
ಚಿಕ್ಕಬಳ್ಳಾಪುರ (ಜು.08): ಆರೋಗ್ಯ ವಿಮೆ ಮಾಡಿಸುವ ನೆಪದಲ್ಲಿ ಗ್ರಾಹಕರಿಗೆ ಭರ್ಜರಿ ವಂಚನೆ ಮಾಡಿದ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ (Star health insurance) ಸಿಬ್ಬಂದಿ ಇದೀಗ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ನೈಜ ದಾಖಲೆಗಳನ್ನು ತಿದ್ದಿ ನಕಲಿ ಇನ್ಸೂರೆನ್ಸ್ ಕಾಗದಗಳನ್ನು ನೀಡಿದ್ದ ಆರೋಪಿಗೆ ಯಾವ ಪಾಲಿಸಿ ಮಾಡಿಸಿದ್ದೀರಿ ಎಂದು ಕೇಳಿದಾಗ ಕಳ್ಳಾಟ ಬಯಲಾಗಿದೆ.
ಅಚ್ಯುತ್ ಕುಮಾರ್ ಎಂಬುವವರು ತಮ್ಮ ಕುಟುಂಬದ ಆರೋಗ್ಯ ವಿಮೆಗಾಗಿ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಮೂಲಕ ಪ್ಲಾನ್ ಮಾಡಿಸಲು ಮುಂದಾಗಿದ್ದರು. ಆಗ ಚಿಕ್ಕಬಳ್ಳಾಪುರ ಶಾಖೆಯ ಉದ್ಯೋಗಿ ಮೆದಾರ ಕಾಕರ್ಲಾ ವೆಂಕಟೇಶ್ವರ ಪ್ರಸಾದ್ ಅವರು ತಾನು ಇನ್ಸೂರೆನ್ಸ್ ಮಾಡಿಸುವುದಾಗಿ ಬಂದು ಅಚ್ಯುತ್ ಕುಮಾರ್ ಅವರಿಂದ 1.77 ಲಕ್ಷ ರೂಪಾಯಿಗ ಹಣವನ್ನು ಪಾವತಿಸಿಕೊಂಡಿದ್ದಾರೆ. ನಂತರ, ವಿಮೆಗೆ ಸಂಬಂಧಪಟ್ಟ ಹಣವನ್ನು ತನ್ನ ಸ್ವಂತಕ್ಕೆ ಬಳಕೆ ಮಾಡಿಕೊಂಡು, ವಿಮೆದಾರರಿಗೆ ನಕಲಿ ದಾಖಲೆಗಳನ್ನು ಕೊಟ್ಟಿದ್ದಾರೆ.
ಕೆಲವು ದಿನಗಳ ನಂತರ ಅಚ್ಯುತ್ ಕುಮಾರ್ ಅವರು ತಮ್ಮ ಇನ್ಸೂರೆನ್ಸ್‌ನ ಬಾಂಡ್ ಪೇಪರ್ ಪಡೆಯಲು ಸಂಬಂಧಿಸಿದ ವಿವರಗಳಿಗಾಗಿ ಸಂಸ್ಥೆಗೆ ಸಂಪರ್ಕಿಸಿದಾಗ, ಕಂಪನಿಯಿಂದ ಅಂತಹ ಯಾವುದೇ ಪ್ಲಾನ್ ಅಥವಾ ನಿಮ್ಮ ಹೆಸರಿನಲ್ಲಿ ವಿಮೆ ಮಾಡಿಸಿದ ಯಾವುದೇ ದಾಖಲೆಗಳಿಲ್ಲ ಎಂಬ ವಿಚಾರ ಬಯಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ವೆಂಕಟೇಶ್ವರ ಪ್ರಸಾದ್ ನಕಲಿ ದಾಖಲೆಗಳನ್ನು ನೀಡಿದ್ದು, ಗ್ರಾಹಕರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದ ಎಂಬ ಆರೋಪಗಳು ದೃಢಪಟ್ಟವು.
ಇದೀಗ ಚಿಕ್ಕಬಳ್ಳಾಪುರ ಶಾಖೆಯ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಆರೋಪಿ ವೆಂಕಟೇಶ್ವರ ಪ್ರಸಾದ್‌ನ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಜೊತೆಗೆ, ಇನ್ನೂ ಎಷ್ಟು ಜನ ಗ್ರಾಹಕರಿಗೆ ಇದೇ ರೀತಿಯಾಗಿ ವಂಚನೆ ಮಾಡಿದ್ದಾನೆ ಎಂಬುದನ್ನು ಸಂಸ್ಥೆಯವರು ತನಿಖೆ ಮಾಡಿ ಬಹಿರಂಗಪಡಿಸಬೇಕು. ಜೊತೆಗೆ, ಎಲ್ಲ ಗ್ರಾಹಕರ ಹಣವನ್ನು ವಾಪಸ್ ನೀಡಬೇಕು ಎಂದು ಸಂತ್ರಸ್ತ ಗ್ರಾಹಕರು ಆಗ್ರಹಿಸಿದ್ದಾರೆ. ಇನ್ಸೂರೆನ್ಸ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಣ ವಾಪಸ್ ಕೊಡಿಸುವ ಭರವಸೆ ನೀಡಿದ್ದಾರೆ.
ಆ ಆರೋಪದ ಮೇಲೆ ಹಲವು ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಹಕರ ಒತ್ತಾಯದ ಮೇರೆಗೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡು, 6 ತಿಂಗಳ ಬಳಿಕ ಹಣ ಹಿಂತಿರುಗಿಸಿ ಕೊಟ್ಟು ಗ್ರಾಹಕರ ಕ್ಷಮೆಯಾಚಿಸಿದ್ದಾನೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಹೆಚ್ಚಿನ ಪ್ರತಿಷ್ಠಿತ ಸಂಸ್ಥೆಗಳ ಹೆಸರಿನಲ್ಲಿ ನಡೆಯುತ್ತಿರುವ ಅಂತಹ ವಂಚನೆಗಳ ವಿರುದ್ಧ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ವಿಮಾ ಪ್ಲಾನ್ ತೆಗೆದುಕೊಳ್ಳುವ ಮೊದಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅಥವಾ ಕಸ್ಟಮರ್ ಕೇರ್ ಮೂಲಕ ದೃಢೀಕರಣ ಪಡೆದ ನಂತರವೇ ಹಣ ಪಾವತಿ ಮಾಡಬೇಕೆಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.