
ಚಿಕ್ಕಮಗಳೂರು (ನ.14): ದತ್ತಪೀಠದ ಮುಕ್ತಿಗಾಗಿ ಬಿಜೆಪಿ ತೋರುತ್ತಿರುವ ಮೃದುಧೋರಣೆ ವಿರುದ್ಧ ಮತ್ತು ದತ್ತಪೀಠದ ಹೋರಾಟದಿಂದ ರಾಜಕೀಯದಲ್ಲಿ ಬೆಳವಣಿಗೆ ಕಂಡಿರುವ ಸಚಿವ ವಿ. ಸುನೀಲ್‌ಕುಮಾರ್ ಹಾಗೂ ಶಾಸಕ ಸಿ.ಟಿ.ರವಿ ನಡೆಗೆ ಶ್ರೀರಾಮ ಸೇನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ದತ್ತಮಾಲಾ ಅಭಿಯಾನ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಭಾನುವಾರ ಶೋಭಾಯಾತ್ರೆಗೂ ಮುನ್ನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ದತ್ತಪೀಠದ ಮುಕ್ತಿಗೆ ನಡೆದ ಹೋರಾಟದಿಂದ ಕೆಲವರು ರಾಜಕೀಯವಾಗಿ ಪ್ರಯೋಜನ ಪಡೆದಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈ ಕೆಲಸ ಆಗಿಲ್ಲ, ರಾಜ್ಯ ಸರ್ಕಾರದ ನಿರ್ಲಕ್ಷ ಧೋರಣೆ ನೋಡಿದರೆ ಸಿಟ್ಟು, ಆಕ್ರೋಶ ಬರುತ್ತಿದೆ ಎಂದರು. ನೀವು ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಇದೆ ಎಂಬುದನ್ನು ಮರೆಯಬೇಡಿ. ಇವರ ಶಾಪ ನಿಮಗೆ ತಟ್ಟಿದರೆ ಎಲ್ಲಿ ಇರ್ತೀರಾ? ಸಿ.ಟಿ.ರವಿ ಶಾಸಕರಾಗಲು ದತ್ತಾತ್ರೇಯ ಕೃಪೆ ಇದೆ ಎಂದು ಹೇಳಿದರು. ದತ್ತಪೀಠಕ್ಕೆ ಪ್ರತಿದಿನ ನಂಬರ್ ಪ್ಲೇಟ್ ಇಲ್ಲದ ಮುಸ್ಲಿಂ ವಾಹನಗಳು ಹೋಗುತ್ತಿವೆ. ಪೀಠದ ಬಳಿ ಮಾಂಸದೂಟ ಸಿದ್ಧಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ವಿಷಯ ಶ್ರೀರಾಮ ಸೇನೆ, ಭಜರಂಗದಳ, ವಿಶ್ವ ಹಿಂದೂ ಪರಿಷತ್ತು ಗಮನಕ್ಕೆ ಬರುತ್ತದೆ. ಚಿಕ್ಕಮಗಳೂರಿನ ಶಾಸಕರಾದ ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದ ಅವರು, ಈ ಹೋರಾಟವನ್ನು ಜೀವಂತವಾಗಿಡುವುದು ತಪ್ಪು ಎಂದು ಅಭಿಪ್ರಾಯಪಟ್ಟರು.
