ಕಾಫಿನಾಡಿನಲ್ಲಿ ಶಕ್ತಿ ಕುಂದಿದ ಕೆಂಪು ಬಸ್: ಸಮಸ್ಯೆ ಸುಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು

By Govindaraj S  |  First Published Aug 3, 2023, 5:33 PM IST

ಕಾಫಿನಾಡು ಜಿಲ್ಲೆಯಲ್ಲಿ  ಶಕ್ತಿ ಯೋಜನೆಯ ಎಫೆಕ್ಟ್ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಶಕ್ತಿ ಯೋಜನೆಯ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳು ಶಕ್ತಿ ಕಳೆದುಕೊಂಡಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.03): ಕಾಫಿನಾಡು ಜಿಲ್ಲೆಯಲ್ಲಿ  ಶಕ್ತಿ ಯೋಜನೆಯ ಎಫೆಕ್ಟ್ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಶಕ್ತಿ ಯೋಜನೆಯ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳು ಶಕ್ತಿ ಕಳೆದುಕೊಂಡಿದೆ. ಕೆಎಸ್‌ಆರ್‌ಟಿಸಿಯಲ್ಲಿ ಕಳೆದ ಕೆಲ ವರ್ಷಗಳಿಂದ ಬಸ್ಸುಗಳ ಖರೀದಿಯಾಗದೇ ಇದ್ದು, ಇರುವ ಹಳೆಯ ಬಸ್ಸುಗಳಲ್ಲೇ ಸೇವೆ ನೀಡಲಾಗುತ್ತಿದೆ. ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿರುವ ಪರಿಣಾಮವಾಗಿ ಬಸ್ಸುಗಳಲ್ಲಿ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಯಾಣಿಕರು ಪ್ರಯಾಣ ಬೆಳೆಸುವುದರಿಂದ ಓವರ್ ಲೋಡ್‌ನಿಂದ ಬಸ್ಸುಗಳು ಶಕ್ತಿ  ಕಳೆದುಕೊಂಡಿದೆ.  

Latest Videos

undefined

ನಡು ರಸ್ತೆ ಸೇರಿದಂತೆ ಎಲ್ಲಂದರಲ್ಲಿ ಕೆಟ್ಟು ನಿಲ್ಲುವ ಬಸ್ಸುಗಳು: ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಳಿಕ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಯಾಣಿಕರು ಅಂದರೆ 40_60 ಮಂದಿ ಪ್ರಯಾಣಸುತ್ತಿದ್ದ ಬಸ್ಸುಗಳಲ್ಲಿ 120ರಿಂದ 130 ಮಂದಿ ಪ್ರಯಾಣ ಸುತ್ತಿರುವುದರಿಂದ ಓವರ್ ಲೋಡ್‌ನಿಂದಾಗಿ ಬಸ್ಸುಗಳು ಶಕ್ತಿ ಕಳೆದುಕೊಂಡು ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಕೆಎಸ್‌ಆರ್‌ಟಿಸಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಹೊಸದಾಗಿ ಬಸ್ಸುಗಳನ್ನು ಖರೀದಿ ಮಾಡದೆ ಈಗಿರುವ ಹಳೆಯ ಬಸ್ಸುಗಳಿಗೆ ತೇಪೆ ಹಾಕಿ, ಬಣ್ಣ ಬಳಿದು ಅವುಗಳನ್ನೇ ರಸ್ತೆಗಿಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ನೀಡಲು ಮುಂದಾಗಿದೆ. 

Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು

ಆದರೆ, ಸದ್ಯ ಸಾರಿಗೆ ಇಲಾಖೆ ಬಳಿ ಇರುವ ಬಸ್ಸುಗಳ ಪೈಕಿ ಬಹುತೇಕ ಬಸ್ಸುಗಳು ಸರ್ಕಾರದ ಗುಜರಿ ನೀತಿಯನ್ವಯ ರಸ್ತೆಯಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಕಳೆದುಕೊಂಡಿವೆ. ಆದರೂ ಮೇಲಿನ ಅಧಿಕಾರಿಗಳ ಆದೇಶ, ಡಿಪೊ ಮ್ಯಾನೇಜರ್ ಸೇರಿದಂತೆ ಇತರೆ ಅಧಿಕಾರಿಗಳ ಸೂಚನೆಯ ಮೇರೆಗೆ ಚಾಲಕರು ಮತ್ತು ನಿರ್ವಾಹಕರು ಹಳೆಯ ಬಸ್ಸುಗಳನ್ನೇ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾದರೆ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳಕ್ಕೆ ತಲುಪುವ ನಂಬಿಕೆಯಿಲ್ಲದೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. 

