ಕ್ಷುಲ್ಲಕ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಿಕುರ್ವಾ ಗ್ರಾಮದಲ್ಲಿ 2 ಕುಟುಂಬಗಳು ಸಮುದಾಯದವರಿಂದಲೇ ಬಹಿಷ್ಕಾರದ ಶಿಕ್ಷೆ ಅನುಭವಿಸುವಂತಾಗಿದೆ.
ಉತ್ತರ ಕನ್ನಡ (ಆ.03): ಕ್ಷುಲ್ಲಕ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಿಕುರ್ವಾ ಗ್ರಾಮದಲ್ಲಿ 2 ಕುಟುಂಬಗಳು ಸಮುದಾಯದವರಿಂದಲೇ ಬಹಿಷ್ಕಾರದ ಶಿಕ್ಷೆ ಅನುಭವಿಸುವಂತಾಗಿದೆ. ಗ್ರಾಮದ ನಿವಾಸಿಗಳಾದ ಲಕ್ಷ್ಮೀ ಬೋಳಾ ಅಂಬಿಗ ಮತ್ತು ಆಶಾ ಗಂಗಾಧರ ಅಂಬಿಗ ಅವರ 2 ಕುಟುಂಬ 2017 ರಿಂದ ಈವರೆಗೆ ಬಹಿಷ್ಕಾರಕ್ಕೊಳಗಾಗಿವೆ. ಅಂಬಿಗ ಸಮಾಜದವರು ಗ್ರಾಮದ ಗಂಗೆ ದೇವರಿಗೆ ವಂತಿಗೆ (ದೇಣಿಗೆ) ಸಂಗ್ರಹಿಸಿ ಅದನ್ನು ಬಳಿಕ ಅಗತ್ಯವಿದ್ದವರಿಗೆ ಬಡ್ಡಿಗೆ ನೀಡುತ್ತಿದ್ದರು. ಅದರಂತೆ ಧರ್ಮ ಬೋಳ ಅಂಬಿಗ ಎಂಬವರಿಗೆ 2017ರಲ್ಲಿ 14 ಸಾವಿರ ರೂ. ಸಾಲವಾಗಿ ನೀಡಲಾಗಿತ್ತು.
ಬಡ್ಡಿ ಸೇರಿ ಈತ 18,200 ರೂ. ತುಂಬಬೇಕಿತ್ತು. ಆದರೆ, ಅಂಗವಿಕಲನಾಗಿದ್ದರಿಂದ ಸೂಚಿಸಿದ ಸಮಯಕ್ಕೆ ಹಣ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಎರಡು ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಲಾಗಿತ್ತು. ಘಟನೆಯ ಬಳಿಕ ಒಂದು ವರ್ಷದಲ್ಲಿ ಬಡ್ಡಿ ಸೇರಿ ಹಣವನ್ನು ಮರುಪಾವತಿ ಮಾಡಿದರೂ ಬಹಿಷ್ಕಾರ ಮಾತ್ರ ಈವರೆಗೂ ಮುಂದುವರಿದಿದೆ. ಸಮಾಜದವರು ನಮ್ಮೊಂದಿಗೆ ಯಾವುದೇ ರೀತಿ ವ್ಯವಹಾರ ನಡೆಸದಂತೆ ಕಟ್ಟಾಜ್ಞೆ ಮಾಡಿದ್ದಾಗಿ ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ಯಾರಂಟಿಗಳ ಅನುಷ್ಠಾನ ತರುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಎಂ.ಪಿ.ರೇಣುಕಾಚಾರ್ಯ
ಅಂದಹಾಗೆ, ಕರಿಕುರ್ವಾ ಗ್ರಾಮದಲ್ಲಿ ಅಂಬಿಗ ಸಮಾಜದ 34 ಮನೆಗಳಿದ್ದು, ಆ ಕುಟುಂಬದ ಯಾರೂ ಬಹಿಷ್ಕಾರಕ್ಕೊಳಗಾದ ಕುಟುಂಬದ ಜತೆ ಮಾತನಾಡದಂತೆ ಸಮಾಜದ ಮುಖಂಡ ಧರ್ಮ ರಾಮ ಅಂಬಿಗ ಎಂಬವರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಳೆದ 6 ವರ್ಷಗಳಿಂದ ಈ 2 ಕುಟುಂಬಗಳು ಬಹಿಷ್ಕಾರದ ಶಿಕ್ಷೆ ಎದುರಿಸುತ್ತಿವೆ. ಗ್ರಾಮದಲ್ಲಿನ ಅನ್ಯಾಯದ ಬಗ್ಗೆ ಸಮಾಜದ 18 ಹಳ್ಳಿಯ ಮುಖಂಡರಿಗೆ ದೂರು ನೀಡಿದ್ದಕ್ಕೆ ಸಿಟ್ಟಿಗೆದ್ದ ಊರಿನ ಮುಖಂಡರು ಎರಡೂ ಕುಟುಂಬವನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡಿದ್ದಾರೆ ಎಂದೆನ್ನಲಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ಹೆಚ್ಚಳ: ಸಚಿವ ಚಲುವರಾಯಸ್ವಾಮಿ
ಕಳೆದ ಜುಲೈನಲ್ಲಿ ಲಕ್ಷ್ಮೀ ಅವರ ಪುತ್ರ ಮಂಜುನಾಥ ಎಂಬವರ ಮದುವೆಗೆ ಹುಡುಗಿ ನೋಡಿದ್ದರು. ಆದರೆ, ಹುಡುಗಿ ಕುಟುಂಬಕ್ಕೂ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿದ್ದಾಗಿ ತಿಳಿಸಿದ್ದು, ಇದರಿಂದ ನಿಗದಿಯಾಗಬೇಕಿದ್ದ ಮದುವೆ ನಿಶ್ಚಿತಾರ್ಥದ ಮೊದಲೇ ಮುರಿದು ಬೀಳುವಂತಾಗಿದೆ. ಹೀಗಾಗಿ ಈ ಕುಟುಂಬಕ್ಕಾಗಿರುವ ಅನ್ಯಾಯ ಬೇರೆ ಯಾರಿಗೂ ಆಗದಂತೆ ನ್ಯಾಯ ಕೊಡಿಸಲು ಈ ಎರಡು ಸಂತ್ರಸ್ತ ಕುಟುಂಬಗಳು ಮನವಿ ಮಾಡಿವೆ. ಇಂತಹ ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಈಗಲೂ ಜೀವಂತ ಇರುವುದು ದುರಂತವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಈ ಅನಿಷ್ಟ ಪದ್ಧತಿಗೆ ಮುಕ್ತಿ ನೀಡಬೇಕೆನ್ನುವುದು ಜನರ ಅಭಿಪ್ರಾಯ.