
ದಾವಣಗೆರೆ: ಬೆಳಗಾವಿಯ ನಂತರ ಇದೀಗ ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು ವರದಿಯಾಗಿದ್ದು, ಅರಣ್ಯ ಇಲಾಖೆ ಹಾಗೂ ಪ್ರಾಣಿ ವೈದ್ಯಕೀಯ ತಜ್ಞರಲ್ಲಿ ಆತಂಕ ಮೂಡಿಸಿದೆ. ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಸಸ್ಯೋದ್ಯಾನದಲ್ಲಿರುವ ಈ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ.
ಲಭ್ಯವಾದ ಮಾಹಿತಿಯಂತೆ, ಜನವರಿ 16ರಂದು ಒಂದು ಚುಕ್ಕೆ ಜಿಂಕೆ, ಜನವರಿ 17ರಂದು ಎರಡು ಜಿಂಕೆಗಳು ಹಾಗೂ ಜನವರಿ 18ರಂದು ಮತ್ತೊಂದು ಜಿಂಕೆ ಸಾವನ್ನಪ್ಪಿದೆ. ಕಿರು ಮೃಗಾಲಯದಲ್ಲಿ ಪ್ರಸ್ತುತ 94 ಹೆಣ್ಣು, 58 ಗಂಡು ಹಾಗೂ 18 ಮರಿ ಸೇರಿ ಒಟ್ಟು 170 ಚುಕ್ಕೆ ಜಿಂಕೆಗಳು ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಚುಕ್ಕೆ ಜಿಂಕೆಗಳ ಸಾವಿಗೆ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ ಜಿಂಕೆಗಳಿಗೆ ತಕ್ಷಣವೇ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ರೋಗದ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಕಿರು ಮೃಗಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕಿರು ಮೃಗಾಲಯದ 15 ಎಕರೆ ವ್ಯಾಪ್ತಿಯಲ್ಲಿರುವ ಸಂಪೂರ್ಣ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸ್ಯಾನಿಟೈಸೇಷನ್ ಕಾರ್ಯ ಕೈಗೊಳ್ಳಲಾಗಿದೆ. ಜೊತೆಗೆ ಇನ್ನುಳಿದ 166 ಚುಕ್ಕೆ ಜಿಂಕೆಗಳು ಹಾಗೂ 27 ಕೃಷ್ಣಮೃಗಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಚುಕ್ಕೆ ಜಿಂಕೆಗಳ ಆರೋಗ್ಯ ಸ್ಥಿತಿ ಪರಿಶೀಲನೆಗಾಗಿ ಬೆಂಗಳೂರು ಹಾಗೂ ಬೆಳಗಾವಿಯಿಂದ ವಿಶೇಷ ಪಶುವೈದ್ಯರ ತಂಡ ದಾವಣಗೆರೆಗೆ ಆಗಮಿಸಿದ್ದು, ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯರ ಸಲಹೆಯಂತೆ ರೋಗ ನಿರೋಧಕ ಔಷಧಿಗಳನ್ನು ಸಿದ್ಧಪಡಿಸಿ ಜಿಂಕೆಗಳಿಗೆ ನೀಡಲಾಗುತ್ತಿದೆ.
ಈಗಾಗಲೇ ಸಾವನ್ನಪ್ಪಿದ ಚುಕ್ಕೆ ಜಿಂಕೆಗಳ ರಕ್ತದ ಮಾದರಿ ಹಾಗೂ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಲ್ಯಾಬ್ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಓ) ಹರ್ಷವರ್ಧನ, “ರೋಗ ಹರಡುವ ಭೀತಿ ಹಿನ್ನೆಲೆ ಮುಂದಿನ ಆದೇಶದವರೆಗೂ ಮೃಗಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ಮುಚ್ಚಲಾಗಿದೆ. 170 ಚುಕ್ಕೆ ಜಿಂಕೆಗಳಲ್ಲಿ ನಾಲ್ಕು ಮೃತಪಟ್ಟಿದ್ದು, ಉಳಿದ ಜಿಂಕೆಗಳನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಇಲಾಖೆಯ ಮಾರ್ಗಸೂಚಿಯಂತೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ,” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ದಾವಣಗೆರೆಯ ಕಿರು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು ಪ್ರಕರಣ ಅರಣ್ಯ ಇಲಾಖೆ ಮತ್ತು ಪ್ರಾಣಿ ಆರೋಗ್ಯ ತಜ್ಞರಲ್ಲಿ ಗಂಭೀರ ಚಿಂತೆಗೆ ಕಾರಣವಾಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.