Udupi ಪೇಜಾವರ ವಿಶ್ವೇಶ ತೀರ್ಥರ ನೆನಪಲ್ಲಿ ಸ್ಮೃತಿವನ

By Suvarna News  |  First Published May 13, 2022, 3:09 PM IST

ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಕೀರ್ತಿಶೇಷ  ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ಉಡುಪಿ ಜಿಲ್ಲೆಯ ನೀಲಾವರ ಗ್ರಾಮದಲ್ಲಿ ಸ್ಮೃತಿ ವನ ನಿರ್ಮಿಸಲಾಗುತ್ತಿದೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಮೇ.13): ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಕೀರ್ತಿಶೇಷ  ವಿಶ್ವೇಶ ತೀರ್ಥ ಶ್ರೀಪಾದರ (Sri Vishwesha Theertha) ಸ್ಮರಣಾರ್ಥ ಉಡುಪಿ ಜಿಲ್ಲೆಯ ನೀಲಾವರ ಗ್ರಾಮದಲ್ಲಿ ( ಗೋಶಾಲೆ ಸಮೀಪ ) ಸ್ಮೃತಿ ವನ ನಿರ್ಮಿಸಲಾಗುತ್ತಿದೆ. ಪರಿಸರದ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದ ವಿಶ್ವೇಶತೀರ್ಥರ ಹೆಸರಲ್ಲಿ ಈ ಸ್ಮೃತಿವನ ನಿರ್ಮಾಣವಾಗುತ್ತಿರುವುದು ಪರಿಸರ ಪ್ರಿಯರಲ್ಲಿ ಹರ್ಷ ಮೂಡಿಸಿದೆ. 

Latest Videos

undefined

 ಬಿ ಎಸ್ ಯಡಿಯೂರಪ್ಪನವರು   ಮುಖ್ಯಮಂತ್ರಿಗಳಾಗಿದ್ದಾಗ  ವಿಶ್ವೇಶತೀರ್ಥ ಶ್ರೀಪಾದರು ಮತ್ತು ತುಮಕೂರಿನ ಡಾ ಸಿದ್ಧಗಂಗಾ ಸ್ವಾಮೀಜಿಯವರ ಹೆಸರಲ್ಲಿ ಸ್ಮೃತಿ ವನ ನಿರ್ಮಾಣಕ್ಕಾಗಿ ತಲಾ ಎರಡು ಕೋಟಿ ರೂಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದರು.

ನಂತರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು , ಅರಣ್ಯ ಮಂತ್ರಿ ಉಮೇಶ ಕತ್ತಿಯವರು ಹಾಗೂ ಶಾಸಕ ರಘುಪತಿ ಭಟ್ಟರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಇದೀಗ  ಅರಣ್ಯ ಇಲಾಖೆಯ ಮೂಲಕ ಇದರ ಅನುಷ್ಠಾನವಾಗುತ್ತಿದೆ. 

TEACHER RECRUITMENT EXAM 2022 ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

ಗೋಶಾಲೆ ಸಮೀಪವೇ ಭೂಮಿ ಲಭಿಸಿತು!
ಬಹಳ ಅಚ್ಚರಿಯ ಸಂಗತಿ ಎಂದರೆ ಇದಕ್ಕೆ ಅವಶ್ಯವಿದ್ದ ಭೂಮಿಗಾಗಿ ಅರಣ್ಯ ಇಲಾಖೆ ಜಿಲ್ಲೆಯ ಕೆಲವೆಡೆ ಸರ್ಕಾರಿ ಭೂಮಿ ಹುಡುಕಾಟದಲ್ಲಿತ್ತು. ಆದರೆ ವಿಶ್ವೇಶತೀರ್ಥರ ಶಿಷ್ಯರು ಹಾಗೂ ಹಾಲಿ ಪೇಜಾವರ ಮಠಾಧೀಶರಾದ  ವಿಶ್ವಪ್ರಸನ್ನ ತೀರ್ಥರಿಗೆ ಇದು ನೀಲಾವರ ಗೋಶಾಲೆಯ ಆಸುಪಾಸಿನಲ್ಲೇ ನಿರ್ಮಾಣವಾದರೆ ಗೋಶಾಲೆಯನ್ನು ನೋಡಲು ಬರುವವರಿಗೆ ಸ್ಮೃತಿ ವನವನ್ನೂ ನೋಡುವ ಅವಕಾಶ ಸಿಗುತ್ತದೆ. ಇದೊಂದು  ಪ್ರೇಕ್ಷಣೀಯ ಸ್ಥಳವಾಗ್ತದೆ ಮತ್ತು ನಿರ್ವಹಣೆಯೂ ಸುಲಭವಾಗ್ತದೆ ಎಂಬ ಯೋಚನೆ ಇತ್ತು .ಅಚ್ಚರಿ ಎಂದರೆ ಈ ಚಿಂತನೆಯಂತೆ ಇದೀಗ ನೀಲಾವರ ಗೋಶಾಲೆಗೆ ತಾಗಿಕೊಂಡೇ ಇರುವ ಎರಡು ಎಕ್ರೆ ಸರ್ಕಾರಿ ಭೂಮಿಯೇ ಒದಗಿ ಬಂದಿದೆ. ಇದು ವಿಶ್ವೇಶತೀರ್ಥರ ಶಿಷ್ಯರಲ್ಲಿ ಸಂತಸವನ್ನುಂಟು ಮಾಡಿದೆ.

