
ಬೆಂಗಳೂರು(ನ.11): ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರ್ಕಾರದ ಹಣ ಬಳಸಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿರುವುದು ದೊಡ್ಡ ಅಪರಾಧ. ವಿಮಾನ ನಿಲ್ದಾಣದವರಿಂದಲೇ ಈ ಪ್ರತಿಮೆ ಮಾಡಿಸಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಚಿತ್ರಕಲಾ ಪರಿಷತ್ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೆಂಪೇಗೌಡರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸರ್ಕಾರದ ಹಣ ಬಳಸಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ್ದು ದೊಡ್ಡ ಅಪರಾಧ. ವಿಮಾನ ನಿಲ್ದಾಣದವರಿಂದಲೇ ಪ್ರತಿಮೆ ನಿರ್ಮಾಣ ಮಾಡಿಸಬೇಕಿತ್ತು. ವಿಮಾನ ನಿಲ್ದಾಣಕ್ಕೆ 2 ಸಾವಿರ ಎಕರೆ ಭೂಮಿ ಕೊಟ್ಟಿಲ್ವ ? ಅವರು ಧರ್ಮಕ್ಕೆ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದರು.
218 ಟನ್ ತೂಕದ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಅಂತಿಮ ಹಂತದ ಸಿದ್ಧತೆ
ಎಕರೆಗೆ ಬರೀ 6 ಲಕ್ಷ ರು.ನಂತೆ 2 ಸಾವಿರ ಎಕರೆ ಭೂಮಿ ಕೊಟ್ಟಿದ್ದೇವೆ. ಜತೆಗೆ ವಾಣಿಜ್ಯ ಉದ್ದೇಶಕ್ಕಾಗಿ ಇನ್ನೂ 2 ಸಾವಿರ ಎಕರೆ ನೀಡಲಾಗಿದೆ. ಇದರಿಂದ ಅವರು ಸಂಪಾದನೆ ಮಾಡುತ್ತಿಲ್ಲವೇ, ಸರ್ಕಾರ ಯಾಕೆ ದುಡ್ಡು ಹಾಕಿದ್ದು. ಈ ಬಗ್ಗೆ ನಾನು ಪ್ರತಿಮೆಗೆ ಶಂಕುಸ್ಥಾಪನೆ ದಿನವೇ ಹೇಳಿದ್ದೆ. ಮುಖ್ಯ ಕಾರ್ಯದರ್ಶಿ ಅವರು ಏಕೆ ಮೌನವಾಗಿದ್ದಾರೆ? ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ಸ್ಥಾನದಲ್ಲಿದ್ದು, ನಿಲ್ದಾಣದಿಂದಲೇ ಪ್ರತಿಮೆ ನಿರ್ಮಿಸಬೇಕಿತ್ತು. ಈಗ ಸರ್ಕಾರದಿಂದ ಪ್ರತಿಮೆ ಮಾಡಿದ್ದಲ್ಲದೆ ಅದರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಬಿಂಬಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸಂಸತ್ತಿನಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿ ಎಂಬ ದೇವೇಗೌಡರು ಬರೆದಿರುವ ಪತ್ರದ ಬಗ್ಗೆ, ಬಹಳ ಸಂತೋಷ, ಸಂಸತ್‌ನಲ್ಲೂ ಪ್ರತಿಮೆ ನಿರ್ಮಾಣ ಮಾಡಲಿ, ವಿಧಾನಸೌಧ ಅವರಣದಲ್ಲೂ ಮಾಡಲಿ ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ಮುಕುಡಪ್ಪ ಅವರ ಅವಹೇಳನಕಾರಿ ಹೇಳಿಕೆ ಬಗೆಗಿನ ಪ್ರಶ್ನೆಗೆ, ಸಿದ್ದರಾಮಯ್ಯ ಅವರ ಬಗ್ಗೆ ಬೇರೆಯವರು ಏನು ಹೇಳಿದ್ದಾರೆ ಗೊತ್ತಿಲ್ಲ. ಇದು ಖಾಸಗಿಯಾಗಿ ಮಾತನಾಡಿರುವ ವಿಚಾರ. ಈ ಬಗ್ಗೆ ತಿಳಿದು ಮಾತನಾಡುತ್ತೇನೆ. ನಮ್ಮ ನಾಯಕರ ಘನತೆ ಹಾಳು ಮಾಡಲು ಷಡ್ಯಂತ್ರ ನಡೆಯುತ್ತಿದೆ ಎಂದರು.
ನಾಚಿಕೆಗೇಡು:
ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಕಾಲೇಜು ಮಕ್ಕಳನ್ನು ಕರೆತರಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು ನಾಚಿಕೆಗೇಡಿನ ವಿಚಾರ. ಇದು ಬಿಜೆಪಿಯ ಜನಶಕ್ತಿ ಕುಸಿದಿರುವುದಕ್ಕೆ ಸಾಕ್ಷಿ. ಈ ಬಗ್ಗೆ ಮೋದಿ ಅವರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಬೇಕು ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿಯವರಿಗೆ ಜನ ಬೇಕಿದ್ದರೆ ನಮ್ಮನ್ನು ಕೇಳಲಿ ನಮ್ಮ ಕಾರ್ಯಕರ್ತರನ್ನು ಕಳುಹಿಸುತ್ತೇವೆ. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಬಾರದು ಎಂದರು.