ಒಕ್ಕಲಿಗ ಸಮಾಜವನ್ನು ಒಬಿಸಿಗೆ ಸೇರ್ಪಡಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಉಳಿದುಕೊಂಡಿದೆ. ಈ ಬಗ್ಗೆ ಕೇಂದ್ರ ನಾಯಕರೊಂದೊಗೆ ಚರ್ಚಿಸಿ, ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಶಿವಮೊಗ್ಗ (ನ.3) : ಒಕ್ಕಲಿಗ ಸಮಾಜವನ್ನು ಒಬಿಸಿಗೆ ಸೇರ್ಪಡಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಉಳಿದುಕೊಂಡಿದೆ. ಈ ಬಗ್ಗೆ ಕೇಂದ್ರ ನಾಯಕರೊಂದೊಗೆ ಚರ್ಚಿಸಿ, ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಇಲ್ಲಿನ ಬಾಲರಾಜ್ ಅರಸ್ ರಸ್ತೆಯ ಜಿಲ್ಲಾ ಒಕ್ಕಲಿಗರ ಸಂಘದ ಆವರಣದಲ್ಲಿ ನಿರ್ಮಾಣ ಆಗುತ್ತಿರುವ ಸಾರ್ವಜನಿಕ ಸಮುದಾಯ ಭವನಕ್ಕೆ ಗುರುವಾರ ಭೂಮಿಪೂಜೆ ಬಳಿಕ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಬಿಸಿ ಬಗ್ಗೆ ಚರ್ಚೆಗೆ ಬರಲು ಸಿಎಂಗೆ ಸಿದ್ದರಾಮಯ್ಯ ಸವಾಲ್
ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ರೈತ ನಾಯಕ ಸುಂದರೇಶ್ ಅವರಂತಹ ಗಣ್ಯರು ಹಾಸ್ಟೆಲ್‌ನಲ್ಲಿ ಇದ್ದು ಓದಿದ್ದಾರೆ. ಹಲವು ವರ್ಷಗಳಿಂದ ಒಕ್ಕಲಿಗರ ಹಾಸ್ಟೆಲ್ ಯಶಸ್ವಿಯಾಗಿ ನಡೆಯುತ್ತಿದೆ. ನಾನು ಸಿಎಂ ಆಗಿದ್ದಾಗ ಯಾವುದೇ ಜಾತಿ, ಕುಲ ನೋಡದೇ ನನ್ನ ಕರ್ತವ್ಯ ಎಂದು ಭಾವಿಸಿ ಸರ್ಕಾರದ ಅನುದಾನ ನೀಡಿದ್ದೆ. ಕಾಗಿನೆಲೆ ಪೀಠಕ್ಕೂ ಕೂಡ ಅನುದಾನ ನೀಡಿದ್ದೆ. ಆದರೆ, ಅದೇ ಸಮುದಾಯದವರು ಮುಖ್ಯಮಂತ್ರಿ ಆಗಿದ್ದಾಗ ಆ ಕೆಲಸ ಮಾಡಿರಲಿಲ್ಲ ಎಂದು ತಿಳಿಸಿದರು.
2023ರ ಜನವರಿಯೊಳಗೆ ಪ್ರಧಾನಿ ಮೋದಿಯಿಂದ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ನ.11ರಂದು ಕೆಂಪೇಗೌಡರ ಪುತ್ಥಳಿಯೂ ಉದ್ಘಾಟನೆಗೊಳ್ಳಲಿದೆ. ಸಾಧನೆ ಮಾಡಿ ತೋರಿಸಬೇಕು. ಮಾತು ಸಾಧನೆಯಾಗಬಾರದು. ನನ್ನಿಂದಾದಷ್ಟುಕಳಕಳಿಯಿಂದ ಒಕ್ಕಲಿಗ ಸಮುದಾಯದ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮುದಾಯಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ. ಬಿಎಸ್‌ವೈ ಸಿಎಂ ಆಗಿದ್ದಾಗ ಎಲ್ಲ ಸಮುದಾಯಕ್ಕೆ, ಎಲ್ಲ ಮಠಗಳಿಗೆ ಅನುದಾನ ನೀಡಿದ್ದಾರೆ. ಕಾರಣ ಮಠದ ಸ್ವಾಮೀಜಿಗಳು ಸೋಮಾರಿಗಳಾದರೆ ಅವರ ಸಮುದಾಯವೂ ಹಾಗೆ ಆಗುತ್ತದೆ. ಅದರ ಬದಲು ಅನುದಾನ ನೀಡಿ ಪ್ರೋತ್ಸಾಹಿಸಿದರೆ ಸ್ವಾಮೀಜಿಗಳು ಸಮುದಾಯವನ್ನು ಚೈತನ್ಯದಿಂದ ಓಡಾಡುವಂತೆ ಮಾಡುತ್ತಾರೆ. ಹೀಗಾಗಿ ಅನುದಾನ ಬಿಡುಗಡೆ ಮಾಡಿದರು ಎಂದು ಬಣ್ಣಿಸಿದರು.
