
ಬೆಳಗಾವಿ/ವಿಜಯಪುರ(ಆ.12): ರಾಜ್ಯಾದ್ಯಂತ ಮಳೆಯಬ್ಬರ ಕ್ಷೀಣಿಸಿದ್ದರೂ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದು ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಡ್ಯಾಂಗಳಿಂದ ಭಾರೀ ಪ್ರಮಾಣದ ನೀರು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿ ತೀರದಲ್ಲಿ ಮೂರ್ನಾಲ್ಕು ದಿನಗಳಿಂದ ಆವರಿಸಿಕೊಂಡಿರುವ ಪ್ರವಾಹದ ಆತಂಕ ಇನ್ನೂ ತಗ್ಗಿಲ್ಲ. ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರೋ ಹಿನ್ನೆಲೆಯಲ್ಲಿ ಬೆಳಗಾವಿಯ 20 ಸೇತುವೆಗಳು, ಹಂಪಿ, ಕೊಪ್ಪಳದ ಪ್ರಮುಖ ಐತಿಹಾಸಿಕ ಸ್ಥಳಗಳು ಇನ್ನೂ ಜಲಾವೃತ ಸ್ಥಿತಿಯಲ್ಲಿವೆ.
ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೊಯ್ನಾ, ರಾಜಾಪೂರ, ಕಾಳಮ್ಮನವಾಡಿ ಸೇರಿ ಬಹುತೇಕ ಅಣೆಕಟ್ಟೆಗಳಿಂದ 1.50 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಕೃಷ್ಣಾ ನದಿ ಸೇರುತ್ತಿದೆ. ಅಲ್ಲದೆ, ದೂಧ್‌ಗಂಗಾ, ವೇದಗಂಗಾ, ಹಿರಣ್ಯಕೇಶಿ, ಮಲಪ್ರಭಾ, ಘಟಪ್ರಭಾ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದೆ. ಆಲಮಟ್ಟಿಯಿಂದ 2 ಲಕ್ಷ ಕ್ಯುಸೆಕ್, ಯಾದಗಿರಿಯ ನಾರಾಯಣಪುರ ಡ್ಯಾಂನಿಂದ 2.16 ಲಕ್ಷ ಕ್ಯುಸೆಕ್, ತುಂಗಭದ್ರಾ ಡ್ಯಾಮ್‌ನಿಂದ 1.75 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಕೃಷ್ಣಾ ತೀರದ ನಾನಾ ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಒಂದು ವೇಳೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದರೆ ಜಮಖಂಡಿ, ಚಿಕ್ಕೋಡಿ, ಅಥಣಿ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಇಂದಿನಿಂದ ತಗ್ಗಲಿದೆ ಮಳೆ ಅಬ್ಬರ: ಹವಾಮಾನ ಇಲಾಖೆ
ಕೊಡಗಿನ ಅಮ್ಮತ್ತಿ-ಹೊಸಕೋಟೆ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮರಬಿದ್ದು ಕೃಷಿಕ ಪ್ರಕಾಶ್ (52) ಎಂಬುವರು ಮೃತಮೃತಪಟ್ಟಿದ್ದಾರೆ.
2 ಲಕ್ಷ ಕ್ಯುಸೆಕ್ ನೀರು, ಜಮೀನಿಗೆ ನುಗ್ಗಿದ ನೀರು
ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ಬುಧವಾರ ರಾತ್ರಿಯಿಂದ 2 ಲಕ್ಷ ಕ್ಯುಸೆಕ್ ನೀರು ಹರಿಸಿದ್ದರಿಂದ ಕೃಷ್ಣಾ ತೀರದ ನಾನಾ ಗ್ರಾಮಗಳ ಜಮೀನಿಗೆ ಅಲ್ಪ ಪ್ರಮಾಣದಲ್ಲಿ ನೀರು ನುಗ್ಗಿದೆ. ಬುಧವಾರ ರಾತ್ರಿ ಹೊರಹರಿವಿನ ಪ್ರಮಾಣ 2 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಿದ್ದರಿಂದ ನೀರು ನುಗ್ಗಿ, ಬೆಳಗ್ಗೆ ವೇಳೆಗೆ ಇಳಿಮುಖವಾಗಿದೆ. ನಾರಾಯಣಪುರ ಜಲಾಶಯದಿಂದಲೂ 2.20 ಲಕ್ಷ ಕ್ಯುಸೆಕ್ ನೀರು ಬಿಟ್ಟಕಾರಣ ಜಮೀನಿಗೆ ನುಗ್ಗಿದ್ದ ನೀರು ಗುರುವಾರ ಬೆಳಿಗ್ಗೆ ಕಡಿಮೆಯಾಗಿದೆ. ಹೆಚ್ಚಿನ ಬೆಳೆ ಹಾನಿ ಸಂಭವಿಸಿಲ್ಲ.
