ಬೆಂಗಳೂರಿಗೆ ಟಕ್ಕರ್ ಕೊಡೋಕೆ ಹೋಗಿ ಕೇಂದ್ರದಿಂದ ಮತ್ತೆ ಛೀಮಾರಿ ಹಾಕಿಸಿಕೊಂಡ ತಮಿಳುನಾಡು

Published : Jan 19, 2026, 02:58 PM IST
Tamilunadu new airport proposal

ಸಾರಾಂಶ

Karnataka Vs Tamlinadu: ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಈ ಹಿಂದೆಯೇ ಉಡಾನ್‌ ಪಟ್ಟಿಯಿಂದ ಕೈಬಿಡಲಾಗಿತ್ತು.

ನವದೆಹಲಿ: ಕರ್ನಾಟಕದ ಗಡಿಯ ಹೊಸೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಆ ಪ್ರದೇಶ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ವ್ಯಾಪ್ತಿಗೆ ಒಳಪಡುವುದರಿಂದ, ಅದರ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಎಂಬ ಕಾರಣ ನೀಡಲಾಗಿದೆ. ಈ ಮೊದಲು, ಬೆಂಗಳೂರು ವಿಮಾನ ನಿಲ್ದಾಣದಿಂದ ಅದು 150 ಕಿ.ಮೀ.ಗಿಂತ ಸಮೀಪವಿದೆ ಎಂಬ ಕಾರಣ ನೀಡಿ ಉಡಾನ್‌ ಪಟ್ಟಿಯಿಂದ ಕೈಬಿಡಲಾಗಿತ್ತು.

ರಾಷ್ಟ್ರೀಯ ಭದ್ರತೆಗೂ ಅಪಾಯ ಉಂಟಾಗುವ ಸಾಧ್ಯತೆ

ಭಾರತೀಯ ರಕ್ಷಣಾ ಉತ್ಪಾದಕ ಕಂಪನಿಯಾಗಿರುವ ಎಚ್‌ಎಎಲ್‌, ಆ ವಾಯುಪ್ರದೇಶವನ್ನು ಹಾರಾಟ ಪರೀಕ್ಷೆ, ತರಬೇತಿಯಂತಹ ಕೆಲಸಗಳಿಗೆ ಬಳಸುತ್ತದೆ. ಹೀಗಿರುವಾಗ ಹೊಸೂರಿನಲ್ಲಿ ನಾಗರಿಕ ವಿಮಾನಗಳ ಹಾರಾಟ ಆರಂಭವಾದರೆ, ಇವುಗಳಿಗೆ ಅಡಚಣೆಯಾಗುತ್ತದೆ. ಜತೆಗೆ, ರಾಷ್ಟ್ರೀಯ ಭದ್ರತೆಗೂ ಅಪಾಯ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ ಎಂಬ ಕಾರಣ ನೀಡಲಾಗಿದೆ.

ಆದರೆ ರಕ್ಷಣಾ ಸಚಿವಾಲಯದ ತಿರಸ್ಕಾರದ ಹೊರತಾಗಿಯೂ ಸುಮ್ಮನಾಗದ ತಮಿಳುನಾಡು ಸರ್ಕಾರ ಈ ಕುರಿತು ಕೇಂದ್ರದ ಮುಂದೆ ಮೇಲ್ಮನವಿ ಸಲ್ಲಿಸುವ ಅಥವಾ ಏರ್‌ಪೋರ್ಟ್‌ ನಿರ್ಮಾಣಕ್ಕೆ ಪರ್ಯಾಯ ಸ್ಥಳವನ್ನು ಹುಡುಕುವ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್ ಸಿಟಿಯಲ್ಲಿ ಬಿಸಿನೆಸ್ ಪಾರ್ಕ್ ತೆರೆಯಲು ಸಜ್ಜಾದ ಬಿಎಸಿಎಲ್‌: 5 ಲಕ್ಷ ಉದ್ಯೋಗ ಸೃಷ್ಟಿ!

2ನೇ ಬಾರಿ ತಿರಸ್ಕಾರ

ಎಚ್‌ಎಎಲ್‌ನ ವಾಯುಪ್ರದೇಶವನ್ನು ಬಳಸಲು ಅನುಮತಿ ಕಲ್ಪಿಸುವಂತೆ ತಮಿಳುನಾಡು ಸರ್ಕಾರ 2025ರ ಜೂನ್‌ನಲ್ಲಿ ಮನವಿ ಮಾಡಿದ್ದು, ಅದನ್ನು ತಿರಸ್ಕರಿಸಲಾಗಿತ್ತು. ಬಳಿಕ ಮತ್ತೆ ನವೆಂಬರ್‌ನಲ್ಲಿ, ಎಚ್‌ಎಎಲ್‌ನ ಕಾರ್ಯಾಚರಣೆಗಳಿಗೆ ಅಡಚಣೆಯಾಗದಂತೆ ಕಾರ್ಯಾಚರಿಸುವ ಭರವಸೆಯೊಂದಿಗೆ ವಿಸ್ತೃತ ಮನವಿ ಸಲ್ಲಿಕೆ ಮಾಡಿತ್ತು. ಅದನ್ನೂ ಈಗ ರಕ್ಷಣಾ ಸಚಿವಾಲಯ ತಿರಸ್ಕಾರ ಮಾಡಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಅಧಿಕಾರಿಗಳು, ‘ಮಾತುಕತೆಗೂ ಅವಕಾಶ ಕೊಡದೆ ಅನುಮತಿ ನಿರಾಕರಿಸಿರುವುದು ನಿರಾಶಾದಾಯಕ’ ಎಂದಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಆಸೆಗೆ ಬ್ರೇಕ್‌, ಕೇಂದ್ರದ ಉಡಾನ್‌ ಪಟ್ಟಿಯಿಂದ ಹೊರಕ್ಕೆ! ಕಾರಣ ಬೆಂಗಳೂರು ವಿಮಾನ ನಿಲ್ದಾಣ

PREV
Read more Articles on
click me!

Recommended Stories

ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!