
ಚಿಕ್ಕಬಳ್ಳಾಪುರ (ಜು.8): ಕಂಟೇನರ್ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪಾರ್ಸಲ್ ಗಳ ದರೋಡೆ ನಡೆದಿದೆ. 4.80 ಲಕ್ಷ ಮೌಲ್ಯದ ಅಮೆಜಾನ್ ಕಂಪೆನಿಯ ಪಾರ್ಸಲ್ ಗಳನ್ನ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 44 ರ ಜಯಂತಿಗ್ರಾಮದ ಬಳಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜಯಂತಿ ಗ್ರಾಮದಲ್ಲಿ ನಿಂತಿದ್ದ ಕಂಟೇನರ್ ಲಾರಿಯ ಬೀಗ ಒಡೆದು ಕಳ್ಳತನ ಮಾಡಲಾಗಿದೆ.
ಸಂದೀಪ್ ಲಾಜಿಸ್ಟಿಕ್ಸ್ ಟ್ರಾನ್ಸ್ ಪೋರ್ಟ್ ಕಂಪೆನಿಗೆ ಸೇರಿದ ಕಂಟೈನರ್ ಲಾರಿ ರಾಜಸ್ಥಾನದಿಂದ ತಮಿಳುನಾಡಿಗೆ ಹೊರಟಿತ್ತು. ರಾಜಸ್ತಾನದ ಅಕಟ ಭಾರತ್ ಪುರ್ ನಿಂದ ತಮಿಳುನಾಡಿನ ಹೊಸೂರಿಗೆ ಹೊರಟಿದ್ದ ಕಂಟೈನರ್ ಲಾರಿಯಲ್ಲಿ ಅಮೆಜಾನ್ ಕಂಪೆನಿಯ ಪಾರ್ಸಲ್‌ಗಳು ಇದ್ದವು.
ಗೊತ್ತಾಗಿದ್ದು ಹೇಗೆ?: ಲಾರಿ ನಿಗದಿತ ಸ್ಥಳಕ್ಕೆ ಸಮಯಕ್ಕೆ ತಲುಪದಿದ್ದಕ್ಕೆ ಅಧಿಕಾರಿಗಳು ಅನುಮಾನಗೊಂಡಿದ್ದಾರೆ. ಜಿಪಿಎಸ್ ಲೊಕೇಷನ್ ಹುಡುಕಿ ಬಂದಾಗ ಜಯಂತಿ ಗ್ರಾಮದ ರೈಕಾ ಹೊಟೆಲ್ ಬಳಿ ಖಾಲಿ ಲಾರಿ ಪತ್ತೆಯಾಗಿದೆ. ಲಾರಿಯಲ್ಲಿದ್ದ ವಸ್ತುಗಳ ಜೊತೆಗೆ ಇಬ್ಬರು ಚಾಲಕರು ಕೂಡ ನಾಪತ್ತೆಯಾಗಿದ್ದಾರೆ. ಚಾಲಕರ ಮೇಲೆ ಅನುಮಾನ ಹಿನ್ನೆಲೆ ಗುಡಿಬಂಡೆ ಪೊಲೀಸ್ ಠಾಣೆ ಗೆ ದೂರು ದಾಖಲಾಗಿದೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರಸ್ತುತ ಕಂಟೇನರ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಲಾರಿ ಚಾಲಕರಾದ ನಜೀರ್ ಹುಸೇನ್ (28) ಹಾಗೂ ಹಬೀದ್(28) ರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗುಡಿಬಂಡೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.