ಹಿಂದುತ್ವ ಟೀಕಿಸುವವರು ಸೂರ್ಯನಿಗೆ ಉಗಿದ ಹಾಗೆ: ಮುತಾಲಿಕ್
ಅಯೋಧ್ಯೆಯ ಹೋರಾಟ 500 ವರ್ಷಗಳ ಕಾಲ ನಡೆಯಿತು. ದತ್ತಪೀಠದ ಹೋರಾಟವನ್ನು ಸಹ 500 ವರ್ಷ ತೆಗೆದುಕೊಂಡು ಹೋಗುತ್ತೇನೆಂದು ಹೇಳುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ಅಧಿಕಾರಕ್ಕೆ ಬಂದಾಗಲೇ ಈ ಕೆಲಸ ಮಾಡಬಹುದಾಗಿತ್ತು. ಅರ್ಚಕರನ್ನು ನೇಮಕ ಮಾಡಿ, ಸಮಸ್ಯೆಯನ್ನು ನಿಮ್ಮ ಹಂತದಲ್ಲೇ ಬಗೆಹರಿಸಿ ಎಂದು ಕೋರ್ಚ್ ಹೇಳಿದೆ. 24 ಗಂಟೆಯೊಳಗೆ ಈ ಕೆಲಸ ಮಾಡಲು ನಿಮಗೇನಾಗಿತ್ತು ಎಂದು ಪ್ರಶ್ನಿಸಿದರು. ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರನ್ನು ಒಂದೆಡೆ ಕೂರಿಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದು ದೊಡ್ಡ ಕೆಲಸವಲ್ಲ. ಈ ಇಚ್ಛಾಶಕ್ತಿ ನಿಮಗೆ ಇಲ್ಲ, ಬರೀ ರಾಜಕೀಯ ನಾಟಕ ಆಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸುನೀಲ್‌ಕುಮಾರ್ ಅವರೇ, ನೀವು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದು, ಸಚಿವರಾಗಿದ್ದು ಈ ಹೋರಾಟದಿಂದ. ಹಿಂದೂತ್ವಕ್ಕಾಗಿ ರಾಜಕೀಯಬೇಕು, ರಾಜಕೀಯಕ್ಕಾಗಿ ಹಿಂದೂತ್ವ ಅಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದೂ ಕಾರ್ಯಕರ್ತರು ಗೆದ್ದು, ರಾಜಕೀಯ ಶಕ್ತಿ ಪಡೆದು ಬರುತ್ತೇವೆ. ಕೊನೆ ಉಸಿರು ಇರುವವರೆಗೆ ಹೋರಾಟ ಮಾಡುತ್ತೇವೆ ಎಂದರು. ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದತ್ತಮಾಲೆ ಧರಿಸಿ ಬರುತ್ತೇನೆ. ಈ ವಿವಾದ ಬಗೆಹರಿಸುತ್ತೇನೆಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಹೇಳಿದಂತೆ ಅವರು ನಡೆದುಕೊಂಡಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಮಸ್ಯೆ ಜೀವಂತವಾಗಿದೆ. ಇದು, ನಾಚಿಕೆಗೇಡಿನ ನಡೆ ಎಂದು ಹೇಳಿದರು.
ಸರ್ಕಾರ ನಿರ್ಲಕ್ಷ ತೋರಿದರೆ ಅಯೋಧ್ಯೆಯಲ್ಲಾದ ಪಾಠವನ್ನು ದತ್ತಪೀಠದಲ್ಲಿ ಕಲಿಸಬೇಕಾಗುತ್ತದೆ. ನಿಮ್ಮ ನಾಟಕ ಬಂದ್ ಮಾಡಿ ಅರ್ಚಕರನ್ನು ನೇಮಿಸಿ. ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಟ್ಟು, ನಾಗೇನಹಳ್ಳಿಯಲ್ಲಿರುವ ದರ್ಗಾದ ಪ್ರದೇಶವನ್ನು ಮುಸ್ಲಿಮರಿಗೆ ಒಪ್ಪಿಸಬೇಕು ಎಂದು ಹೇಳಿದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಮಹೇಶ್ ಕಟ್ಟಿನಮನೆ ಮಾತನಾಡಿ, ದತ್ತಪೀಠದ ಹೋರಾಟವನ್ನು ಬಿಜೆಪಿಯವರು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಂಡರು. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಂಗ್ಲಾ ನುಸುಳುಕೋರರನ್ನು ವಾಪಸ್ ಕಳುಹಿಸುವ ಕೆಲಸ ಆಗಬೇಕು. ಇಲ್ಲದೇ ಹೋದರೆ, ಸಂಘಟನೆಯಿಂದ ಈ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್ ಮುತಾಲಿಕ್
ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಈಶ್ವರಗೌಡ ಪಾಟೀಲ್, ಬಸವರಾಜ್ ಗಾಯಕ್‌ವಾಡ್, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿಅಡ್ಡಿಯಾರ್, ಸಿದ್ಧಾರ್ಥ ಸ್ವಾಮೀಜಿ, ರಾಜೇಂದ್ರ ಗುರೂಜಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಉಪಸ್ಥಿತರಿದ್ದರು. ಬಳಿಕ ಶೋಭಾಯಾತ್ರೆ ಆರಂಭಗೊಂಡು, ಬಸವನಹಳ್ಳಿ ಮುಖ್ಯ ರಸ್ತೆಯಿಂದ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಆಜಾದ್ ಪಾರ್ಕ್ ತಲುಪಿತು.