ತುಮಕೂರು ನಗರದಲ್ಲಿ ರಹದಾರಿ ಹೊಂದಿರುವ ಆಟೋರಿಕ್ಷಾಗಳನ್ನು ನಿಲುಗಡೆ ಮಾಡಲು ಅನುವಾಗುವಂತೆ ಆಟೋ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ತುಮಕೂರು :ತುಮಕೂರು ನಗರದಲ್ಲಿ ರಹದಾರಿ ಹೊಂದಿರುವ ಆಟೋರಿಕ್ಷಾಗಳನ್ನು ನಿಲುಗಡೆ ಮಾಡಲು ಅನುವಾಗುವಂತೆ ಆಟೋ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಶುಕ್ರವಾರ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು. ತುಮಕೂರು ನಗರದಲ್ಲಿರುವ ಆಟೋ ಸಂಖ್ಯೆಗಳಿಗನುಗುಣವಾಗಿ ನಿಲ್ದಾಣಗಳಿಲ್ಲದೆ ಹಾಗೂ ಆಟೋ ನಿಲುಗಡೆ ಮಾಡಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದೆ ಸಂಚಾರಿ ನಿಯಮ ಉಲ್ಲಂಘನೆಯಡಿ ಆಟೋ ಚಾಲಕರು ಪ್ರತಿ ದಿನ ದಂಡ ಕಟ್ಟುತ್ತಿದ್ದಾರೆ. ಇದರಿಂದ ಸಾಮಾನ್ಯ ಆಟೋ ಚಾಲಕರ ಕುಟುಂಬಗಳು ಬದುಕುವುದು ದುಸ್ತರವಾಗಿದೆ ಎಂದು ವಿವಿಧ ಆಟೋ ಚಾಲಕರ ಸಂಘಗಳು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆಟೋ ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದೆಂದರು.
ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸದಾಗಿ ಆಟೋರಿಕ್ಷಾ ರಹದಾರಿಗಳನ್ನು ನಿಲ್ಲಿಸಲು ಆಟೋ ಚಾಲಕರ ಸಂಘ ಸಲ್ಲಿಸಿದ ಮನವಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಆಟೋರಿಕ್ಷಾ ಸಂಖ್ಯೆಯ ಸಮೀಕ್ಷೆಗೆ ಕ್ರಮವಹಿಸಲಾಗುವುದು. ಹೊಸದಾಗಿ ಆಟೋರಿಕ್ಷಾಗಳಿಗೆ ನೀಡುವ ರಹದಾರಿಗಳನ್ನು ನಿಲ್ಲಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಜೂನ್ ಮಾಹೆಯೊಳಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ 15 ವರ್ಷ ಮುಕ್ತಾಯಗೊಂಡ ಆಟೋಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ, ಶಿರಾ ತಾಲೂಕು ವ್ಯಾಪ್ತಿಯ ಆಟೋರಿಕ್ಷಾ ರಹದಾರಿ ನವೀಕರಣ ಮಾಡಲು ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿಯೇ ವ್ಯವಸ್ಥೆ ಒದಗಿಸುವ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಪ್ರಾಧಿಕಾರದ ಸಭೆಯ ಮುಂದಿಟ್ಟರು.
ಇದಕ್ಕೂ ಮುನ್ನ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಖಾಸಗಿ ಬಸ್ ಮಾಲೀಕರ ಸಂಘಗಳ ಪದಾಧಿಕಾರಿಗಳಿಂದ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕೆಎಸ್‌ಆರ್‌ಟಿಸಿ ನಿಗಮವು ವಿವಿಧ ಖಾಸಗಿ ಬಸ್‌ಗಳಿಗೆ ಮಾದರಿಯಾಗಿ ಸೇವೆ ಒದಗಿಸಬೇಕು. ನಿಗಮ ಹಾಗೂ ಖಾಸಗಿ ಬಸ್ ಮಾಲೀಕರು ನಷ್ಟಹೊಂದದಂತೆ ವೇಳಾಪಟ್ಟಿನಿಗದಿಪಡಿಸಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿದರು.
2 ದಿನ ಮೀಟರ್ ಪ್ರಮಾಣಪತ್ರ:
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿಗಧಿತ 2 ದಿನಗಳಂದು ಆಟೋ ಚಾಲಕರಿಗೆ ಆಟೋರಿಕ್ಷಾ ಮೀಟರ್ ಸತ್ಯಾಪನೆ ಮತ್ತು ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕೆಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರವೀಶ್ ಅವರಿಗೆ ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ ಮಾತನಾಡಿ, ಆಟೋರಿಕ್ಷಾ ಮೀಟರ್ ಸತ್ಯಾಪನೆ ಮತ್ತು ಪ್ರಮಾಣ ಪತ್ರ ನೀಡುವ ಸ್ಥಳದಲ್ಲಿ ಆಟೋ ಚಾಲಕರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಸೂಚನೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ರಾಜು ಅವರು ಕಳೆದ 2022ರ ಆಗಸ್ಟ್ 5ರಂದು ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ನಡಾವಳಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಕೀಲರು, ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
‘ಬಸ್ ಸಂಚಾರದ ಸಮಯ ನಿಗದಿಪಡಿಸಿ’
ಹೆಚ್ಚು ಜನ ಪ್ರಯಾಣಿಸುವ ಸಮಯದಲ್ಲಿ ಸಾರಿಗೆ ಸೌಲಭ್ಯ ಒದಗಿಸಬೇಕು. ಬಸ್ ಸಂಚಾರದ ಸಮಯ ನಿಗದಿಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ 15 ದಿನಗಳೊಳಗಾಗಿ ತಮಗೆ ವರದಿ ಸಲ್ಲಿಸಿದ್ದಲ್ಲಿ ಪರಿಶೀಲಿಸಿ ಆದೇಶ ನೀಡಲಾಗುವುದು. ಪ್ರಸ್ತುತ ಶಿರಾ- ಚಿಕ್ಕನಾಯಕನಹಳ್ಳಿ, ತುಮಕೂರು-ಪಾವಗಡ ಸೇರಿದಂತೆ ಜಿಲ್ಲೆಯ 5 ಕಡೆ ನಿಗಮ ಹಾಗೂ ಖಾಸಗಿ ಬಸ್ ಸಂಚಾರ ಸಮಯ ಏಕವಾಗಿರುವುದರಿಂದ ಸಮಸ್ಯೆ ಎದುರಾಗಿದ್ದು, ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಡೀಸಿ ಪಾಟೀಲ ತಿಳಿಸಿದರು.