ಕಸ್ತೂರಿ ರಂಗನ್ ವರದಿ ಬಫರ್ ಝೋನ್ ವಿರುದ್ಧ ಪ್ರತಿಭಟನೆಗೆ ರಾಜ್ಯ ರೈತ ಸಂಘ ಸಜ್ಜು

By Govindaraj S  |  First Published Aug 3, 2023, 7:17 PM IST

ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಮೇಲೆ ಕಳೆದ ಹಲವು ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಎಂಬ ತೂಗುಗತ್ತಿ ನೇತಾಡುತ್ತಲೇ ಇದೆ. ಇದೀಗ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುವುದಕ್ಕೆ ನಾವು ಬದ್ಧ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿರುವುದು ರೈತರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. 
 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.03): ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಮೇಲೆ ಕಳೆದ ಹಲವು ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಎಂಬ ತೂಗುಗತ್ತಿ ನೇತಾಡುತ್ತಲೇ ಇದೆ. ಇದೀಗ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುವುದಕ್ಕೆ ನಾವು ಬದ್ಧ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿರುವುದು ರೈತರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ರೈತ ಸಂಘ ಜಿಲ್ಲೆಯಿಂದಲೇ ರಾಜ್ಯ ಮಟ್ಟದ ಹೋರಾಟಕ್ಕೆ ಚಾಲನೆ ನೀಡಲು ಸಿದ್ಧವಾಗುತ್ತಿದೆ. ಹೋರಾಟದ ರೂಪು ರೇಷೆ ಸಿದ್ಧಗೊಳಿಸುವುದಕ್ಕಾಗಿ ಇದೇ 11 ರಂದು ಜಿಲ್ಲೆಯ ವಿರಾಜಪೇಟೆ ಅಥವಾ ಸಿದ್ಧಾಪುರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ರೈತ ಮುಖಂಡರನ್ನು ಆಹ್ವಾನಿಸಿದೆ. 

Latest Videos

undefined

ಈ ಕುರಿತು ಗುರುವಾರ ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಬಡಗಲಪುರ ನಾಗೇಂದ್ರ ಅವರು ಮಾತನಾಡಿದ್ದಾರೆ. ಹಿಂದೆ ಇದ್ದ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗಲೂ ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಯನ್ನು ಇದೊಂದು ಅವೈಜ್ನಾನಿಕ ವರದಿ ಎಂದು ತಿರಸ್ಕರಿಸಿತ್ತು. ಅದನ್ನು ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಅವರ ಸರ್ಕಾರವೂ ಕೂಡ ತಿರಸ್ಕರಿಸಿತ್ತು. ಇದೀಗ ಮತ್ತೆ ಸಿದ್ದರಾಮಯ್ಯನವರ ಸರ್ಕಾರವೇ ಇರುವುದರಿಂದ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡದಂತೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ. 

ಜನರನ್ನು ಲಂಚಕ್ಕಾಗಿ ಪೀಡಿಸುತ್ತಿರಲ್ಲ, ನಿಮಗೆ ಮರ್ಯಾದೆ ಇದೆಯೇ: ಅಧಿಕಾರಿಗಳಿಗೆ ಶಾಸಕಿ ರೂಪಕಲಾ ತರಾಟೆ

