
ಕಲಬುರಗಿ(ಫೆ.27): ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಈಗಾಗಲೇ 5 ಸಾವಿರ ಕೋಟಿ ರು.ನೀಡಿದ್ದು, ಈ ಭಾಗದ ಪ್ರಗತಿಗೆ ಕಟಿಬದ್ಧರಾಗಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ತೊಟ್ಟಿರುವ ಸಂಕಲ್ಪದಿಂದ ಇದು ಸಾಧ್ಯವಾಗಿದ್ದು, ನಮ್ಮ ಸಂಕಲ್ಪ ಹೀಗೆಯೇ ಮುಂದುವರಿಯಲಿದೆ. ಮಧ್ಯರಾತ್ರಿ 12 ಗಂಟೆಯಾಗಿರಲಿ, ಈ ಭಾಗದ ಸಮಸ್ಯೆಯನ್ನು ಗಮನಕ್ಕೆ ತಂದರೆ ಪರಿಹಾರಕ್ಕೆ ಯತ್ನಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ‘ಕಲ್ಯಾಣ ಕರ್ನಾಟಕ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶಕ್ಕೆ ಅಮೃತ ಕಾಲ ಬಂದಂತೆ ಈ ಕಲ್ಯಾಣ ಕರ್ನಾಟಕ ಭಾಗಕ್ಕೂ ಅಮೃತ ಕಾಲ ಕೂಡಿ ಬಂದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಮಾಡಿ ಅದರ ಸಂಭ್ರಮವನ್ನು ಈ ಕಲ್ಯಾಣ ಕರ್ನಾಟಕ ಉತ್ಸವದ ಮೂಲಕ ಆಚರಿಸಲಾಗುತ್ತಿದೆ. ಈ ಭಾಗದ ಸಮಗ್ರ ಅಭಿವೃದ್ದಿ ನನ್ನ ಕನಸು. ಔದ್ಯೋಗಿಕ ಅಭಿವೃದ್ದಿ ಹಾಗೂ ಸಮಗ್ರ ನೀರಾವರಿ ವ್ಯವಸ್ಥೆ ಒದಗಿಸುವ ಮೂಲಕ ಈ ಭಾಗದ ರೈತರ ಬಾಳಿಗೆ ಬೆಳಕಾಗುವ ಕನಸು ನನ್ನದು. ಅಭಿವೃದ್ಧಿ ಕೈಗೊಳ್ಳುವಾಗ ಹಲವರು ನನ್ನ ಟೀಕಿಸಬಹುದು. ಆದರೆ, ಆ ಬಗ್ಗೆ ನಾನು ಯೋಚಿಸದೆ ಅಭಿವೃದ್ದಿ ಕಾರ್ಯ ಮುಂದುವರಿಸುವೆ ಎಂದು ಭರವಸೆ ನೀಡಿದರು.
Kalaburagi: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಾಧಕರಿಗೆ ಅವಮಾನ!
ಇಚ್ಛಾಶಕ್ತಿಯ ಕೊರತೆ ಇತ್ತು:
ಈ ಪ್ರದೇಶ ಸಮೃದ್ಧಿಯಿಂದ ಕೂಡಿದೆ. ಇಲ್ಲಿನ ನೆಲ ತುಂಬಾ ಶ್ರೀಮಂತವಾಗಿದೆ. ಆದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇಲ್ಲಿ ಪ್ರಗತಿಗೆ ಗ್ರಹಣ ಹಿಡಿದಿತ್ತು. ಬಿಜೆಪಿ ಸರ್ಕಾರ ಕಲಬುರಗಿಯಲ್ಲೇ ಕ್ಯಾಬಿನೆಟ್ ಸಭೆ ನಡೆಸಿ, ಈ ಭಾಗದ ಪ್ರಗತಿಗೆ ಹಲವು ಬದ್ಧತೆ ಪ್ರದರ್ಶಿಸಿತು. ನಮ್ಮ ಈ ಬದ್ಧತೆ ಹಾಗೆ ಮುಂದುವರಿಯಲಿದೆ ಎಂದು ಹೇಳಿದರು.
ಹಿಂದಿನ ಸರ್ಕಾರದವರು ಕೆಕೆಆರ್‌ಡಿಬಿ (ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ)ಗೆ ಅನುದಾನ ಕೊಡಲಿಲ್ಲ. ಆದರೆ, ಬಿಜೆಪಿ ಸರ್ಕಾರ 5 ಸಾವಿರ ಕೋಟಿ ರು. ನೀಡಿ ಬದ್ಧತೆ ತೋರಿದೆ. ಈಗಾಗಲೇ ಮಂಡಳಿಯಿಂದ 3 ಸಾವಿರ ಕೋಟಿ ರು. ವೆಚ್ಚದಲ್ಲಿ 1,500 ಕಾಮಗಾರಿಗಳನ್ನು ಜಾರಿಗೆ ತರಲಾಗಿದೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ 5 ಸಾವಿರ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಿದ್ಧ ಎಂದರು.
ಇದೇ ವೇಳೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದ ಸಿಎಂ, ಈ ಭಾಗದಲ್ಲಿ 1,100 ಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಮುಂಬರುವ ವರ್ಷದಲ್ಲಿ ಇನ್ನೂ 1,000 ಕೊಠಡಿಗಳ ನಿರ್ಮಾಣ ಮಾಡಲಾಗುವುದು. 28 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. 150 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಯ ಘಟಕ ನಿರ್ಮಿಸಲಾಗುತ್ತಿದೆ. ಬೀದರ್ ಹಾಗೂ ಮಳಖೇಡ ಕೋಟೆ ಅಭಿವೃದ್ಧಿಗೆ ತಲಾ 50 ಕೋಟಿ ರು. ಹಾಗೂ ದತ್ತಾತ್ರೇಯ ದೇವಸ್ಥಾನದ ಅಭಿವೃದ್ದಿಗೆ 57 ಕೋಟಿ ರು. ಅನುದಾನ ಘೋಷಣೆ ಮಾಡಿದ್ದೇನೆ. ಈ ಭಾಗದ ತಾಂಡಾ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಲು ಇತ್ತೀಚೆಗೆ ಪ್ರಧಾನಿ ಮೋದಿ ಆಗಮಿಸಿದ್ದು, 50,000 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಇದು ಗಿನ್ನೀಸ್ ದಾಖಲೆಗೆ ಸೇರಿದೆ. ನಮ್ಮ ಸರ್ಕಾರ ಬಂದ ಮೇಲೆ ಕಲ್ಯಾಣ ಕರ್ನಾಟಕಕ್ಕೆ ‘ಸದಾ ಕಲ್ಯಾಣ’, ‘ಅಮೃತ ಗಳಿಗೆ’ ಶುರುವಾಗಿದೆ ಎಂದರು.