ಕಸವನ್ನು ಸಂಸ್ಕರಿಸಿ ಆದಾಯ ಗಳಿಸುತ್ತಿದೆ ಬನಶಂಕರಿಯ ಈ ಅಪಾರ್ಟ್‌ಮೆಂಟ್!

By Kannadaprabha NewsFirst Published Feb 18, 2020, 12:36 PM IST
Highlights

ಬೆಂಗಳೂರಿನಲ್ಲಿರುವ ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಪ್ರತಿ ತಿಂಗಳು ಲಕ್ಷಾಂತರ ವೆಚ್ಚ ಮಾಡುತ್ತಿವೆ. ಆದರೆ, ಇಲ್ಲೊಂದು ಅಪಾರ್ಟ್‌ಮೆಂಟ್‌ ಅದಕ್ಕೆ ತದ್ವಿರುದ್ಧವಾಗಿ ಉತ್ಪತ್ತಿಯಾಗುವ ಕಸವನ್ನು ನೈಸರ್ಗಿಕವಾಗಿ ಸಂಸ್ಕರಿಸಿ ಆದಾಯ ಗಳಿಸುತ್ತಿದೆ.

ಹೌದು, ಬನಶಂಕರಿ 3ನೇ ಹಂತದ ರಿಂಗ್‌ ರಸ್ತೆಯಲ್ಲಿರುವ ಸ್ಟೆರ್ಲಿಂಗ್‌ ಟೆರೇಸಸ್‌ ಅಪಾರ್ಟ್‌ಮೆಂಟ್‌ ನಗರ ಇತರೆ ಅಪಾರ್ಟ್‌ಮೆಂಟ್‌ಗಳ ರೀತಿ ಪ್ರತಿ ತಿಂಗಳು 13 ರಿಂದ 15 ಸಾವಿರ ರು. ಕಸ ವಿಲೇವಾರಿಗೆ ಖರ್ಚು ಮಾಡುತ್ತಿತ್ತು. ಅಷ್ಟೊಂದು ಹಣ ವೆಚ್ಚ ಮಾಡಿದರೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರವಾಗಿರಲಿಲ್ಲ. ಅನೇಕ ಪ್ರಯೋಗ ಮಾಡಿ ಸೋತ್ತಿತ್ತು. ಕೊನೆಗೆ ಬಿಬಿಎಂಪಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಒರ್ಬಿನ್‌ ಟ್ಯಾಕ್ಸ್‌ ಕಂಪನಿಯ ಸಾವಯವ ಗೊಬ್ಬರ ತಯಾರಿಸುವ ಘಟಕವನ್ನು ಅಳವಡಿಸಿಕೊಂಡು ಕಸದ ಸಮಸ್ಯೆಪರಿಹಾರ ಮಾಡಿಕೊಳ್ಳುವುದರೊಂದಿಗೆ ಕಸದಿಂದ ಆದಾಯ ಗಳಿಸುತ್ತಿದೆ.

ಕಳೆದ ಎರಡು ತಿಂಗಳಿನಿಂದ ಅಪಾರ್ಟ್‌ಮೆಂಟ್‌ನ ತ್ಯಾಜ್ಯವನ್ನು ಆವರಣದಲ್ಲಿಯೇ ಯಶಸ್ವಿಯಾಗಿ ಸಂಸ್ಕರಿಸಲಾಗುತ್ತಿದೆ. ಸರಳ ವಿಧಾನವಾಗಿರುವುದರಿಂದ ನಗರದ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಅವಳವಡಿಸಿಕೊಳ್ಳಬಹುದಾಗಿದೆ.- ಡಾ. ಉಮಾದೇವಿ, ಉಪಾಧ್ಯಕ್ಷೆ, ಸ್ಟೆರ್ಲಿಂಗ್‌ ಟೆರೇಸಸ್‌ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘ

ಅಪಾರ್ಟ್‌ಮೆಂಟ್‌ನಲ್ಲಿರುವ 288 ಮನೆಗಳಿಂದ ಪ್ರತಿ ದಿನ ಉತ್ಪತ್ತಿಯಾಗುವ 160 ರಿಂದ 180 ಕೆ.ಜಿ. ಹಸಿ ಕಸವನ್ನು ಆವರಣದಲ್ಲಿಯೇ ವಿದ್ಯುತ್‌ ಸೇರಿದಂತೆ ಯಾವುದೇ ಇಂಧನ ಬಳಕೆ ಮಾಡದೇ ನೈಸರ್ಗಿಕವಾಗಿ ಸಂಸ್ಕರಿಸಿ ಗೊಬ್ಬರ ತಯಾರಿಸಿ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ 10 ರು. ಕೆ.ಜಿಯಂತೆ ಮಾರಾಟ ಮಾಡಲಾಗುತ್ತಿದೆ. ಜತೆಗೆ ಅಪಾರ್ಟ್‌ಮೆಂಟ್‌ ಆವರಣದಲ್ಲಿರುವ ಸುಮಾರು ಆರು ಎಕರೆಯ ಉದ್ಯಾನವನಕ್ಕೂ ಇದೇ ಸಾವಯವ ಗೊಬ್ಬರ ಬಳಕೆ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಪ್ರತಿ ತಿಂಗಳು ವೆಚ್ಚ ಮಾಡುತ್ತಿದ್ದ ಹಣ ಉಳಿಯವಾಗಿದೆ. ಕಸ ಸಂಸ್ಕರಿಸುವುದರಿಂದ ಸುಮಾರು 8 ರಿಂದ 10 ಸಾವಿರ ರು ಆದಾಯವೂ ಬರುತ್ತಿದೆ.

ಬೆಂಗಳೂರಲ್ಲಿನ್ನು ನೆದರ್‌ಲ್ಯಾಂಡ್‌ ಮಾದರಿಯಲ್ಲಿ ಕಸ ವಿಲೇವಾರಿ

ಅಪಾರ್ಟ್‌ಮೆಂಟ್‌ನಲ್ಲಿ 40 ಕೆ.ಜಿ (ದಿನಕ್ಕೆ) ಸಾಮರ್ಥ್ಯದ ನಾಲ್ಕು ಸಾವಯವ ಗೊಬ್ಬರ ತಯಾರಿಸುವ ಘಟಕ ಅಳವಡಿಸಲಾಗಿದೆ. ಅತ್ಯಂತ ಸರಳ ಮಾದರಿಯಲ್ಲಿ ಕಸ ವಿಲೇವಾರಿ ಮಾಡಬಹುದಾಗಿದೆ. ಘಟಕಕ್ಕೆ ವಿದ್ಯುತ್‌ ಬಳಕೆ ಮಾಡುವುದಿಲ್ಲ. ನೈಸರ್ಗಿಕವಾಗಿ ಕಸವನ್ನು ಸಂಸ್ಕರಿಸಲಾಗುತ್ತಿದೆ. ಹೌಸ್‌ ಕೀಪಿಂಗ್‌ ಸಿಬ್ಬಂದಿ ಎಲ್ಲ ಮನೆಗಳಿಂದ ವಿಂಗಡಿಸಿದ ಹಸಿ ಕಸ ಸಂಗ್ರಹಿಸಿ ಪ್ರತಿ ಘಟಕಕ್ಕೆ 40 ಕೆ.ಜಿಯಂತೆ ನಾಲ್ಕೂ ಘಟಕಕ್ಕೆ ಹಾಕುತ್ತಾರೆ. ಕಸದ ಮೇಲ್ಪದರ ಮುಚ್ಚುವಂತೆ ಕಿಣ್ವ ವೃದ್ಧಿಸುವ ಪುಡಿ ಹರಡುತ್ತಾರೆ. ಪ್ರತಿ ದಿನ ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. 30 ದಿನದ ನಂತರ ಕಸ ಗೊಬ್ಬರವಾಗಿ ತಯಾರಾಗಲಿದೆ. ಐದು ದಿನಕ್ಕೆ ಪ್ರತಿ ಘಟಕದಿಂದ 30 ರಿಂದ 35 ಕೆ.ಜಿ ಸಾವಯವ ಗೊಬ್ಬರ ತೆಗೆಯ ಬಹುದಾಗಿದೆ ಎಂದು ಡಾ. ಉಮಾದೇವಿ ಮಾಹಿತಿ ನೀಡಿದ್ದಾರೆ.

click me!