ಪರಿಸರವನ್ನು ಕಾಪಾಡುತ್ತೇವೆ ಎನ್ನುವ ನೆಪದಲ್ಲಿ ಇಲ್ಲಿ ಬದುಕುವ ರೈತರು, ಮೂಲ ನಿವಾಸಿಗಳ ಬದುಕನ್ನು ಕಿತ್ತುಕೊಳ್ಳುವುದು ಬೇಡ. ಪರಿಸರ ರಕ್ಷಣೆ ಹಾಳಾಗುತ್ತಿರುವುದು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ತರುತ್ತಿರುವ ಅನಗತ್ಯ ಯೋಜನೆಗಳಿಂದ. ಹೀಗಾಗಿ ಇದನ್ನು ಸರ್ಕಾರಗಳಿಗೆ ಅರ್ಥೈಸುವುದಕ್ಕಾಗಿ ವಿಚಾರ ಸಂಕಿರಣ ನಡೆಸುತ್ತಿದ್ದು ರಾಜ್ಯದ 11 ಜಿಲ್ಲೆಗಳಿಂದ ತಲಾ ಹತ್ತು ರೈತ ಮುಖಂಡರು ಬರಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಶಿರಸಿಯ ಕಣ್ಕುಣಿ ಹೆಗ್ಗಡೆ, ಕೆ.ಎಲ್ ಅಶೋಕ್ ಭಾಗವಹಿಸಲಿದ್ದಾರೆ. ಜೊತೆಗೆ ಐಎಫ್ಎಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಚರ್ಚಿಸಿ ಬಳಿಕ ಹೋರಾಟ ರೂಪಿಸಲಾಗುವುದು ಎಂದಿದ್ದಾರೆ. 

ಇನ್ನು ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅವರು ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ಈಗಿರುವಂತೆ ರಾಜ್ಯ ಸರ್ಕಾರ ಜಾರಿ ಮಾಡಿದ್ದಲ್ಲಿ ಜಿಲ್ಲೆಯ 55 ಗ್ರಾಮಗಳ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಎಷ್ಟೋ ಕುಟುಂಬಗಳು ಅರಣ್ಯದ ಅಂಚಿನಲ್ಲೇ ಇರುವುದರಿಂದ ಇವು ಗ್ರಾಮವನ್ನೇ ತೊರೆಯಬೇಕಾಗಬಹುದು. ಜೊತೆಗೆ ಅರಣ್ಯ ಪ್ರದೇಶದಿಂದ 10 ಕಿಲೋ ಮೀಟರ್ ವ್ಯಾಪ್ತಿಯ ವರೆಗೆ ಬಫರ್ ಝೋನ್ ವ್ಯಾಪ್ತಿಯಲ್ಲಿ ನಾವು ಉತ್ತಮ ರೀತಿಯಲ್ಲಿ ವ್ಯವಸಾಯವನ್ನು ಮಾಡುವಂತಿಲ್ಲ. ಇದರಿಂದ ಸಾವಿರಾರು ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. 

ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಕಟ್ಟುತ್ತೇನೆ: ಮಾಜಿ ಸಚಿವ ಸುಧಾಕರ್‌

ಜೊತೆಗೆ ನಮ್ಮ ತೋಟಗಳಲ್ಲಿ ಮರಗಳ ಕಪಾತಿಂಗ್ ಮಾಡಿ ಎಷ್ಟೆಲ್ಲಾ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರೂ ಆನೆ, ಹುಲಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷ ಮಿತಿ ಮೀರಿದೆ. ಹೀಗಿರುವಾಗ ಬಫರ್ ಝೋನ್ ಬಂದು ನಮ್ಮ ತೋಟಗಳನ್ನು ಕಾಡಿನಂತೆ ಉಳಿಸಿದರೆ ಆಗ ಇನ್ಯಾವ ಮಟ್ಟಿಗೆ ನಾವು ಕಾಡು ಪ್ರಾಣಿಗಳ ಉಪಟಳ ಅನುಭವಿಸಬೇಕಾದೀತು. ಹೀಗಾಗಿ ಸರ್ಕಾರ ಕೇರಳದ ಮಾದರಿಯಲ್ಲಿ ಬಫರ್ ಝೋನ್ ಅನ್ನು ಕೈಬಿಟ್ಟು ಕಸ್ತೂರಿ ರಂಗನ್ ವರದಿ ಜಾರಿಗೆ ಮನವಿ ಸಲ್ಲಿಸಲಿ ಎಂದು ಮನು ಸೋಮಯ್ಯ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ 11 ಮಲೆನಾಡು ಜಿಲ್ಲೆಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗುತ್ತದೆ ಎನ್ನುವ ವಿಷಯ ರೈತರು ಹೋರಾಟಕ್ಕೆ ಸಜ್ಜಾಗುವಂತೆ ಮಾಡಿದೆ.

click me!