ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಗೆ ಬರುವ ತಟ್ಟೆಕೆರೆ ರಸ್ತೆಯ ಹುರುಗನ ದೊಡ್ಡಿ ಹತ್ತಿರ ಸುಮಾರು 8 ವರ್ಷದ ಕಾಡಾನೆಯೊಂದು ರಸ್ತೆ ಬದಿಯಲ್ಲಿ ನರಳಾಡಿ ಪ್ರಾಣಬಿಟ್ಟ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ (ಅ.30): ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಗೆ ಬರುವ ತಟ್ಟೆಕೆರೆ ರಸ್ತೆಯ ಹುರುಗನ ದೊಡ್ಡಿ ಹತ್ತಿರ ಸುಮಾರು 8 ವರ್ಷದ ಕಾಡಾನೆಯೊಂದು ರಸ್ತೆ ಬದಿಯಲ್ಲಿ ನರಳಾಡಿ ಪ್ರಾಣಬಿಟ್ಟ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ರಸ್ತೆ ದಾಟಲು ಬಂದಿದ್ದ ಕಾಡಾನೆ ಘೀಳಿಡುತ್ತಿರುವ ಆರ್ತನಾದ ಕಂಡು ಸ್ಥಳೀಯರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿರಬಹುದು ಎಂಬ ಶಂಕೆಯಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕಾಡಾನೆ ಎರಡು ಗಂಟೆಗೂ ಹೆಚ್ಚು ಕಾಲ ನರಳಾಡಿ ಪ್ರಾಣ ಬಿಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬನ್ನೇರುಘಟ್ಟ ಜೈವಿಕ ಉದ್ಯಾನದ ಡಾ। ಕಿರಣ್ ನೇತೃತ್ವದ ವೈದ್ಯರ ತಂಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಹಜರು ಮಾಡಿ ಜೆಸಿಬಿ ಬಳಿಸಿ ಟ್ರಾಕ್ಟರ್‌ನಲ್ಲಿ ಅರಣ್ಯದ ಮಧ್ಯ ಭಾಗಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದರು. ಆನೆಯು ವೈರಲ್ ಸೊಂಕು ತಗುಲಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಲ್ಲಿ ತಿಳಿಸಿದರು. ಹೆಚ್ಚಿನ ಪರೀಕ್ಷೆಗಾಗಿ ಕಾಡಾನೆಯ ಅಂಗಾಂಗಳನ್ನು ಹೆಬ್ಬಾಳದ ಪಶುಪಾಲನಾ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಆನೆ ಸಾವಿಗೆ ಹಲವು ಅನುಮಾನ ವ್ಯಕ್ತವಾಗಿತ್ತಾದರೂ ಕೊನೆಗೆ ವೈದ್ಯಕೀಯ ಪ್ರಾಥಮಿಕ ಮಾಹಿತಿಯಿಂದ ಹೊಟ್ಟೆಯಲ್ಲಿ ಸೊಂಕು ಕಾಣಿಸಿಕೊಂಡಿದ್ದು, ಗುಂಪಾನೆಗಳಿಂದ ಬೇರ್ಪಟ್ಟು ಒಂಟಿಯಾಗಿ ಸಂಚರಿಸುವ ವೇಳೆಯಲ್ಲಿ ನಿತ್ರಾಣಗೊಂಡು ಹೃದಾಯಾಘಾತವಾಗಿ ಉರುಳಿ ಬಿದ್ದಿದೆ ಎಂದು ಬನ್ನೇರುಘಟ್ಟ ರಾಷ್ಟಿಯ ಉದ್ಯಾನವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ವಿರಕ್ತಮಠದ ಆಸ್ತಿ ದಾಖಲೆಯಲ್ಲೂ ‘ವಕ್ಫ್’ ಹೆಸರು: ಸಂಸದ ಗೋವಿಂದ ಕಾರಜೋಳ ಹೇಳಿದ್ದೇನು?
ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್, ವೈಧ್ಯಾಧಿಕಾರಿ ಕಿರಣ್, ಡಾ। ಮಂಜುನಾಥ್, ಡಾ। ಆನಂದ್, ಡಾ। ಪಾಹೀರ್, ಡಾ। ರುದ್ರೇಶ್ ತಂಡ ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಕಾಡಿನ ಮಧ್ಯೆ ಭಾಗದಲ್ಲಿ ಆನೆಯನ್ನು ಮಣ್ಣು ಮಾಡಲಾಗುವುದು ಎಂದು ತಿಳಿಸಿದರು.