ಕಿ.ಮೀ. ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ರಾಜನ್‌ ತಿಳಿಸಿದ್ದಾರೆ. 

ಏರ್‌ ಶೋ ಹಿನ್ನೆಲೆ: ವಿಮಾನಗಳ ಹಾರಾಟ ಸಮಯದಲ್ಲಿ ವ್ಯತ್ಯಯ

ಕೇಂದ್ರಕ್ಕೆ ಪ್ರಸ್ತಾವನೆ

ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಏರೋ ಇಂಡಿಯಾಕ್ಕಾಗಿ ರೂಪಿಸಲಾದ ಕಾರ್ಯತಂತ್ರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಈ ಕಾರ್ಯತಂತ್ರವನ್ನು ದೇಶದಲ್ಲಿ ದೊಡ್ಡ ಸಭೆ, ಸಮಾರಂಭ, ಮೇಳಗಳು ನಡೆಯುವಾಗ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಅನಾಹುತ ತಪ್ಪಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.

ಏರೋ ಇಂಡಿಯಾದಲ್ಲಿ 600ಕ್ಕೂ ಅಧಿಕ ಪ್ರದರ್ಶಕರು

ಯಲಹಂಕದ ವಾಯುನೆಲೆಯಲ್ಲಿ ಫೆ.3ರಿಂದ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶಕ್ಕೆ ದಿನಗಣನೆ ಆರಂಭಗೊಂಡಿದ್ದು, ಕೋವಿಡ್‌ ಸೋಂಕಿನ ಆತಂಕದ ನಡುವೆಯೂ ಬರೋಬ್ಬರಿ 600ಕ್ಕೂ ಅಧಿಕ ಪ್ರದರ್ಶಕರು ಭಾಗವಹಿಸಲಿದ್ದಾರೆ.

13ನೇ ಏರೋ ಇಂಡಿಯಾ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಫೆ.3ರಿಂದ 5 ವರೆಗೆ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ನಡೆಯಲಿದ್ದು, ದೇಶ-ವಿದೇಶದ ಲೋಹದ ಹಕ್ಕಿ ಹಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ಬಾರಿ ಕೋವಿಡ್‌ ಸೋಂಕಿತ ಭೀತಿಯ ನಡುವೆಯೂ ಭಾರೀ ಸಂಖ್ಯೆಯ ಪ್ರದರ್ಶಕರು-ಉದ್ಯಮಿಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದಕ್ಕೆ ಮುಂದಾಗಿದ್ದಾರೆ.

ಒಟ್ಟು 14 ದೇಶದ 78 ಪ್ರದರ್ಶಕರು, ಭಾರತೀಯ ಮೂಲದ 523 ಪ್ರದರ್ಶಕರು ಭಾಗಹಿಸಲಿದ್ದು, ಈವರೆಗೆ ಒಟ್ಟಾರೆ 601 ಪ್ರದರ್ಶಕರು ನೋಂದಣೆ ಮಾಡಿಕೊಂಡಿದ್ದಾರೆ. ಈ ಪೈಕಿ 220 ಕಂಪನಿಗಳು ವರ್ಚುಯಲ್‌ ಪ್ರದರ್ಶನ ಮಾಡಲಿವೆ ಎಂದು ಏರೋ ಇಂಡಿಯಾ ಆಯೋಜಕರು ಮಾಹಿತಿ ನೀಡಿದ್ದಾರೆ.

ಕಳೆದ 2019ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತೀಯ ಮೂಲದ 238 ಪ್ರದರ್ಶಕರು, 165 ವಿದೇಶಿ ಪ್ರದರ್ಶಕರು ಸೇರಿದಂತೆ ಒಟ್ಟು 403 ಪ್ರದರ್ಶಕರು ಭಾಗಹಿಸಿದ್ದರು. ಕಳೆದ ಬಾರಿ 22 ದೇಶಗಳು ಏರೋ ಇಂಡಿಯಾದಲ್ಲಿ ಭಾಗಹಿಸಿದ್ದವು. ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಕೇವಲ 14 ರಾಷ್ಟ್ರಗಳು ಭಾಗಹಿಸುತ್ತಿವೆ.
 

click me!