ವಿಪರೀತ ಹೊಗೆ ಉಗುಳುವ ಬಸ್ಸುಗಳು: ಡಿಪೊ ಅಥವಾ ವರ್ಕ್‌ಶಾಪ್‌ನಲ್ಲಿ ಎಲ್ಲವೂ ಸರಿ ಇದೆಯೆಂದು ಪರಿಶೀಲನೆ ಮಾಡಿ ತೆಗೆದುಕೊಂಡು ಬಂದಿದ್ದರೂ ಕೂಡಾ ಐದತ್ತು ಕಿ.ಮೀ. ಕ್ರಮಿಸುತ್ತಿದ್ದಂತೆ ಒಂದಲ್ಲ ಒಂದು ಸಮಸ್ಯೆ ಉಂಟಾಗಿ ರಸ್ತೆ ಮದ್ಯದಲ್ಲೇ ಕೈಕೊಡುವ ಬಸ್ಸುಗಳ ಸಂಖ್ಯೆಗೇನು ಕೊರತೆಯಿಲ್ಲದಂತಾಗಿದೆ. ಕೆಲವು ಬಸ್ಸುಗಳು ರಸ್ತೆಯಲ್ಲಿ ಹೋಗುತ್ತಿದ್ದರೆ ಅವುಗಳು ಉಗುಳುವ ಹೊಗೆಯಿಂದ ದಾರಿ ಕಾಣದಂತೆ ಹೊಗೆ ಆವರಿಸಿಕೊಳ್ಳುವುದಲ್ಲದೆ ಅದರಿಂದ ಉಸಿರುಗಟ್ಟಿದಂತಾಗಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಹವಾಸವೇ ಬೇಡ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. 

ಶಕ್ತಿ ಯೋಜನೆ ಜಾರಿಯಾದ ಬಳಿಕ ರಸ್ತೆಯಲ್ಲಿ ಕೆಟ್ಟು ನಿಲ್ಲುವ ಬಸ್ಸುಗಳ ಸಂಖ್ಯೆ ಹೆಚ್ಚಾಗಿದ್ದು, ಬೆಟ್ಟ,ಗುಡ್ಡ ಅಥವಾ ಕಡಿದಾದ ಎತ್ತರದ ರಸ್ತೆ ಹತ್ತುವ ವೇಳೆ ಕೆಲ ಬಸ್ಸುಗಳು ಪಿಕಪ್ ಇಲ್ಲದೆ ಸರಿಯಾಗಿ ಗೇರಿಗೂ ಬೀಳುವುದಿಲ್ಲ, ಇಳಿಜಾರಿನ ರಸ್ತೆಗಳಲ್ಲಿ ಹೋಗುವಾಗ ಬ್ರೇಕ್ ತುಳಿದರೂ ನಿಲ್ಲುವುದಿಲ್ಲ. ಇನ್ನೂ ಕೆಲ ಬಸ್ಸುಗಳಲ್ಲಿ ಡೋರ್‌ಗಳು ಕೆಲಸ ಮಾಡುವುದೇ ಇಲ್ಲ. ಬಹುತೇಕ ಬಸ್ಸುಗಳು ರಸ್ತೆ ಮಧ್ಯೆ ಕೆಟ್ಟು ನಿಂತರೆ ಡ್ರೈವರ್ ,ನಿರ್ವಾಹಕರು ಊಟ,ನೀರು ಏನೂ ಇಲ್ಲದೆ ಮೆಕ್ಯಾನಿಕ್ ಬರುವವರೆಗೂ ಉಪವಾಸ ಇರಲೇಬೇಕಾಂತಹ ಸ್ಥಿತಿ ಇದೆ. 

ಮಲೆನಾಡಿನಲ್ಲಿ ಮುಂಗಾರು ಮಳೆ ಬಿಡುವು: ಜನ ಜೀವನ ಸಹಜ ಸ್ಥಿತಿಯತ್ತ

ಡಿಪೊಗಳಲ್ಲಿ ಬಿಡಿಪಕರಣಗಳ ಕೊರತೆ: ಜಿಲ್ಲೆಯಲ್ಲಿರುವ ಬಸ್‌ಗಳು ಹಳೆಯದಾಗಿದ್ದು, ಅಲ್ಲಲ್ಲಿ ಕೆಟ್ಟು ನಿಲ್ಲುವುದು ತಪ್ಪಿಲ್ಲ. ಆರು ಡಿಪೊಗಳಿಂದ ಒಟ್ಟು 524 ಬಸ್ ಗಳು ಇದ್ದು ಡಿಪೋಗಳಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ಬಿಡಿಭಾಗಗಳ ಸಮಸ್ಯೆಯನ್ನು ಎದುರಿಸುತ್ತಿದೆ.ಇದರಿಂದ ಬಸ್ ಗಳು ನಡು ರಸ್ತೆಯಲ್ಲಿ ಕೆಟ್ಟ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಂಪು ಬಸ್‌ಗಳು ಮೊದಲೇ ಶಕ್ತಿ ಕಳೆದುಕೊಂಡು ಸಂಚಾರ ಮಾಡುತಿತ್ತು. ಇದೀಗ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವ ಪರಿಣಾಮ ಬಸ್ಸುಗಳಲ್ಲಿ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಯಾಣಿಕರು ಪ್ರಯಾಣ ಬೆಳೆಸುವುದರಿಂದ ಓವರ್ ಲೋಡ್ ಸಮಸ್ಯೆ ಎದುರಿಸುತ್ತಿದೆ. ಇದರ ಪರಿಣಾಮ ಬಸ್ಗಳು ನಡು ರಸ್ತೆಯಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

click me!