ಸ್ವಾಮಿ ವಿವೇಕಾನಂದರು ದೇಶ ಕಟ್ಟುವ ಕಾಯಕದಲ್ಲಿ ತೊಡಗಿದ್ದಾಗ ಒಕ್ಕಲಿಗ ಸಮಾಜದ ಅಂದಿನ ಯುವಕ ಕೆ.ಹೆಚ್. ರಾಮಯ್ಯ ಅವರ ಜೊತೆ ಶ್ರಮಿಸುತ್ತಿದ್ದರು. ವಿವೇಕಾನಂದರಿಂದ ಸ್ಫೂರ್ತಿಗೊಂಡು ಒಕ್ಕಲಿಗರ ಸಂಘಕ್ಕೆ ಅವರು ಹಾಕಿದ ಅಡಿಗಲ್ಲು, ಬೆಳೆದು ಹೆಮ್ಮರವಾಗಿದೆ. ಸಮಾಜವನ್ನು ಚಲನಶೀಲರಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇವತ್ತು ಭೂಮಿ ಪೂಜೆ ನಡೆಸಿದ ಸಮುದಾಯ ಭವನ ಒಂದು ವರ್ಷದೊಳಗೆ ಪೂರ್ಣಗೊಂಡು ಸಮಾಜದ ಅನುಕೂಲಕ್ಕೆ ಸಿಗಲಿ. ವಿದ್ಯಾರ್ಥಿ ನಿಲಯ ಕೂಡ ಆಗಬೇಕೆಂಬ ಸಲಹೆ ಗಮನದಲ್ಲಿದ್ದು, ಅದಕ್ಕೂ 25 ಎಕರೆ ಜಾಗದಲ್ಲಿ ಸುಸಜ್ಜಿತ ಬಿಎಡ್ ಕಾಲೇಜ್ ಮತ್ತು ವಿದ್ಯಾರ್ಥಿ ನಿಲಯ ಆಗುವುದಿದೆ. ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂದು ಯಡಿಯೂರಪ್ಪ ಪ್ರಯತ್ನದಿಂದ ಕೆಂಪೇಗೌಡರ ಹೆಸರು ಇಡಲಾಯಿತು. ಈಗ ಅಲ್ಲೇ 25 ಎಕರೆ ಜಾಗದಲ್ಲಿ 108 ಅಡಿಯ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಿ ಪ್ರಧಾನಿಯವರು ನ. 11 ರಂದು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಎಲ್ಲ ಸಮುದಾಯದವರು ಭಾಗವಹಿಸಬೇಕು ಎಂದರು.
ಹಿಂದೆ ಬಿಎಸ್‌ವೈ ಸಲಹೆ ಕೇಳಿ ಚಿಕ್ಕಬಳ್ಳಾಪುರದ ಶಾಖಾ ಮಠಕ್ಕೆ ಬಂದಿದ್ದರು. ಆಗ ಬೇಸಿಕ್ ಸೈನ್ಸ್ ಬಗ್ಗೆ ಗಮನಸೆಳೆದಿದ್ದೆ. ತಕ್ಷಣ 250 ಕೋಟಿ ರು. ಬಜೆಟ್‌ನಲ್ಲಿ ತೆಗೆದಿಟ್ಟರು. ಕೆರೆ ಜೀರ್ಣೋದ್ಧಾರ ಮಾಡಿದ್ದಲ್ಲಿ 20 ಸಾವಿರ ಒಕ್ಕಲಿಗ ಯುವಕರು ಕೃಷಿಯನ್ನೇ ಅವಲಂಬಿಸಿ ಊರಲ್ಲೇ ಇರುತ್ತಾರೆ ಎಂದು ಹೇಳಿದಾಗ ಕೆರೆ ಅಭಿವೃದ್ಧಿ ಕೂಡ ಕೆಲವೇ ದಿನಗಳಲ್ಲಿ ಮಾಡಿದ್ದರು. ಈ ರೀತಿ ಅನೇಕ ಅನುದಾನಗಳನ್ನು ಒಕ್ಕಲಿಗ ಸಮುದಾಯಕ್ಕೆ ನೀಡುತ್ತಾ ಬಂದಿದ್ದಾರೆ. ಅವರನ್ನು ಸಮಾಜದ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಶ್ರೀ ಪ್ರಸನ್ನಾನಂದನಾಥ ಸ್ವಾಮೀಜಿ ಮಾತನಾಡಿ, ಸಮುದಾಯ ಭವನಕ್ಕೆ ಸಂಸದ ಬಿ.ವೈ. ರಾಘವೇಂದ್ರ 5 ಕೋಟಿ ರು. ಅನುದಾನ ನೀಡಿದ್ದಾರೆ. ಮಠದ ಸೇವೆಯಲ್ಲಿ ನಿರಂತರ ಭಾಗಿಯಾಗಿ ಎಲ್ಲಾ ಸಮಾಜಕ್ಕೆ ಪ್ರೀತಿ ಪಾತ್ರರಾಗಿದ್ದಾರೆ. ಹೆಸರು ಉಳಿಯಬೇಕಾದರೆ ದಾನ ಮಾಡಬೇಕು. ದಾನ ಮಾತ್ರ ಶಾಶ್ವತ. ಸಮುದಾಯ ಭವನದ ಕಾಮಗಾರಿ ವೇಗವಾಗಿ ಸಾಗಲು ಸಮಾಜದ ಎಲ್ಲರೂ ಸಹಕಾರ ನೀಡಬೇಕು ಎಂದರು.
OBC ವಿರಾಟ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಯಡಿಯೂರಪ್ಪ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್, ಸಂಸದ ಬಿ.ವೈ. ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಅಶೋಕ್ ನಾಯ್ಕ…, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮೇಯರ್ ಶಿವಕುಮಾರ್, ಪವಿತ್ರಾ ರಾಮಯ್ಯ, ಬಿ.ಎ. ರಮೇಶ್ ಹೆಗ್ಡೆ, ಸುವರ್ಣಾ ಶಂಕರ್, ಯಮುನಾ ರಂಗೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಾಂತ್, ಚೇತನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್, ಎಚ್.ಎಸ್. ಸುಂದರೇಶ್ ಮತ್ತಿತರರು ಇದ್ದರು.