ಹೇಗಿದೆ ಗೊತ್ತಾ ಸ್ಮೃತಿವನ?
ಈಗಾಗಲೇ ಸುಂದರವಾದ ಸ್ಮೃತಿ ವನದ ನೀಲನಕಾಶೆ ಸಿದ್ಧವಾಗಿದ್ದು ಈ ಸ್ಮೃತಿ ವನಕ್ಕೆ ಸಾಂಪ್ರದಾಯಿಕ ಮುಖದ್ವಾರ ಮಧ್ಯಭಾಗದಲ್ಲಿ  ವಿಶ್ವೇಶತೀರ್ಥರ ಕುಳಿತ ಭಂಗಿಯ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ , ಅದರ ಮುಂಭಾಗ ಪ್ರವಚನ ವಿಚಾರಗೋಷ್ಠಿ ಇತ್ಯಾದಿ ನಡೆಸಲು ಅನುಕೂಲವಾಗುವಂತೆ ಒಂದು ವೇದಿಕೆ , ಹಿಂಭಾಗದಲ್ಲಿ ಗ್ರೀನ್ ರೂಮ್ , ಇದರ ಸುತ್ತಲೂ ಪ್ರೇಕ್ಷಕರು ಕುಳಿತು ಕೊಳ್ಳಲು ಸ್ಟೇಡಿಯಂ ರೀತಿ ಮೆಟ್ಟಿಲುಗಳು , ವಾಕಿಂಗ್ ಟ್ರ್ಯಾಕ್ , ಗ್ಯಾಲರಿ ಮತ್ತು ಉಳಿದಂತೆ ಮಕ್ಕಳ ಆಟದ ವಿಭಾಗ , ನಾಲ್ಕು ಕಡೆಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಕುಟೀರಗಳು  ಮತ್ತು ಔಷಧೀಯ ಸಸ್ಯಗಳು ಹೂವಿನ ಹಾಗೂ ಹಣ್ಣಿನ ಮರಗಳುಳ್ಳ ವನ ನಿರ್ಮಾಣವಾಗಲಿದೆ.

MRPL RECRUITMENT 2022: ಎಂಜಿನಿಯರ್ ಓದಿರುವವರಿಗೆ ಸುವರ್ಣಾವಕಾಶ

ಸ್ವಾಮೀಜಿಯವರ ಸೂಚನೆಯಂತೆ ಈಗ ಇರುವ ಮರಗಳು ಮತ್ತು ಪ್ರಾಕೃತಿಕ ಪರಿಸರವನ್ನು ಗರಿಷ್ಟ ಮಟ್ಡದಲ್ಲಿ ಉಳಿಸಿಕೊಂಡು ಅಕೇಶಿಯಾ ಮೊದಲಾದ ಅನವಶ್ಯಕ ಮರಗಳನ್ನು ತೆರವುಗೊಳಿಸಿ ಅಗತ್ಯ ಇರುವಷ್ಟು ಮಾತ್ರ ನಿರ್ಮಿತಿಗಳನ್ನು ಕರಾವಳಿಯ ಶೈಲಿಯಲ್ಲಿ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ . 

ಉಡುಪಿ ಜಿಲ್ಲೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ಭಾಗದಲ್ಲಿ ಈ ಸ್ಮೃತಿ ವನ ಒಂದು ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ.‌ ಜಿಲ್ಲೆಯ ಪ್ರವಾಸೋದ್ಯಮದ ನೆಲೆಯಲ್ಲೂ ಸರ್ಕಾರದಿಂದ  ಮಹತ್ವದ ಕೊಡುಗೆಯಾಗುತ್ತಿದೆ .

ಪೇಜಾವರ ಮಠದ ವಿಶ್ವೇಶ ತೀರ್ಥರ ವೃಂದಾವನ ನಿರ್ಮಾಣವಾಗಿಲ್ಲ ಎಂದು ಹಲವು ಭಕ್ತರಲ್ಲಿ ಬೇಸರವಿತ್ತು.‌ ಆದರೆ ಈ ಸ್ಮೃತಿ ವನದ ಮೂಲಕ ಭಕ್ತರ ನೋವು ಮಾಯವಾಗಿದೆ. ತಾವು ಬದುಕಿದ್ದಾಗ ಹಲವಾರು ಪರಿಸರ ಹೋರಾಟಗಳಲ್ಲಿ ವಿಶ್ವೇಶತೀರ್ಥರು ಭಾಗವಹಿಸಿದ್ದರು. ಇನ್ನು ಮುಂದೆ ಸ್ಮೃತಿ ವನದಲ್ಲಿ ಶ್ರೀಪಾದರ ನೆನಪುಗಳನ್ನು ಮೆಲುಕು ಹಾಕಲು ಪ್ರಕೃತಿ ಪ್ರಿಯರಿಗೆ ಅವಕಾಶ ಸಿಕ್ಕಂತಾಗಿದೆ.

click me!