ಉತ್ತರಕನ್ನಡ: ಭಟ್ಕಳ ಹೆಬಳೆ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published : Nov 11, 2022, 12:30 AM IST
ಉತ್ತರಕನ್ನಡ: ಭಟ್ಕಳ ಹೆಬಳೆ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಸಾರಾಂಶ

ಭ್ರಷ್ಟಾಚಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯತ್ ವಿಫಲವಾಗಿದೆ ಎಂದು ಪ್ರತಿಭಟನೆ ನಡೆಸಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ 

ಭರತ್‌ ರಾಜ್ ಕಲ್ಲಡ್ಕ‌, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ನ.11):  ಜಿಲ್ಲೆಯ ಭಟ್ಕಳ‌ ತಾಲೂಕಿ‌ನ ಹೆಬಳೆ ಗ್ರಾಮ ಪಂಚಾಯತ್‌‌ನಲ್ಲಿ ಗ್ರಾಮ‌ ಪಂಚಾಯತ್ ಪಿಡಿಒ ಹಾಗೂ ಕೆಲವು ಪಂಚಾಯತ್ ಸದಸ್ಯರು ಸೇರಿ ಭಾರೀ ಭ್ರಷ್ಟಾಚಾರ ನಡೆಸಿದ್ದರು. ಈ ಬಗ್ಗೆ ಒಂದು ವರ್ಷದ ಹಿಂದೆಯೇ ದೂರು ನೀಡಲಾಗಿದ್ರೂ, ಸಾಕಷ್ಟು ಒತ್ತಾಯದ ಬಳಿಕ ಎರಡೆರಡು ಬಾರಿ ನಡೆದ ತನಿಖೆಯಿಂದ ಭ್ರಷ್ಟಾಚಾರ ಸಾಭೀತಾಗಿತ್ತು. ಆದರೆ, ಭ್ರಷ್ಟಾಚಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯತ್ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪ್ರತಿಭಟನೆ ನಡೆಸಿದೆ. 

ಹೌದು, ಉತ್ತರಕನ್ನಡ ಜಿಲ್ಲೆಯ ಭಟ್ಕಳ‌ ತಾಲೂಕಿ‌ನ ಹೆಬಳೆ ಗ್ರಾಮ ಪಂಚಾಯತ್‌‌ನಲ್ಲಿ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಹಾಗೂ ಇತರ ಅಭಿವೃದ್ಧಿ ಕಾರ್ಯದಲ್ಲಿ ಲಕ್ಷಾಂತರ ರೂಪಾಯಿ ನುಂಗುವ ಮೂಲಕ ಪಿಡಿಒ ಹಾಗೂ ಕೆಲವು ಪಂಚಾಯತ್ ಸದಸ್ಯರು ಸೇರಿ ಭಾರೀ ಭ್ರಷ್ಟಾಚಾರ ನಡೆಸಿದ್ದರು. ಪಂಚಾಯತ್‌ಗೆ ದೊರಕಿದ್ದ ಅನುದಾನಗಳನ್ನು ನಿಯಮ ಹಾಗೂ ವ್ಯಾಪ್ತಿ ಮೀರಿ ಬಳಸಿಕೊಳ್ಳಲಾಗಿತ್ತು. ಕಾಮಗಾರಿಗಳನ್ನು ನಡೆಸದೇ ಹಣವನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಪಿಡಿಒ, ಪಂಚಾಯತ್ ಅಧ್ಯಕ್ಷರು, ಸದಸ್ಯರು ಡ್ರಾ ಮಾಡಿಸಿಕೊಂಡಿದ್ದರು.‌ 14ನೇ‌ ಹಾಗೂ 15ನೇ ಹಣಕಾಸು ಬಿಡುಗಡೆಯಾಗಿರೋದ್ರಲ್ಲೂ ಲಕ್ಷಾಂತರ ರೂಪಾಯಿ ಅವ್ಯವಹಾರಗಳಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾ ಕಾರ್ಯಕರ್ತರ ವೇದಿಕೆ ದಾಖಲೆಗಳ ಸಮೇತವಾಗಿ ವರ್ಷದ ಹಿಂದೆಯೇ ಉನ್ನತಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು. ಆದ್ರೆ, ಪಿಡಿಒಗೆ ಕೇವಲ ವರ್ಗಾವಣೆ ಮಾಡಲಾಗಿದೆ ಹೊರತು ಉಳಿದಂತೆ ಪ್ರಕರಣ ಸಂಬಂಧಿಸಿ ಸಂಬಂಧಪಟ್ಟವರ ತನಿಖೆಯಾಗಲೀ, ಕ್ರಮವಾಗಲೀ ಈವರೆಗೆ ಕೈಗೊಳ್ಳಲಾಗಿಲ್ಲ. ಈ ಕಾರಣದಿಂದ ಇಂದು ಕಾರವಾರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉನ್ನತಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಲ್ಲದೇ, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