ಯಲಗೂರದ ಪ್ರಹ್ಲಾದಾಚಾರ‍್ಯ ಗದ್ದನಕೇರಿ, ಗೋಪಾಲ ಗದ್ದನಕೇರಿ, ಬಿಂದಾಚಾರ‍್ಯ ವೈ. ಹಿಪ್ಪರಗಿ, ಸಂಜೀವ ಪೂಜಾರಿ ಅವರ ತೋಟದಲ್ಲಿ ನೀರು ನುಗ್ಗಿದೆ. ಅಲ್ಲಿ ಕಬ್ಬು, ಸೂರ‍್ಯಕಾಂತಿ ಬೆಳೆ ಹಾಗೂ ಕಬ್ಬು ಬೆಳೆ ಜಲಾಮೃತಗೊಂಡಿದೆ. ಇನ್ನೂ ಅರಳದಿನ್ನಿಯ ಯಲಗೂರದಪ್ಪ ಕೊಳ್ಳಾರ ಹಾಗೂ ಯಲಗೂರದಪ್ಪ ತುಬಾಕೆ ಅವರ ತೋಟದ ಕಬ್ಬಿನ ಬೆಳೆಗೂ ನೀರು ನುಗ್ಗಿದ್ದು, ನಂತರ ಕಡಿಮೆಯಾಗಿದೆ ಎಂದು ರೈತರು ತಿಳಿಸಿದರು.
ಮಳೆಯಿಂದ ಕೆರೆ ಕಟ್ಟೆ, ಕಿಂಡಿ ಅಣೆಕಟ್ಟೆಗೆ ಹಾನಿಯಾಗಿಲ್ಲ: ಮಾಧುಸ್ವಾಮಿ
ಒಟ್ಟಾರೇ ಪ್ರಾಥಮಿಕ ಮಾಹಿತಿಯ ಪ್ರಕಾರ ಅಂದಾಜು 10 ಎಕರೆಯಷ್ಟುಜಮೀನು ಜಲಾವೃತಗೊಂಡಿದೆ. ತಹಸೀಲ್ದಾರ್ ಅನಿಲಕುಮಾರ ಡವಳಗಿ ನೇತೃತ್ವದಲ್ಲಿ ಕಂದಾಯ, ಕೃಷಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಕೆಯ ಅಧಿಕಾರಿಗಳೊಂದಿಗೆ ಕೃಷ್ಣಾ ತೀರದ ಗ್ರಾಮಗಳಾದ ಯಲಗೂರ, ಯಲ್ಲಮ್ಮನ ಬೂದಿಹಾಳ, ಕಾಶೀನಕುಂಟಿ, ಮಸೂತಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಇವತ್ತಿನ ಸ್ಥಿತಿ ಅವಲೋಕನ ನಡೆಸಿದರು. ರೈತರೊಂದಿಗೆ ಎಚ್ಚರಿಕೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳುಹಿಸಿ ಜಲಾವೃತಗೊಂಡ ಜಮೀನುಗಳ ಸಮೀಕ್ಷೆ ನಡೆಸಲಾಗುವುದು ಎಂದು ತಹಸೀಲ್ದಾರ್ ಡವಳಗಿ ತಿಳಿಸಿದರು. ಅವರ ಜತೆ ಜಿಲ್ಲಾ ಪ್ರವಾಹ ನೋಡಲ್ ಅಧಿಕಾರಿ ಚವ್ಹಾಣ ಹಾಗೂ ನಾನಾ ಅಧಿಕಾರಿಗಳು ಇದ್ದರು. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪ್ರವಾಹದ ಆತಂಕ ಕಡಿಮೆಗೊಂಡಿದೆ.