UTTARA KANNADA NEWS: ಶಿರಸಿ ನಗರದಲ್ಲಿ ಗುಡ್ಡವಾಗಿ ಮಾರ್ಪಟ್ಟ ತ್ಯಾಜ್ಯ ರಾಶಿ!

ಹೆಬಳೆ ಪಂಚಾಯತ್‌ನಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಈ ಹಿಂದೆ ಒತ್ತಾಯದ ಮೇರೆಗೆ ಎರಡೆರಡು ಬಾರಿ ತನಿಖೆ ನಡೆಸಿದ್ದ ಅಧಿಕಾರಿಗಳು, ಇಲ್ಲಿ ಅಕ್ರಮವಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದರು. ಆದರೆ, ಯಾವ- ಯಾವ ಯೋಜನೆಗಳಲ್ಲಿ ಯಾವ ಮಟ್ಟದ ಅಕ್ರಮಾಗಿದೆ ಹಾಗೂ ಅಕ್ರಮದ ಪ್ರಮಾಣದ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡುತ್ತಿಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯತ್ ಆಡಳಿತ ವಿಫಲವಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಪಿಡಿಒ ಅವರನ್ನು ಬೇರೊಂದು ಪಂಚಾಯತ್‌ಗೆ ವರ್ಗಾವಣೆ ಮಾಡಿ ಅಲ್ಲಿಯೂ ಭ್ರಷ್ಟಾಚಾರ ನಡೆಸಲು ಅನುವು ಮಾಡಿಕೊಟ್ಟಂತಾಗಿದೆ. ಕೆಸಿಎಸ್ ಆರ್ ನಿಯಮಾವಳಿ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬದಲು ಸಹಕಾರ ನೀಡುವುದು ಕೂಡಾ ಅಪರಾಧ ಮಾಡಿದಂತಾಗುತ್ತದೆ. ಪ್ರಕರಣ ಸಂಬಂಧಿಸಿ ಜಿಲ್ಲಾಡಳಿತ ಸಾರ್ವಜನಿಕರ ಅರ್ಜಿಗಳಿಗೆ ಸ್ಪಂದಿಸದೇ, ಹಿಂಬರಹ ನೀಡದೇ ಹೈಕೋರ್ಟ್‌ ನಿರ್ದೇಶನವನ್ನು ಉಲ್ಲಂಘಿಸಿದೆ. ಹೆಬಳೆ ಪಂಚಾಯತ್‌ನಲ್ಲಿ ಸದಸ್ಯರು 

ಗಂಡ, ಚಿಕ್ಕಪ್ಪ, ಅಪ್ಪನ ಹೆಸರಿನಲ್ಲಿ ಬಿಲ್‌ಗಳನ್ನು ವೋಚರ್ ಮಾಡಿಕೊಂಡು ಹಣ ಬಿಡುಗಡೆ ಮಾಡಿಕೊಂಡಿದ್ದರು.‌‌ಇದು ಪಂಚಾಯತ್ ಕಾನೂನಿಗೆ ವಿರುದ್ಧವಾಗಿದ್ದು, ಪಿಡಿಒ ಜತೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಕೊನೆಗೂ ಪ್ರತಿಭಟನಾಕಾರರ ಬಳಿ ಬಂದು ಬೇಡಿಕೆ ಆಲಿಸಿರುವ ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ, ಪ್ರಕರಣ ತನಿಖೆಯಲ್ಲಿದ್ದು, ಮುಗಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಮಾಹಿತಿ ಹಕ್ಕು ವೇದಿಕೆ ಸದಸ್ಯರು ತಮ್ಮ ಪ್ರತಿಭಟನೆ ನಿಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಗಳಾಗುತ್ತಾ ಅಥವಾ ಈ ಪ್ರಕರಣದ ಕಡತ ಧೂಳಿನಲ್ಲಿ ಮುಚ್ಚಿ ಹೋಗುತ್ತಾ ಎಂದು ಕಾದು ನೋಡಬೇಕಷ್ಟೇ.
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